ಶಾಸಕರೇ ವಿದೇಶ ಪ್ರವಾಸ ನಿಲ್ಲಿಸಿ
ಬೆಂಗಳೂರು: ರಾಜ್ಯದ ಎಷ್ಟೋ ಮಂದಿ ಶಾಸಕರು, ಮಂತ್ರಿಗಳಿಗೆ ಜಿಲ್ಲೆಗಳ ಪರಿಚಯವೇ ಇಲ್ಲ. ಅತಂಹವರು ಅಧ್ಯಯನದ ಕುಂಟು ನೆಪ ಹೇಳಿ ವಿದೇಶಿ ಪ್ರವಾಸ ಹೋಗುವುದನ್ನು ನಿಲ್ಲಿಸಿ, ಸಮಗ್ರ ಕರ್ನಾಟಕದ ಅಧ್ಯಯನ ನಡೆಸಲಿ ಎಂದು ನಾಡೋಜ ಡಾ. ಪಾಟೀಲ ಪುಟ್ಟಪ್ಪ ಸಲಹೆ ನೀಡಿದ್ದಾರೆ.
ಕೊಳದಮಠ ಮಹಾಸಂಸ್ಥಾನ ಶನಿವಾರ ನೀಡಿದ 'ಅಲ್ಲಮಶ್ರೀ' ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, ತಾವು ಉತ್ತರ ಕರ್ನಾಟಕಕ್ಕೆ ಮಾತ್ರ ಸೇರಿದವರಲ್ಲ. ಸಮಗ್ರ ಕರ್ನಾಟಕದ ಪ್ರತಿನಿಧಿ. ಎಷ್ಟೋ ಮಂದಿ ಇಲ್ಲಿನ ಶಾಸಕರು, ಮಂತ್ರಿಗಳು, ಸಾಹಿತಿಗಳಿಗೆ ಸಮಗ್ರ ಕರ್ನಾಟಕದ ಪರಿಚಯವೇ ಇಲ್ಲ ಎಂದು ಕಿಡಿಕಾರಿದರು. ಕರ್ನಾಟಕದ ಬಿಜಾಪುರ ಗೊತ್ತಿಲ್ಲದವರು ಕಸಾಪ ಸಮ್ಮೇಳನಾಧ್ಯಕ್ಷರು ಆದಂತೆ, ತಮ್ಮ ಪಕ್ಕದ ಜಿಲ್ಲೆಗಳ ಪರಿಚಯವೇಇಲ್ಲದ ಶಾಸಕರು, ಮಂತ್ರಿಗಳು ಇದ್ದಾರೆ. ಇಂತಹವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ ಎಂದು ಪ್ರಶ್ನಿಸಿದ ಅವರು, ಸರ್ಕಾರಿ ವೆಚ್ಚದಲ್ಲಿ ಇವರು ಅಧ್ಯಯನದ ಕುಂಟು ನೆಪ ಹೇಳಿ ಚೀನಾ, ಸಿಂಗಾಪುರ ಎಂಬುದಾಗಿ ವಿದೇಶಿ ಪ್ರವಾಸ ಹೋಗುವುದನ್ನು ನಿಲ್ಲಿಸಿ, ಕರ್ನಾಟಕದ ಅಧ್ಯಯನ ನಡೆಸಬೇಕಿದೆ ಎಂದು ಕಿವಿಮಾತು ಹೇಳಿದರು. ಮಠ ಮಾನ್ಯಗಳ ಕುರಿತು ಮಾತನಾಡಿದ ಅವರು, ಕರ್ನಾಟಕದಲ್ಲಿ ಇರುವಷ್ಟು ಮಠಗಳು, ಸ್ವಾಮೀಜಿಗಳು ಭಾರತದಲ್ಲಿ ಎಲ್ಲಿಯೂ ಇಲ್ಲ. ಅಂತಹ ವೈಶಿಷ್ಟ್ಯ ನಮ್ಮದು. ಇವರೆಲ್ಲ ಸೇರಿ ಕೆಲಸ ಮಾಡುವುದಾದರೆ ಭಾರತದಲ್ಲಿಯೆ ಕರ್ನಾಟಕವನ್ನು ಮಾದರಿ ರಾಜ್ಯವಾಗಿಸಬಹುದು ಎಂದರು. ಸಹಕಾರ ಇಲಾಖೆ ಪ್ರಧಾನ ಕಾರ್ಯದರ್ಶಿ ಡಾ.ಸಿ.ಸೋಮಶೇಖರ್ ನುಡಿನಮನ ಸಲ್ಲಿಸಿದರು.
ಡಾ. ಕಲಬುರ್ಗಿಗೆ
ನಾಚಿಕೆಯಾಗಬೇಕು
ದೇವರ ಮೂರ್ತಿ ಮೇಲೆ ಮೂತ್ರ ಮಾಡಿ ಎಂಬ ಡಾ. ಎಂ.ಎಂ. ಕಲಬುರ್ಗಿ ಅವರ ವಿವಾದಾತ್ಮಕ ಹೇಳಿಕೆಗೆ ಕಾರ್ಯಕ್ರಮದಲ್ಲಿ ಕೊಳದಮಠದ ಡಾ. ಶಾಂತವೀರ ಮಹಾಸ್ವಾಮಿ ಹಾಗೂ ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ ಖಾರವಾಗಿ ಪ್ರತಿಕ್ರಿಯಿಸಿದರು. ಮೊದಲು ಜೀವನ, ನಂತರ ಬರವಣಿಗೆ. ಇಂತಹ ಹೇಳಿಕೆ ನೀಡುವ ವ್ಯಕ್ತಿಗಳಿಗೆ ನಾಚೀಕೆಯಾಗಬೇಕು ಎಂದು ಪಾಟೀಲ ಪುಟ್ಟಪ್ಪ ಕಿಡಿಕಾರಿದರು.