ತಾಜ್ ಉದ್ದೀನ್ ಬಿಜೆಪಿಗೆ ಆಯ್ಕೆ
ವಿಜಯಪುರ: ಇಲ್ಲಿನ ಪ್ರವಾಸಿ ಮಂದಿರದಲ್ಲಿ ತಾಲೂಕು ಬಿಜೆಪಿ ಘಟಕದಿಂದ ತಾಲೂಕು ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಹಾಗೂ ಕಾರ್ಯದರ್ಶಿ ಆಯ್ಕೆ ನಡೆಯಿತು. ಬಿಜೆಪಿ ತಾಲೂಕು ಅಧ್ಯಕ್ಷ ರಾಜ್ಗೋಪಾಲ್ ಮಾತನಾಡಿ ಅಲ್ಪಸಂಖ್ಯಾತರನ್ನು ಸಮಾಜದ ಮುಖ್ಯ ವಾಹಿನಿಗೆ ತರುವ ಉದ್ದೇಶದಲ್ಲಿ ಈ ಕಾರ್ಯ ನಡೆದಿದ್ದು ಇದಕ್ಕೆ ಸೂಕ್ತರೆಂದು ಪಕ್ಷದಲ್ಲಿ ಸುಮಾರು 30 ವರ್ಷಗಳಿಂದ ಕಾರ್ಯಕರ್ತರಾಗಿದ್ದ ತಾಜ್ ಉದ್ದೀನ್ ಅವರನ್ನು ಅಲ್ಪ ಸಂಖ್ಯಾತ ಮೋರ್ಚಾದ ಅಧ್ಯಕ್ಷರಾಗಿ ಘೋಷಿಸಲಾಗಿದೆ. ಕಾರ್ಯದರ್ಶಿಯಾಗಿ ಜಮೀರ್ ಪಾಷ ಅವರನ್ನು ಆಯ್ಕೆಮಾಡಲಾಗಿದೆ ಎಂದರು. ಇದೇ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ತಾಜ್ ಉದ್ದೀನ್ ಅವರು ಅಲ್ಪ ಸಂಖ್ಯಾತ ಸಮುದಾಯದಲ್ಲಿ ಬೇರು ಮಟ್ಟದಿಂದ ಬಿಜೆಪಿ ಪಕ್ಷವನ್ನು ಬೆಳೆಸಿ ಸಂಘಟಿಸುವುದಾಗಿ ಹೇಳಿದರು.
ಕೋಟೆ ಆಂಜನೇಯಸ್ವಾಮಿಗೆ ವಿಭೂತಿ ವಿಶೇಷ ಅಲಂಕಾರ
ಸೂಲಿಬೆಲೆ: ಹೊಸಕೋಟೆ ಪಟ್ಟಣದಲ್ಲಿರುವ ಕೋಟೆ ಆಂಜನೇಯಸ್ವಾಮಿಗೆ ಎರಡನೇ ಶನಿವಾರದ ಅಂಗವಾಗಿ
ಮಾಡಿದ್ದ ವಿಭೂತಿ ಅಲಂಕಾರ ನೂರಾರು ಭಕ್ತರ ಗಮನಸೆಳೆಯಿತು. ಹೊಸಕೋಟೆ, ಸೂಲಿಬೆಲೆ ರಸ್ತೆಯಲ್ಲಿರುವ ಕೋಟೆಯ ಖಿಲ್ಲೇ ಆಂಜಿನೇಯಸ್ವಾಮಿ ಐತಿಹಾಸಿಕ ಹಿನ್ನೆಲೆಯುಳ್ಳ ದೇಗುಲವಾಗಿದ್ದು, ಎರಡನೇ ಶನಿವಾರದ ಅಂಗವಾಗಿ ಹಮ್ಮಿಕೊಂಡಿದ್ದ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಪಟ್ಟಣದ ನೂರಾರು ಭಕ್ತರು, ಮಹಿಳೆಯರು ಮಕ್ಕಳು ಭಾಗವಹಿಸಿ ದರ್ಶನ ಪಡೆದರು. ದೇವರ ವಿಗ್ರಹಕ್ಕೆ ಮಾಡಿದ ಅಲಂಕಾರ ಎಲ್ಲರ ಗಮನ ಸೆಳೆಯಿತು.
ಲಾರಿ ಡಿಕ್ಕಿ: ಬೈಕ್ ಸವಾರರಿಬ್ಬರ ಸಾವು
ನೆಲಮಂಗಲ: ಬೆಂಗಳೂರು ತುಮಕೂರು ಹೆದ್ದಾರಿ 4 ರ ದಾಬಸ್ ಪೇಟೆ ಬಳಿ ಲಾರಿಯೊಂದು ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಇಬ್ಬರು ಸಾವನ್ನಪ್ಪಿರುವ ಘಟನೆ ಶನಿವಾರ ನಡೆದಿದೆ. ಮೃತ ಬೈಕ್ ಸವಾರರನ್ನು ಕೃಷ್ಣ (32), ನರಸಿಂಹಮೂರ್ತಿ(34) ಎಂದು ಗುರುತಿಸಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಿಡಿಲು ಬಡಿದು ಯುವಕ ಸಾವು
ದೊಡ್ಡಬಳ್ಳಾಪುರ: ಸಿಡಿಲು ಬಡಿದು ಯುವಕನೊಬ್ಬ ಸಾವನ್ನಪ್ಪಿರುವ ಘಟನೆ ತಾಲೂಕಿನ ತೂಬಗರೆ ಹೋಬಳಿ ಯದ್ದಲಹಳ್ಳಿ ಗ್ರಾಮದಲ್ಲಿ ಶನಿವಾರ ಸಂಜೆ ನಡೆದಿದೆ. ಗ್ರಾಮದ ಯುವಕ ಮೋಹನ್(21) ಮೃತದುರ್ದೈವಿ. ಈತ ಹೊಲದ ಕೆಲಸ ಮುಗಿಸಿಕೊಂಡು ಬರುವ ವೇಳೆ ಹಲಸಿನ ಮರದ ಬಳಿ ನಿಂತಿದ್ದಾಗ ಘಟನೆ ಸಂಭವಿಸಿದೆ.
ಪತ್ರಕರ್ತರಿಗೆ ಗುರುತಿನಚೀಟಿ ವಿತರಣೆ
ಸೂಲಿಬೆಲೆ: ಹೊಸಕೋಟೆ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದಿಂದ ಹೊಸಕೋಟೆ ತಾಲೂಕು ಪತ್ರಕರ್ತರಿಗೆ ಗುರುತಿನ ಚೀಟಿಗಳನ್ನು ಗ್ರಾಮಾಂತರ ಜಿಲ್ಲಾಧ್ಯಕ್ಷ ದೇವರಾಜ್ ವಿತರಣೆ ಮಾಡಿದರು. ಸಂಘದಲ್ಲಿ ಸದಸ್ಯರು ತಮ್ಮ ವೈಯುಕ್ತಿಕ ಭಿನ್ನಾಬಿಪ್ರಾಯಗಳನ್ನು ಬದಿಗೊತ್ತಿ ಎಲ್ಲರನ್ನು ವಿಶ್ವಾಸದಿಂದ ಮುನ್ನಡಿಸಿಕೊಂಡು ಹೋಗುವಂತೆ ವಾತಾವರಣವನ್ನು ನಿರ್ಮಿಸಿಕೊಳ್ಳಬೇಕು ಎಂದರು. ತಾಲೂಕು ಅಧ್ಯಕ್ಷ ವೆಂಕಟಸ್ವಾಮಿ, ಜಿಲ್ಲಾ ಸಂಘದ ಮುನಿವೀರಣ್ಣ, ರಮೇಶ್, ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ, ತಾಲೂಕು ಕಾರ್ಯದರ್ಶಿ ಮೂರ್ತಿ, ಮಾಜಿ ಅಧ್ಯಕ್ಷ ತ್ರಿಮೂರ್ತಿ ನಾಗರಾಜ್, ಸಮೇತನಹಳ್ಳಿ ಲಕ್ಷ್ಮಣ್ ಸಿಂಗ್ ಮೊದಲಾದವರು ಭಾಗವಹಿಸಿದ್ದರು.