ಕರವೇ ಹಣ್ಣು-ಹಂಪಲು ವಿತರಣೆ
ದೊಡ್ಡಬಳ್ಳಾಪುರ: ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರ ಹುಟ್ಟುಹಬ್ಬದ ಪ್ರಯುಕ್ತ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ ಕಾರ್ಯಕ್ರಮ ಮಂಗಳವಾರ ಬೆಳಗ್ಗೆ ನಡೆಯಿತು.ಕಾರ್ಯಕ್ರಮದ ವೇಳೆ ಮಾತನಾಡಿದ ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರಾದ ಟಿ.ಜಿ. ಮಂಜುನಾಥ್ ಮತ್ತು ಡಿ.ಎನ್.ಮಂಜುನಾಥ್, ರಾಜ್ಯದಲ್ಲಿ ನೆಲ-ಜಲ ಮತ್ತು ಭಾಷೆಯ ಜ್ವಲಂತ ಸಮಸ್ಯೆಗಳು ಬಂದಾಗ ಕನ್ನಡಿಗರ ಸಮಗ್ರ ದನಿಯಾಗಿ ರಕ್ಷಣಾ ವೇದಿಕೆ ದನಿಯೆತ್ತುವ ಕೆಲಸ ಮಾಡುತ್ತಿದೆ. ಬೆಂಗಳೂರಿನಂತಹ ಪ್ರದೇಶದಲ್ಲಿ ಇಂದು ಕನ್ನಡತನವನ್ನು ಉಳಿಸಿಕೊಂಡಿರುವ ಹಿರಿಮೆ ಸಂಘಟನೆಗಳಿಗೆ ಸಲ್ಲುತ್ತದೆ. ಇಂತಹ ಸಂದರ್ಭದಲ್ಲಿ ಹೋರಾಟದ ಮುಂಚೂಣಿಯಲ್ಲಿ ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟುತ್ತಾ ಬರುತ್ತಿರುವ ನಾರಾಯಣಗೌಡರ ಹೆಸರಿನಲ್ಲಿ ಇಂದು ದಾಖಲೆಯ ರಕ್ತದಾನ ಶಿಬಿರ ನಡೆಯುತ್ತಿದೆ. ಸಾವಿರಾರು ಮಂದಿ ಕಾರ್ಯಕರ್ತರು ಸ್ವಯಂಪ್ರೇರಣೆಯಿಂದ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ರಕ್ತದಾನದಲ್ಲಿ ಪಾಲ್ಗೊಳ್ಳಲಿದ್ದಾರೆ. ದೊಡ್ಡಬಳ್ಳಾಪುರದಿಂದಲೂ ಹತ್ತಾರು ಕಾರ್ಯಕರ್ತರು ರಕ್ತದಾನ ಮಾಡಲು ಬೆಂಗಳೂರಿಗೆ ತೆರಳುತ್ತಿದ್ದೇವೆ ಎಂದರು.ಆಸ್ಪತ್ರೆಯ ವೈದ್ಯಾಧಿಕಾರಿಗಳು, ಕರವೇ ವಿವಿಧ ಘಟಕಗಳ ಮುಖಂಡರು ಮತ್ತು ಕಾರ್ಯಕರ್ತರು ಹಾಜರಿದ್ದರು.
ಧನಂಜಯಗೆ ಹಂಗಾಮಿ ಪಟ್ಟ
ಪಂಚಾಯತ್ರಾಜ್ ಕಾಯ್ದೆಯನ್ವಯ ಜಿಪಂನಲ್ಲಿ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಗಳ ಅವಧಿ ಮೀರಿದಾಗ, ಸ್ಥಾನಗಳು ತೆರವಾದಾಗ ಹಂಗಾಮಿ ಅಧ್ಯಕ್ಷ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರೇ ಹಂಗಾಮಿ ಅಧ್ಯಕ್ಷರಾಗುತ್ತಾರೆ. ಜೆಡಿಎಸ್ನ ಎಂ.ಕೆ.ಧನಂಜಯ ಅವರಿಗೆ ಜೂ.16ಕ್ಕೆ ಹಂಗಾಮಿ ಅಧ್ಯಕ್ಷ ಪಟ್ಟ ಒಲಿಯಲಿದೆ. ಸಾಮಾನ್ಯ ವರ್ಗದ ಮೀಸಲಿನಡಿ ಅಧ್ಯಕ್ಷ ಸ್ಥಾನಕ್ಕೆ ಧನಂಜಯ ಕೂಡ ಆಕಾಂಕ್ಷಿ.
'ಕಲಬುರ್ಗಿ ಸಾಂಸ್ಕೃತಿಕ ಭಯೋತ್ಪಾದಕ'
ದೊಡ್ಡಬಳ್ಳಾಪುರ: ದೇವರಿಗೆ ಕಾಯುವ ಶಕ್ತಿಯೂ ಇಲ್ಲ. ಕಾಪಾಡುವ ಶಕ್ತಿಯೂ ಇಲ್ಲ. ಮೂರ್ತಿಯ ಮೇಲೆ ಮೂತ್ರ ಮಾಡಿದರೂ ತಪ್ಪಿಲ್ಲ ಎಂದು ಹೇಳಿದ್ದ ಹಂಪಿ ವಿಶ್ವ ವಿದ್ಯಾಲಯದ ವಿಶ್ರಾಂತ ಉಪಕುಲಪತಿ, ಹಿರಿಯ ಸಂಶೋಧಕ ಡಾ.ಎಂ.ಎಂ.ಕಲಬುರ್ಗಿ ಅವರ ಹೇಳಿಕೆ ಖಂಡಿಸಿ ಹಿಂದು ಜಾಗರಣ ವೇದಿಕೆ ನೇತೃತ್ವದಲ್ಲಿ ಮಂಗಳವಾರ ಸಂಜೆ ಇಲ್ಲಿನ ಕೊಂಗಾಡಿಯಪ್ಪ ಕೇಂದ್ರ ಬಸ್ ನಿಲ್ದಾಣದ ಶೌಚಾಲಯದ ಮುಂದೆ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನಾಕಾರರು ಡಾ.ಎಂ.ಎಂ.ಕಲಬುರ್ಗಿ ಮತ್ತು ಡಾ.ಯು.ಆರ್.ಅನಂತಮೂರ್ತಿ ಭಾವಚಿತ್ರಗಳ ಮೇಲೆ ಮೂತ್ರ ವಿಸರ್ಜಿಸುವ ಮೂಲಕ ಪ್ರತಿಭಟಿಸಿದರು. ಹಿಂಜಾವೇ ಮುಖಂಡರು ಮಾತನಾಡಿ, ಹಿಂದು ದೇವತೆಗಳನ್ನು ಅವಹೇಳನ ಮಾಡುವುದನ್ನೇ ವೈಚಾರಿಕತೆ ಎಂದು ಭಾವಿಸಿರುವ ಕೆಲ ಮೂಢ ಬುದ್ಧಿಜೀವಿಗಳು ಧಾರ್ಮಿಕ ಭಾವನೆಗಳನ್ನು ಕದಡುವ ಮೂಲಕ ಸಾಮಾಜಿಕ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ. ಕಲಬುರ್ಗಿ ಬಾಯಿಗೆ ಬಂದಂತೆ ಹೇಳಿಕೆ ನೀಡುವ ಮೂಲಕ ಬಹುಸಂಖ್ಯಾತ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಅನಂತಮೂರ್ತಿ ತಮ್ಮ ಪುಸ್ತಕ ಬೆತ್ತಲೆ ಸೇವೆ ಕೂಡದು ಯಾಕೆ ಎಂಬ ಪುಸ್ತಕದಲ್ಲಿ ಬರೆದಿರುವ ಘಟನಾವಳಿಯೊಂದರ ಉಲ್ಲೇಖ ನೀಡುವ ಮೂಲಕ ಅವರ ವಾದವನ್ನು ಸಮರ್ಥಿಸಿಕೊಳ್ಳುವ ಮೂಲಕ ದೇವರ ಅಸ್ತಿತ್ವ ಮತ್ತು ಅದರ ಕುರಿತು ಕೋಟ್ಯಂತರ ಜನಕ್ಕೆ ಇರುವ ಶುದ್ಧ ಭಾವನೆಗೆ ಚ್ಯುತಿ ತರುವ ಕೆಲಸವನ್ನು ಮಾಡಿದ್ದಾರೆ ಎಂದು ಆರೋಪಿಸಿದರು.
ಗಂಭೀರವಾಗಿ ಪರಿಗಣಿಸಿ: ಇಂತಹ ವಿಚ್ಛಿದ್ರಕಾರಿ ಹೇಳಿಕೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಅನಂತಮೂರ್ತಿಯ ಶುದ್ಧಪೊಳ್ಳು ವೈಚಾರಿಕತೆ ಮತ್ತು ಹಿಂದು ವಿರೋಧಿ ನೀತಿ ಖಂಡನೀಯ. ಕೆಲವರು ಹಿಂದುತ್ವವನ್ನು ವಿರೋಧಿಸುವುದೇ ಪ್ರಜ್ಞಾವಂತಿಕೆ ಎಂದು ಕೊಂಡಿರುತ್ತಾರೆ. ಇಂತಹ ಸಂದರ್ಭದಲ್ಲಿ ಪ್ರಜ್ಞಾಪೂರ್ವಕವಾಗಿ ಆಲೋಚಿಸಬೇಕಾದ ಜನ ಈ ಬಗೆಯ ನೀಚ ಹೇಳಿಕೆಗಳನ್ನು ಕೊಡುವುದು ಖಂಡನಾರ್ಹ ಎಂದು ಟೀಕಿಸಿದರು.
ಹಿಂದು ಜಾಗರಣ ವೇದಿಕೆ ಜಿಲ್ಲಾ ಸಂಚಾಲಕ ಅಮರನಾಥ್, ರಘುನಾಥ್, ರವಿ ಮಾವಿನಕುಂಟೆ, ಯಶ್ವಂತ್, ಬಿಜೆಪಿ ಮುಖಂಡ ಗೋಪಿನಾಥ್, ಶಿವಕುಮಾರ್, ಕೆ.ಮೋಹನ್ಕುಮಾರ್, ಸದಾಶಿವು, ಮುರಳಿ ಹಲವರು ಇದ್ದರು.