ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮಕ್ಕಳ ಬಾಲ್ಯ ಕಸಿದುಕೊಳ್ಳಬೇಡಿ

Rashmi Kasaragodu
Updated On : 13 Jun 2014, 2:21 am

ಕ.ಪ್ರ. ವಾರ್ತೆ, ರಾಮನಗರ, ಜೂ.12
ಮಕ್ಕಳ ಬಾಲ್ಯವು ಬಳ್ಳಿಯ ಹೂವಿನಂತಿರುತ್ತದೆ. ಪೋಷಕರು ಮಕ್ಕಳ ನಗು, ಮುಗ್ಧತೆಯನ್ನು ಆನಂದಿಸಬೇಕು. ಅವರನ್ನು ದುಡಿಮೆಗೆ ಹಚ್ಚಿ ಅವರ ಬಾಲ್ಯ ಮತ್ತು ಭವಿಷ್ಯವನ್ನು ಕಸಿದುಕೊಳ್ಳಬಾರದು ಎಂದು ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಎಂ.ಕೆ.ಪ್ರಹ್ಲಾದ ಸೂಚಿಸಿದರು.  
ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾಡಳಿತ, ಜಿಲ್ಲಾ ಕಾರ್ಮಿಕ ಇಲಾಖೆ, ವಕೀಲರ ಸಂಘ, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಸರ್ಕಾರೇತರ ಸಂಸ್ಥೆಗಳ ಒಕ್ಕೂಟದಿಂದ ನಗರದಲ್ಲಿ ಗುರುವಾರ ನಡೆದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.  
ಮಕ್ಕಳ ಮುಗ್ಧತೆ ಪ್ರಕೃತಿಗೆ ಸಮನಾದುದು. ಪ್ರಕೃತಿಯನ್ನು ಆಸ್ವಾದಿಸುವ ನಾವು ನಮ್ಮ ಮಕ್ಕಳ ಬಾಲ್ಯದ ಸಂಭ್ರಮ, ಸಂತಸ, ಖುಷಿಯನ್ನೂ ಕಾಣಬೇಕು. ಬದಲಾಗಿ ಅವರನ್ನು ಬಾಲ್ಯದಲ್ಲಿ ದುಡಿಮೆಗೆ ದೂಡಿ, ಕಷ್ಟ ಅನುಭವಿಸುವುದನ್ನು ನೋಡುವುದು ಎಂತಹ ವಿಪರ್ಯಾಸದ ಕೆಲಸ ಎಂದರು.
ಮಕ್ಕಳ ಹಕ್ಕುಗಳ ರಕ್ಷಣೆ: ಹಿಂದೆ ಮಕ್ಕಳನ್ನು ಶಾಲೆಗೆ ಸೇರಿಸಲು ಇದ್ದಂತಹ ಕಷ್ಟಗಳು ಈಗಿಲ್ಲ. ಮಕ್ಕಳ ಶಿಕ್ಷಣ, ಅವರ ಹಕ್ಕುಗಳ ರಕ್ಷಣೆಗೆ ಸರ್ಕಾರ ಒತ್ತು ನೀಡಿದೆ. ಅದನ್ನೆಲ್ಲ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಎಫ್.ಆರ್.ಜಮಾದಾರ್ ಕರೆ ನೀಡಿದರು. ಶಾಲೆಗೆ ಸೇರುವ ಮಕ್ಕಳಿಗೆ ಉಚಿತ ಶಿಕ್ಷಣ ಪಠ್ಯಪುಸ್ತಕ, ಬ್ಯಾಗ್, ಸಮವಸ್ತ್ರ, ಸೇರಿದಂತೆ ನಾನಾ ಬಗೆಯ ಸವಲತ್ತುಗಳನ್ನು ಸರ್ಕಾರವೇ ನೀಡುತ್ತಿದೆ. ನಾಗರೀಕರು ಎಷ್ಟೇ ಕಷ್ಟ ಇದ್ದರೂ ಸರಿಯೇ ಮಕ್ಕಳನ್ನು ಶಾಲೆಗೆ ಸೇರಿಸುವುದನ್ನು ಮರೆಯಬಾರದು ಎಂದು ಅವರು ಸಲಹೆ ನೀಡಿದರು.  
ಜಿ.ಪಂ. ಸಿಇಒ ಡಾ.ಎಂ.ವಿ.ವೆಂಕಟೇಶ್, ಪ್ರತಿಜ್ಞಾವಿಧಿ ಬೋಧಿಸಿದರು. ಪ್ರಧಾನ ಹಿರಿಯ ನ್ಯಾಯಾಧೀಶ ಎಸ್.ಎಚ್. ಹೊಸಗೌಡರ, ಅಪರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ವಕೀಲರ ಸಂಘದ ಅಧ್ಯಕ್ಷ ಎಂ.ಎಚ್.ಕುಮಾರ್ ಮಾತನಾಡಿದರು.
ಎಂ.ಜಿ.ಮಹೇಶ್, ಚಿಕ್ಕಪ್ಪಾಜಿ, ಟಿ.ಎಂ.ಚಂದ್ರಶೇಖರ್, ಶಂಕರ್, ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಬಿ.ಆರ್.ದಿನೇಶ್ ಭಾಗವಹಿಸಿದ್ದರು. ಮಿನಿ ವಿಧಾನಸೌಧ ಆವರಣದಿಂದ ಕಂದಾಯ ಭವನದವರೆಗೆ ಜಾಗೃತಿ ಜಾಥಾ ನಡೆಯಿತು.  


ದಂಡ ಮತ್ತು ಸಜೆ
ಬಾಲ ಕಾರ್ಮಿಕರನ್ನು ನೇಮಿಸಿಕೊಳ್ಳುವ ಸಂಸ್ಥೆಗಳ ಮಾಲೀಕರಿಗೆ ರು.10 ರಿಂದ 20 ಸಾವಿರ ದಂಡ, ಒಂದು ವರ್ಷ ಸಜೆ ವಿಧಿಸಲು ಅವಕಾಶವಿದೆ. ಹೀಗಾಗಿ ವ್ಯಾಪಾರಿಗಳು, ಉದ್ಯಮಿಗಳು ಯಾವುದೇ ಕಾರಣಕ್ಕೂ ಬಾಲ ಕಾರ್ಮಿಕರ ನೇಮಕ ಮಾಡಿಕೊಳ್ಳಬಾರದು ಎಂದು ಜಮಾದಾರ್ ಎಚ್ಚರಿಸಿದರು.


ಕಾರ್ಮಿಕ ಮಕ್ಕಳ ರಕ್ಷಣೆ
284 ಬಾಲ ಕಾರ್ಮಿಕ ಮಕ್ಕಳನ್ನು ರಕ್ಷಿಸಿ ಮುಖ್ಯವಾಹಿನಿಗೆ ತರುವ ಕೆಲಸ ಮಾಡಲಾಗಿದೆ. ಕನಕಪುರ ತಾಲೂಕಿನಲ್ಲಿ ನಿನ್ನೆ ಒಂದೇ ದಿನ 12 ಮಕ್ಕಳನ್ನು ಬಾಲ ಕಾರ್ಮಿಕ ಪದ್ಧತಿಯಿಂದ ವಿಮುಕ್ತಗೊಳಿಸಲಾಗಿದೆ. ಹಿಂದೆ ಮಕ್ಕಳನ್ನು ಶಾಲೆಗೆ ಸೇರಿಸಲು ಇದ್ದಂತಹ ಕಷ್ಟಗಳು ಈಗಿಲ್ಲ.



ಮಕ್ಕಳ ಹಕ್ಕುಗಳ ರಕ್ಷಣೆ
ಹಿಂದೆ ಮಕ್ಕಳನ್ನು ಶಾಲೆಗೆ ಸೇರಿಸಲು ಇದ್ದಂತಹ ಕಷ್ಟಗಳು ಈಗಿಲ್ಲ. ಮಕ್ಕಳ ಶಿಕ್ಷಣ, ಅವರ ಹಕ್ಕುಗಳ ರಕ್ಷಣೆಗೆ ಸರ್ಕಾರ ಒತ್ತು ನೀಡಿದೆ. ಅದನ್ನೆಲ್ಲ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಫ್.ಆರ್.ಜಮಾದಾರ್ ಈ ಸಂದರ್ಭದಲ್ಲಿ ಕಿವಿಮಾತು ಹೇಳಿದರು.


ಅಧಿಕಾರಿಗಳ ನೇಮಕ
ಬಾಲ ಕಾರ್ಮಿಕರು ಹೆಚ್ಚಾಗಿ ಹೋಟೆಲ್, ಗ್ಯಾರೇಜುಗಳಲ್ಲಿ ಕಂಡು ಬರುತ್ತಿದ್ದಾರೆ. ಬಾಲ ಕಾರ್ಮಿಕ ಪದ್ಧತಿಯನ್ನು ಜಿಲ್ಲೆಯಿಂದ ಸಂಪೂರ್ಣವಾಗಿ ತೊಡೆದು ಹಾಕುವ ನಿಟ್ಟಿನಲ್ಲಿ ಜಿಲ್ಲಾಡಳಿತ ದಿಟ್ಟ ಹೆಜ್ಜೆ ಇಟ್ಟಿದೆ. ಈ ನಿಟ್ಟಿನಲ್ಲಿ 254 ಅಧಿಕಾರಿಗಳನ್ನು ನೇಮಿಸಿ, ಅವರಿಗೆ ಕಾನೂನು ಸಮ್ಮತ ಅಧಿಕಾರ ನೀಡಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement