ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಅಕ್ರಮ ಮದ್ಯ ಮಾರಾಟ ನಿಲ್ಲಲಿ

Mainashree
Updated On : 18 Jun 2014, 11:10 am

ಕ.ಪ್ರ. ವಾರ್ತೆ ಚ ದೊಡ್ಡಬಳ್ಳಾಪುರ   ಜೂ.18
ಇಲ್ಲಿ ಅಕ್ರಮ ಮದ್ಯ ಮಾರಾಟ ಅವ್ಯಾಹತ. ಹಲವು ಹಳ್ಳಿಗಳ ಸಣ್ಣ ಪೆಟ್ಟಿಗೆ ಅಂಗಡಿಗಳಲ್ಲೂ ಮದ್ಯ ಮಾರಾಟ ಯಾವುದೇ ಭಯವಿಲ್ಲದೆ ನಡೆಯುತ್ತಿದೆ.
  ಮದ್ಯಮುಕ್ತ ಗ್ರಾಮಗಳಾಗಬೇಕಿದ್ದ ಪ್ರದೇಶಗಳು ಮದ್ಯ ವ್ಯಸನಿಗಳ ಬೀಡಾಗಿ ಪರಿವರ್ತನೆಯಾಗುತ್ತಿವೆ. ಇದಕ್ಕೆ ಸರ್ಕಾರ ಮತ್ತು ಸ್ಥಳೀಯ ಅಧಿಕಾರಿಗಳೇ ನೇರ ಹೊಣೆ. ಕೂಡಲೇ ಈ ಅಕ್ರಮ ಮದ್ಯ ಮಾರಾಟ ದಂಧೆ ನಿಲ್ಲಬೇಕು ಎಂದು ತಾಲೂಕು ಸಿಪಿಎಂ, ಅಖಿಲ ಕರ್ನಾಟಕ ಜನವಾದಿ ಮಹಿಳಾ ಸಂಘಟನೆ, ಪ್ರಾಂತ ರೈತಸಂಘ, ಡಿವೈಎಫ್‌ಐ, ದಲಿತ ಹಕ್ಕುಗಳ ಸಮಿತಿ ಸೇರಿದಂತೆ ಅನೇಕ ಸಂಘಟನೆಗಳು ಆಗ್ರಹಿಸಿವೆ.
ಜಾಣ ಕುರುಡು: ವಿವಿಧ ಸಂಘಟನೆಗಳ ನೇತೃತ್ವದಲ್ಲಿ ದೊಡ್ಡಬಳ್ಳಾಪುರದ ಸಿದ್ಧಲಿಂಗಯ್ಯ ವೃತ್ತದಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಹಕ್ಕೊತ್ತಾಯದ ಮನವಿಪತ್ರವನ್ನು ತಹಸೀಲ್ದಾರ್‌ಗೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿವಿಧ ಸಂಘಟನೆಗಳ ಮುಖಂಡರು, ಗಾಂಧಿ ಕನಸಿನ ಪಾನಮುಕ್ತ ಭಾರತ ಇನ್ನೂ ಕನಸಾಗಿಯೇ ಉಳಿದಿದೆ. ಕಿರಾಣಿ ಅಂಗಡಿಗಳಲ್ಲೂ ಮದ್ಯ ಮಾರಾಟ ನಡೆದಿರುವುದು ಖಂಡನೀಯ. ಈ ಬಗೆಯ ಸಾಮಾಜಿಕ ಪಿಡುಗುಗಳ ವಿರುದ್ಧ ದೊಡ್ಡ ಮಟ್ಟದ ಆಂದೋಲನ ರೂಪಗೊಳ್ಳಬೇಕಿದೆ. ಜನ ಅಕ್ರಮ ಮದ್ಯಮಾರಾಟದ ವಿರುದ್ಧ ಬೀದಿಗಿಳಿದು ಹೋರಾಟ ಮಾಡಬೇಕಿದೆ.
 ರಾಜ್ಯ ಸರ್ಕಾರಕ್ಕೆ ಆದಾಯ ತರುವ 2ನೇ ದೊಡ್ಡ ಇಲಾಖೆ ಅಬಕಾರಿ. ಈ ನಿಟ್ಟಿನಲ್ಲಿ ಸರ್ಕಾರ ಎಲ್ಲ ವರ್ಗಗಳ ಜನರನ್ನು ಕುಡುಕರನ್ನಾಗಿ ಮಾಡುತ್ತಿದೆ.
ಕಿರಾಣಿ ಅಂಗಡಿಗಳಲ್ಲೇ ವರ್ಷಕ್ಕೆ ರು. ಲಕ್ಷಾಂತರ ಮದ್ಯ ವಹಿವಾಟು ನಡೆಯುತ್ತಿದೆ. ಇದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೂ ಗೊತ್ತಿದೆ. ಆದರೆ ಕ್ರಮ ಮಾತ್ರ ಕೈಗೊಳ್ಳಲು ಶಕ್ತರಾಗಿಲ್ಲ. ಅಧಿಕಾರಿ ಮತ್ತು ಆಡಳಿತ ವಲಯಕ್ಕೆ ಲಾಭದಾಯಕವಾಗಿರುವ ಈ ದಂಧೆ ನಿಲ್ಲಿಸಲು ಯಾರೂ ಮನಸ್ಸು ಮಾಡುತ್ತಿಲ್ಲ ಎಂದು ಆರೋಪಿಸಿದರು.
 ಪ್ರತಿಭಟನೆಯಲ್ಲಿ ಸಿಪಿಎಂ ಮುಖಂಡ ಆರ್. ಚಂದ್ರತೇಜಸ್ವಿ, ಜನವಾದಿ ಮಹಿಳಾ ಸಂಘಟನೆಯ ಎನ್. ಪ್ರಭಾ, ಡಿವೈಎಫ್‌ಐನ ಅಶ್ವತ್ಥ್ ಸೇರಿದಂತೆ ವಿವಿಧ ಸಂಘಟನೆಗಳ ಹಲವಾರು ಪದಾಧಿಕಾರಿಗಳು, ಕಾರ್ಯಕರ್ತರು ಭಾಗವಹಿಸಿದ್ದರು. ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement