ಶೋಷಣೆಯಿಂದ ಹೆಣ್ಣು ಮುಕ್ತಳಾಗಲಿ
ಬೆಂಗಳೂರು: ಹೆಣ್ಣು ಮೌಢ್ಯದ ಸಂಕೋಲೆಯಲ್ಲಿ ಬಂಧಿಯಾಗಿದ್ದಾಳೆ. ಇವಳ ಮೇಲೆ ಸಮಾಜದಲ್ಲಿ ಶೋಷಣೆ ನಡೆಯುತ್ತಲೇ ಇದೆ. ಇದನ್ನು ಮೀರಿ ಹೆಣ್ಣು ಬೆಳೆಯಬೇಕು ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ. ವಸುಂಧರಾ ಭೂಪತಿ ಹೇಳಿದರು. ನವಕರ್ನಾಟಕ ಪ್ರಕಾಶನ ಪ್ರಕಟಿಸಿರುವ ಆರು ವೈಚಾರಿಕ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಭಾನುವಾರ ಅವರು ಮಾತನಾಡಿದರು.
ಎಲ್ಲ ಅನಿಷ್ಟಗಳಿಗೂ ಹೆಣ್ಣನ್ನೇ ಹೊಣೆಯಾಗಿಸುತ್ತಾರೆ. ಅವಳ ಬುದ್ಧಿಯೆಂದರೆ ಮೊಣಕಾಲ ಕೆಳಗೆ ಎಂದು ಆರೋಪಿಸುತ್ತಾರೆ. ಜೊತೆಗೆ ಹಂಗಿಸುವುದು ತಪ್ಪಿಲ್ಲ. ಇವೆಲ್ಲದರಿಂದ ಹೊರಬರುವ ಚಿತ್ರಣವನ್ನು ತಮ್ಮ 'ಮಹಿಳೆ ಮತ್ತು ಮೌಢ್ಯ' ಪುಸ್ತಕದಲ್ಲಿ ಕೊಟ್ಟಿರುವುದಾಗಿ ಭೂಪತಿ ಹೇಳಿದರು.