ಅರ್ಕಾವತಿ ಪುನಶ್ಚೇತನ ಮೊದಲ ಹಂತ ಕಳಪೆ
ದೊಡ್ಡಬಳ್ಳಾಪುರ: ಅರ್ಕಾವತಿ ನದಿ ಪುನಶ್ಚೇತನಕ್ಕಾಗಿ ರಾಜ್ಯ ಸರ್ಕಾರ 3 ಹಂತದ ಯೋಜನೆಯನ್ನು ರೂಪಿಸಿ ಅನುಷ್ಠಾನಗೊಳಿಸುತ್ತಿದೆ.
ಈಗಾಗಲೇ 23.43 ಕೋಟಿ ವೆಚ್ಚದಲ್ಲಿ ಮೊದಲ ಹಂತದ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಆದರೆ ಪುನಶ್ಚೇತನದ ಸಮಗ್ರ ಪರಿಕಲ್ಪನೆ ಮತ್ತು ವಸ್ತುಸ್ಥಿತಿಯ ಪರಿಪೂರ್ಣ ಅಧ್ಯಯನ ಇಲ್ಲದೆ ಅವೈಜ್ಞಾನಿಕವಾಗಿ ಯೋಜನೆ ನಡೆಯುತ್ತಿದೆ ಎಂಬ ಟೀಕೆ ಕೇಳಿಬಂದಿದೆ. ಈ ನಿಟ್ಟಿನಲ್ಲಿ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯೊಂದು ಹಳ್ಳ ಹಿಡಿಯುವ ಮುನ್ಸೂಚನೆ ಕಂಡು ಬರುತ್ತಿದೆ. ಅಲ್ಲದೆ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲಿ ಬಿಬಿಎಂಪಿ ಕಸ ವಿಲೇವಾರಿ ಘಟಕಗಳು ಕಾರ್ಯನಿರ್ವಹಿಸುತ್ತಿರುವುದು ಪುನಶ್ಚೇತನ ನೀತಿ ಸಂಹಿತೆಯ ಉಲ್ಲಂಘನೆ ಎಂದ ವಾದ ಚರ್ಚೆಗೊಳಪಡುತ್ತಿದೆ.
ಈ ಸಂಬಂಧ ಇಲ್ಲಿನ ಅರ್ಕಾವತಿ ಕುಮುದ್ವತಿ ನದಿ ಪುನಶ್ಚೇತನ ಸಮಿತಿಯ ನೇತೃತ್ವದಲ್ಲಿ ಪುನಶ್ಚೇತನ ಕಾಮಗಾರಿ ಪರಿಶೀಲನಾ ಸಭೆ ನಡೆಸಿ ಮಹತ್ವ ಅಂಶಗಳತ್ತ ಬೆಳಕು ಚೆಲ್ಲಲಾಗಿದೆ. ರಾಜ್ಯ ಸರ್ಕಾರದ ಯೋಜನೆ ಶ್ಲಾಘನೀಯ. ಆದರೆ ಪುನಶ್ಚೇತನ ಕಾಮಗಾರಿಗಳಲ್ಲಿ ಸ್ಥಳೀಯ ಜನರು ಭಾಗವಹಿಸಲು ಅವಕಾಶ ಇರದಂತೆ ಯೋಜನೆ ರೂಪಿಸಿರುವುದು, ಸ್ಥಳೀಯ ಸಂಸ್ಥೆಗಳನ್ನು ಕಡೆಗಣಿಸಿರುವುದು, ಕನಿಷ್ಠ ಮಾಹಿತಿಯನ್ನೂ ನೀಡದಿರುವುದು ಖಂಡನೀಯ.
2012ರ ಏಪ್ರಿಲ್ನಲ್ಲಿ ಆರಂಭವಾದ 8 ಕೋಟಿ ವೆಚ್ಚದ ಕಾಲುವೆಗಳ ದುರಸ್ಥಿ ಕಾಮಗಾರಿ ಕಳಪೆ ಮತ್ತು ಅಪೂರ್ಣವಾಗಿದೆ. ಕಾವೇರಿ ನೀರಾವರಿ ನಿಗಮದ ಕಾರ್ಯಕ್ಷಮತೆ ಕೊರತೆ, ಸರ್ವೇ ನಿರ್ಲಕ್ಷ್ಯ ಮಾಡಿರುವ ಕಂದಾಯ ಇಲಾಖೆ ಸಮನ್ವಯದ ಕೊರತೆ ಎದ್ದು ಕಾಣುತ್ತಿದೆ. ಅಲ್ಲಲ್ಲಿ ಮಾತ್ರ ಕಾಲುವೆಗಳ ಹೂಳು ತೆಗೆದು, ತೆಗೆದ ಮಣ್ಣನ್ನು ಅಕ್ಕಪಕ್ಕದಲ್ಲೇ ಸುರಿದಿರುವುದು ಅಕ್ಷಮ್ಯ. ಅರ್ಧಕ್ಕೇ ಕೆಲವೆಡೆ ಕಾಮಗಾರಿ ನಿಂತಿದ್ದು ನಿಷ್ಪ್ರಯೋಜಕವಾಗಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಮುಖಂಡರು
ಆರೋಪಿಸಿದ್ದಾರೆ.
ಕಾಮಗಾರಿ ಮುಗಿಸಲಿ: ನಿಗಮ ಕೂಡಲೇ ಕಾಮಗಾರಿ ಮುಗಿಸಬೇಕು. ಆಗಿರುವ ಕಾಮಗಾರಿಗಳ ಗ್ರಾಮವಾರು ನಿಖರ ಮಾಹಿತಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ಜಲಾನಯನ ಪ್ರದೇಶದ ಸಾಕಷ್ಟು ಕೆರೆಗಳು ಒತ್ತುವರಿಯಾಗಿದ್ದು, ಯೋಜನೆ ಜಾರಿಯಾದಾಗಿನಿಂದಲೂ ಒತ್ತುವರಿ ಬಿಡಿಸಿಲ್ಲ. ಕೂಡಲೇ ಒತ್ತುವರಿ ಬಿಡಿಸಬೇಕು. ಜಲಾನಯನ ಸಮಸ್ಯೆಗಳನ್ನು ಸಮಗ್ರವಾಗಿ ಅಧ್ಯಯನ ಮಾಡಿ ಸಮಗ್ರ ಯೋಜನೆ ರೂಪಿಸಿ ನಂತರ ಕಾಮಗಾರಿ ಕೈಗೊಳ್ಳಬೇಕು ಎಂದು ಸಮಿತಿ ಒತ್ತಾಯಿಸಿದೆ.
ಹಣ ಪೋಲು: ಒಂದೇ ಕಾಮಗಾರಿಗೆ ಹಲವು ಇಲಾಖೆಗಳು ಯೋಜನೆಗಳನ್ನು ರೂಪಿಸಿ, ಒಂದೇ ಕೆಲಸಕ್ಕೆ ಹಲವು ಕಡೆಗಳಿಂದ ಹಣ ಪೋಲಾಗುತ್ತಿದೆ. ಇಲಾಖೆಗಳ ನಡುವಿನ ಸಾಮರಸ್ಯಕ್ಕಾಗಿ ಸಾಂಸ್ಥಿಕ ವ್ಯವಸ್ಥೆ ಜಾರಿಗೆ ಬರಬೇಕು. ಮುಂದಿನ ಯೋಜನೆಗಳನ್ನು ರೂಪಿಸುವಾಗ, ಅನುಷ್ಠಾನಕ್ಕೆ ತರುವಾಗ ಸ್ಥಳೀಯ ಗ್ರಾ.ಪಂ, ಸ್ಥಳೀಯ ಸಂಸ್ಥೆಗಳು, ಜನರನ್ನು ಒಳಗೊಂಡಂತೆ ಯೋಜನಾ ವಿನ್ಯಾಸ ರೂಪಿಸಬೇಕು. ಕಾಮಗಾರಿ ಪೂರ್ಣಗೊಳ್ಳುವ ಮುನ್ನ ಅಧಿಕಾರಿಗಳ ಸಮ್ಮುಖದಲ್ಲಿ ಸ್ಥಳೀಯರ ಪರಿಶೀಲನೆ ನಂತರವೇ ಬಿಲ್ ಪಾಸ್ ಮಾಡಬೇಕು ಎಂದು ಆಗ್ರಹಿಸಲಾಯಿತು. ಸಭೆಯಲ್ಲಿ ಕೈಗೊಂಡ ನಿರ್ಧಾರಗಳನ್ನು ಸಿಎಂ, ಕಾವೇರಿ ನೀರಾವರಿ ನಿಗಮ, ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳಿಗೆ ಸಲ್ಲಿಸಲು ಸಭೆ ನಿರ್ಧರಿಸಿತು.
ಕಸಕ್ಕೆ ವಿರೋಧ: ದಶಕಗಳ ಹೋರಾಟವನ್ನು ಲೆಕ್ಕಿಸದೆ ಹಳ್ಳಿಗಳಲ್ಲಿ ಬಿಬಿಎಂಪಿ ವ್ಯಾಪ್ತಿಯ ಕಸ ತಂದು ತಿಪ್ಪೆಗುಂಡಿಯಾಗಿಸುತ್ತಿರುವ ಸರ್ಕಾರದ ವೈಖರಿ ಖಂಡನೀಯ.
ಅರ್ಕಾವತಿ ಕುಮುದ್ವತಿ ನದಿ ಜಲಾನಯನದ ಯಾವುದೇ ಭಾಗದಲ್ಲಿ ಕಸ ಸುರಿಯಬಾರದು. ಕಸವನ್ನು ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಲಾಗುವುದು. ಇದರಿಂದ ಗ್ರಾಮಸ್ಥರಿಗೆ ತೊಂದರೆ ಇಲ್ಲ ಎಂದು ಹೇಳುತ್ತಿರುವ ಸರ್ಕಾರ, ಈ ಘಟಕಗಳನ್ನು ಬಿಬಿಎಂಪಿ ವ್ಯಾಪ್ತಿಯಲ್ಲೇ ಆರಂಭಿಸಬೇಕು ಎಂದು ಆಗ್ರಹಿಸಲಾಯಿತು. ಕರ್ನಾಟಕ ರಾಜ್ಯ ರೈತ ಸಂಘದ ತಾ.ಅಧ್ಯಕ್ಷ ಪ್ರಸನ್ನ, ಕರ್ನಾಟಕ ಪ್ರಾಂತ ರೈತ ಸಂಘದ ತಾ.ಅಧ್ಯಕ್ಷ ಆರ್.ಚಂದ್ರತೇಜಸ್ವಿ, ನದಿ ಪುನಶ್ಚೇತನ ಸಮಿತಿಯ ಕಾರ್ಯದರ್ಶಿ ಎಂ.ಆರ್.ಸೀತಾರಾಂ, ಯೋಜನೆ ವ್ಯಾಪ್ತಿಯ ನಂದಿ ಬೆಟ್ಟ ಮತ್ತು ಹೆಸರಘಟ್ಟ ನಡುವಿನ ಜಲಾನಯನ ವ್ಯಾಪ್ತಿಗೆ ಬರುವ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ, ಮಧುರೆ, ದೊಡ್ಡಬೆಳವಂಗಲ, ಕಸಬಾ ಹೋಬಳಿಗಳು, ದೇವನಹಳ್ಳಿ ತಾಲೂಕಿನ ಕುಂದಾಣ ಹೋಬಳಿ ಮತ್ತು ಬೆಂಗಳೂರು ಉತ್ತರ ತಾಲೂಕಿನ ಹೆಸರಘಟ್ಟ ಹೋಬಳಿಗಳ ಗ್ರಾಮಸ್ಥರು, ರೈತ ಸಂಘಟನೆಗಳ ಮುಖಂಡರು, ಸದಸ್ಯರು, ಅರ್ಕಾವತಿ ಕುಮುದ್ವತಿ ಪುನಶ್ಚೇತನ ಸಮಿತಿಯ ಪದಾಧಿಕಾರಿಗಳು, ಸ್ವಯಂಸೇವಕರು ಸಭೆಯಲ್ಲಿ ಭಾಗವಹಿಸಿದ್ದರು.
ಅರ್ಕಾವತಿ ಪುನಶ್ಚೇತನ ಮಹತ್ವದ ಯೋಜನೆ. ಆದರೆ ಈ ಯೋಜನೆ ನಿರೀಕ್ಷಿತ ರೀತಿಯಲ್ಲಿ ನಡೆಯುತ್ತಿಲ್ಲ. ಯೋಜನೆ ವೈಜ್ಞಾನಿಕವಾಗಿದ್ದರೂ, ಅದರ ಅನುಷ್ಠಾನ ಅವೈಜ್ಞಾನಿಕವಾಗಿದೆ. 2 ವರ್ಷಗಳೇ ಉರುಳಿದರೂ ಗಣನೀಯ ಪ್ರಗತಿ ಕಂಡಿಲ್ಲ. ಜೊತೆಗೆ ಹಣ ಮಾತ್ರ ನಿರೀಕ್ಷೆ ಮೀರಿ ಪೋಲಾಗುತ್ತಿದೆ. ಈ ಕುರಿತು ಸರ್ಕಾರ ಗಂಭೀರವಾಗಿ ಆಲೋಚಿಸಬೇಕು.
- ಪ್ರಸನ್ನ ನಾಗಸಂದ್ರ, ಅಧ್ಯಕ್ಷರು,
ತಾಲೂಕು ಕರ್ನಾಟಕ ರಾಜ್ಯ ರೈತ ಸಂಘ.
ಕಾಲುವೆಗಳಲ್ಲಿ ಹೂಳೆತ್ತುವ ಸುಮಾರು 8 ಕೋಟಿಗೂ ಅಧಿಕ ವೆಚ್ಚದ ಕಾಮಗಾರಿ ಮೊದಲ ಹಂತದಲ್ಲಿ ಆರಂಭವಾಗಿದೆ. ಆದರೆ ಬಹುತೇಕ ಕಾಮಗಾರಿಗಳು ಅಪೂರ್ಣವಾಗಿವೆ. ನದಿ ಪಾತ್ರದ ನೂರಾರು ಕೆರೆಗಳ ಸಾಕಷ್ಟು ಭೂಮಿ ಒತ್ತುವರಿಯಾಗಿದೆ. ಇದರ ಸಮಗ್ರ ಪಾರದರ್ಶಕ ಸರ್ವೇ ನಡೆಯಬೇಕು. ಎಂಥದೇ ಪ್ರಭಾವಿಗಳಿದ್ದರೂ ಒತ್ತುವರಿ ಬಿಡಿಸುವ ಪ್ರಾಮಾಣಿಕ ಪ್ರಯತ್ನ ಅಧಿಕಾರಿಗಳಿಂದ ಆಗಬೇಕು.
- ಎಂ.ಆರ್.ಸೀತಾರಾಂ, ಕಾರ್ಯದರ್ಶಿ,
ಅರ್ಕಾವತಿ-ಕುಮುದ್ವತಿ ನದಿ ಪುನಶ್ಚೇತನ ಸಮಿತಿ.
ಯೋಜನೆಗಳು ಜನರ ನಿರೀಕ್ಷೆಗಳಿಗೆ ಪೂರಕವಾಗಿ ನಡೆಯುತ್ತಿಲ್ಲ. ಇಲಾಖೆಗಳ ನಡುವಿನ ಸಮನ್ವಯದ ಕೊರತೆ ಕೆಲವು ಬಾರಿ ಯೋಜನೆಗಳ ಅನುಷ್ಠಾನಕ್ಕೆ ತೊಡಕಾಗಿದೆ. ಕಾವೇರಿ ಜಲಾನಯನ ನಿಗಮ ಯೋಜನೆಯ ಸಮಗ್ರ ಅರಿವು ಮತ್ತು ಅಂಕಿ-ಸಂಖ್ಯೆಗಳ ಮಾಹಿತಿ ಕಲೆಹಾಕಬೇಕು. ಸ್ಥಳೀಯ ಜನರು, ಗ್ರಾಮ ಪಂಚಾಯಿತಿಗಳ ವಿಶ್ವಾಸ ಮತ್ತು ಒಳಗೊಳ್ಳುವಿಕೆಯನ್ನು ಬಳಸಿಕೊಳ್ಳುವ ಪ್ರಜ್ಞೆತೋರಬೇಕು.
- ಆರ್.ಚಂದ್ರತೇಜಸ್ವಿ, ಅಧ್ಯಕ್ಷರು,
ಕರ್ನಾಟಕ ಪ್ರಾಂತ ರೈತ ಸಂಘ.
- ಕೆ.ಆರ್.ರವಿಕಿರಣ್