ಆರೋಪ ಸಾಬೀತು ಮಾಡಲಿ
ದೊಡ್ಡಬಳ್ಳಾಪುರ: ಸರ್ಕಾರಿ ನಿವೇಶನ ಪಡೆದ ಆರೋಪದ ಹಿನ್ನೆಲೆಯಲ್ಲಿ ಎಸ್.ಆರ್. ಹಿರೇಮಠ್ ಅವರು ನನ್ನ ಕುರಿತು ಮಾಡಿರುವ ಆರೋಪವನ್ನು ಸಾಕ್ಷ್ಯಾಧಾರಗಳ ಸಹಿತ ಸಾಬೀತು ಮಾಡಲಿ. ಅದನ್ನು ಬಿಟ್ಟು ಸುಮ್ಮನೆ ಹೇಳಿದ್ದನ್ನೇ ಪದೇ ಪದೇ ಹೇಳುತ್ತಾ ಹೋಗುವುದು ಸರಿಯಲ್ಲ ಎಂದು ಕೇಂದ್ರ ರೇಲ್ವೆ ಸಚಿವ ಡಿ.ವಿ.ಸದಾನಂದಗೌಡ ಹೇಳಿದ್ದಾರೆ. ಸರ್ಕಾರಿ ನಿವೇಶನ ಪಡೆದ ಆರೋಪದ ಹಿನ್ನೆಲೆಯಲ್ಲಿ ಅವರನ್ನು ಕೇಂದ್ರ ಸಂಪುಟದಿಂದ ಕೈಬಿಡಬೇಕು ಎಂದು ಎಸ್.ಆರ್.ಹಿರೇಮಠ್ ಮಾಡಿರುವ ಒತ್ತಾಯಕ್ಕೆ ಪ್ರತಿಕ್ರಿಯಿಸಿದ ಅವರು, ಆ ಪ್ರಕರಣ ಹೈಕೋರ್ಟ್ನಲ್ಲೇ ರದ್ದಾಗಿ ಹೋಗಿದೆ. ಅದು ಮುಗಿದ ಅಧ್ಯಾಯ. ಆರೋಪ ಮಾಡುವುದು ಅವರಿಗೆ ಸಂಬಂಧಿಸಿದ್ದು. ಅದನ್ನು ವಿರೋಧಿಸಲ್ಲ. ಮುಖ್ಯಮಂತ್ರಿಯಾಗಿದ್ದಾಗಲೂ ಇದೇ ಆರೋಪ ಮಾಡಿದ್ದರು. ಅವರ ಆರೋಪದಲ್ಲಿ ಹುರುಳಿಲ್ಲ ಎಂದಷ್ಟೇ ಹೇಳಬಲ್ಲೆ. ಉಳಿದದ್ದನ್ನು ಅವರೇ ಹೇಳಬೇಕು ಎಂದು ಡಿ.ವಿ.ಸದಾನಂದಗೌಡ ತಿರುಗೇಟು ನೀಡಿದ್ದಾರೆ.