ಅರಣ್ಯ ಬೇಟೆ: ಹಲವರ ಬಂಧನ
ರಾಮನಗರ: ತಾಲೂಕಿನ ಕೂಟಗಲ್ ಹೋಬಳಿಯ ಯರೇಹಳ್ಳಿ ಗ್ರಾಮದ ಅಕ್ಕಪಕ್ಕದ ಅರಣ್ಯದಲ್ಲಿ ಅಕ್ರಮವಾಗಿ ಭೇಟೆಯಾಡುತ್ತಿದ್ದ ತಂಡವನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಶನಿವಾರ ಬೆಳಗಿನ ಜಾವ 8-10 ಜನರಿದ್ದ ತಂಡ ಯರೇಹಳ್ಳಿಯ ಅರಣ್ಯದಲ್ಲಿ ಮೊಲ, ಗೌಜಲಕ್ಕಿ, ಮುಂಗುಸಿ ಸೇರಿದಂತೆ ಇನ್ನಿತರೆ ಹಕ್ಕಿ-ಪಕ್ಷಿಗಳನ್ನು ಭೇಟೆಯಾಡುತ್ತಿದ್ದರು. ಮಾಹಿತಿ ತಿಳಿದ ಉಪ ವಲಯ ಅರಣ್ಯಾಧಿಕಾರಿ ಶಿವರಾಮಯ್ಯ ತಂಡವನ್ನು ಹಿಡಿಯಲು ಮುಂದಾದರು. ಈ ವೇಳೆ ತೀವ್ರ ವಿರೋಧ ವ್ಯಕ್ತಪಡಿಸಿದ ಬೇಟೆಗಾರರ ತಂಡ ಶಿವರಾಮಯ್ಯ ಅವರ ಮೇಲೆ ಹಲ್ಲೆ ನಡೆಸಿದರು. ಕೂಗಾಟ ಕೇಳಿ ಸ್ಥಳಕ್ಕೆ ಯರೇಹಳ್ಳಿ ಗ್ರಾಮಸ್ಥರು ಆಗಮಿಸಿದಾಗ ತಂಡದಲ್ಲಿದ್ದ ಕೆಲವು ತಪ್ಪಿಸಿಕೊಂಡಿದ್ದಾರೆ. ಕಡೆಗೆ ಪೋಟಾಲ್ ಮತ್ತು ಚಂದ್ರಬಾಬು ಎಂಬುವರನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಬಂಧಿತರು ಬಿಡದಿ ಬಳಿಯ ಭದ್ರಾಪುರ ಗ್ರಾಮದವರಾಗಿದ್ದು, ಭೇಟೆಯಾಡಿದ ಪ್ರಾಣಿ-ಪಕ್ಷಿಗಳನ್ನು ನಗರದಲ್ಲಿ ಮಾರಾಟ ಮಾಡುತ್ತಿದ್ದರು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಬಂಧಿತರಿಂದ ಸುಮಾರು 15 ಗೌಜಲಕ್ಕಿಗಳು, ಭೇಟೆಯಾಡಲು ಬಳಸುತ್ತಿದ್ದ ಬಲೆಗಳು, ಒಂದು ಟಿವಿಎಸ್ ಎಕ್ಸ್ಎಲ್ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.