ಬೈಕ್ ವ್ಹೀಲಿಂಗ್: ಯುವಕ ಸಾವು
ರಾಮನಗರ: ಸ್ಕೂಟರ್ ವ್ಹೀಲಿಂಗ್ ಮಾಡುತ್ತಿದ್ದ ಯುವಕನೊಬ್ಬ ಆಯತಪ್ಪಿ ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಂಗನಬಸವನ ದೊಡ್ಡಿ ಬಳಿ ಶನಿವಾರ ನಡೆದಿದೆ. ಬೆಂಗಳೂರಿನ ಕಮಲಾನಗರದ ನಿವಾಸಿ ಜಿಲಾನ್ ಪಾಷ ಮೃತಪಟ್ಟ ಯುವಕ. ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬಜಾಜ್ ಚೇತಕ್ ಸ್ಕೂಟರ್‌ನಲ್ಲಿ ತನ್ನ ಸ್ನೇಹಿತನೊಂದಿಗೆ ಬೆಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದಾಗ ವ್ಹೀಲಿಂಗ್ ಮಾಡಲು ಹೋಗಿ ಆಯ ತಪ್ಪಿ ಕಳಕ್ಕೆ ಬಿದ್ದಿದ್ದಾನೆ. ಬಿದ್ದ ರಭಸಕ್ಕೆ ಆತನ ತಲೆ ತೀವ್ರ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಹಿಂಬದಿ ಸವಾರ ಮಹಮದ್ ಪಾಷಾ ಕೂಡ ಗಂಭೀರವಾಗಿ ಗಾಯಗೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ಕೊಡಿಸಿದ ನಂತರ ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ರಾಮನಗರದ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅರಣ್ಯ ಬೇಟೆ: ಹಲವರ ಬಂಧನ
ರಾಮನಗರ: ತಾಲೂಕಿನ ಕೂಟಗಲ್ ಹೋಬಳಿಯ ಯರೇಹಳ್ಳಿ ಗ್ರಾಮದ ಅಕ್ಕಪಕ್ಕದ ಅರಣ್ಯದಲ್ಲಿ ಅಕ್ರಮವಾಗಿ ಭೇಟೆಯಾಡುತ್ತಿದ್ದ ತಂಡವನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದಾರೆ. ಶನಿವಾರ ಬೆಳಗಿನ ಜಾವ 8-10 ಜನರಿದ್ದ ತಂಡ ಯರೇಹಳ್ಳಿಯ ಅರಣ್ಯದಲ್ಲಿ ಮೊಲ, ಗೌಜಲಕ್ಕಿ, ಮುಂಗುಸಿ ಸೇರಿದಂತೆ ಇನ್ನಿತರೆ ಹಕ್ಕಿ-ಪಕ್ಷಿಗಳನ್ನು ಭೇಟೆಯಾಡುತ್ತಿದ್ದರು. ಮಾಹಿತಿ ತಿಳಿದ ಉಪ ವಲಯ ಅರಣ್ಯಾಧಿಕಾರಿ ಶಿವರಾಮಯ್ಯ ತಂಡವನ್ನು ಹಿಡಿಯಲು ಮುಂದಾದರು. ಈ ವೇಳೆ ತೀವ್ರ ವಿರೋಧ ವ್ಯಕ್ತಪಡಿಸಿದ ಬೇಟೆಗಾರರ ತಂಡ ಶಿವರಾಮಯ್ಯ ಅವರ ಮೇಲೆ ಹಲ್ಲೆ ನಡೆಸಿದರು. ಕೂಗಾಟ ಕೇಳಿ ಸ್ಥಳಕ್ಕೆ ಯರೇಹಳ್ಳಿ ಗ್ರಾಮಸ್ಥರು ಆಗಮಿಸಿದಾಗ ತಂಡದಲ್ಲಿದ್ದ ಕೆಲವು ತಪ್ಪಿಸಿಕೊಂಡಿದ್ದಾರೆ. ಕಡೆಗೆ ಪೋಟಾಲ್ ಮತ್ತು ಚಂದ್ರಬಾಬು ಎಂಬುವರನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಬಂಧಿತರು ಬಿಡದಿ ಬಳಿಯ ಭದ್ರಾಪುರ ಗ್ರಾಮದವರಾಗಿದ್ದು, ಭೇಟೆಯಾಡಿದ ಪ್ರಾಣಿ-ಪಕ್ಷಿಗಳನ್ನು ನಗರದಲ್ಲಿ ಮಾರಾಟ ಮಾಡುತ್ತಿದ್ದರು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ. ಬಂಧಿತರಿಂದ ಸುಮಾರು 15 ಗೌಜಲಕ್ಕಿಗಳು, ಭೇಟೆಯಾಡಲು ಬಳಸುತ್ತಿದ್ದ ಬಲೆಗಳು, ಒಂದು ಟಿವಿಎಸ್ ಎಕ್ಸ್‌ಎಲ್ ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.