ಜಿಲ್ಲೆಯಲ್ಲಿ 2967 ಮತದಾರರು
ಕ.ಪ್ರ.ವಾರ್ತೆ ರಾಮನಗರ ಜೂ.18
ವಿಧಾನಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಜಿಲ್ಲೆಯಲ್ಲಿ 2167 ಪುರುಷ ಹಾಗೂ 800 ಮಹಿಳಾ ಮತದಾರರು ಸೇರಿದಂತೆ ಒಟ್ಟಾರೆ 2967 ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಎಫ್.ಆರ್.ಜಮಾದಾರ್ ತಿಳಿಸಿದರು.
ಚನ್ನಪಟ್ಟಣದಲ್ಲಿ 243 ಮಹಿಳೆಯರು, 654 ಪುರುಷರು, ಒಟ್ಟಾರೆ 897 ಮತದಾರರಿದ್ದಾರೆ. ಕನಕಪುರದಲ್ಲಿ ಮಹಿಳೆಯರು 191, ಪುರುಷರು 642, ಒಟ್ಟಾರೆ 663. ಮಾಗಡಿಯಲ್ಲಿ ಮಹಿಳೆಯರು 136, ಪುರುಷರು 396, ಒಟ್ಟಾರೆ 522 ಹಾಗೂ ರಾಮನಗರದಲ್ಲಿ 230 ಮಹಿಳೆಯರು, 485 ಪುರುಷರು ಸೇರಿದಂತೆ ಒಟ್ಟಾರೆ 669 ಮತದಾರರಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ಅವರು ವಿವರಿಸಿದರು.
ಮತದಾನ ಕೇಂದ್ರಗಳು: ಆಯಾ ತಾಲೂಕಿನ ತಾಲೂಕು ಕಚೇರಿಗಳಲ್ಲಿ ಮತದಾನ ಕೇಂದ್ರವನ್ನು ಸ್ಥಾಪಿಸಲಾಗಿದೆ. ಕೇಂದ್ರದಲ್ಲಿ ಮತದಾನ ಮಾಡಲು ಬರುವ ಪ್ರತಿಯೊಬ್ಬ ಮತದಾರರ ವೀಡಿಯೋ ಚಿತ್ರೀಕರಣ ಮಾಡಲು ನಿರ್ಧರಿಸಲಾಗಿದೆ. ಆಯಾ ತಾಲೂಕಿನ ತಹಸೀಲ್ದಾರ್ ಮತದಾನದ ಉಸ್ತುವಾರಿ ನೋಡಿಕೊಳ್ಳುವರು ಎಂದು ಹೇಳಿದರು.
ಆದ್ಯತೆ ಅನುಸಾರ: ಮತದಾರರು ಆದ್ಯತೆ ಅನುಸಾರ ಮತ ಚಲಾವಣೆ ಮಾಡಬೇಕಿದ್ದು, ನೇರಳೆ ಬಣ್ಣದ ಸ್ಕೆಚ್ ಪೆನ್ನನ್ನೇ ಬಳಸಬೇಕಿದೆ. ಮತದಾರರ ಆದ್ಯತೆಯನ್ನು ಆಂಗ್ಲ, ಕನ್ನಡ ಅಥವಾ ರೋಮನ್ ಅಂಕಿಗಳನ್ನು ಬಳಸಬೇಕು. ಮತದಾರರ ಎಡಗೈ ತೋರು ಬೆರಳಿಗೆ ಶಾಯಿ ಹಾಕಲಾಗುವುದು ಎಂದರು.
ನೋಟಾ ಮತದಾನ: ವಿಧಾನ ಪರಿಷತ್ ಚುನಾವಣೆಯಲ್ಲಿಯೂ ನೋಟಾ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕಣದಲ್ಲಿರುವ ಅಭ್ಯರ್ಥಿಗಳು ಇಷ್ಟ ಇಲ್ಲದಿದ್ದ ಪಕ್ಷದಲ್ಲಿ ಮತದಾರರು ಮೇಲಿನವರು ಯಾರೂ ಇಲ್ಲ ಎಂಬ ಆಯ್ಕೆಯನ್ನು ಮತಪತ್ರದ ಕಡೆ ಸಾಲಿನಲ್ಲಿ ಸೇರಿಸಲಾಗಿದೆ ಎಂದು ಜಮಾದಾರ್ ಹೇಳಿದರು.
ಮತದಾನದ ಸಮಯ: ಮತದಾನವು ಜೂ.20ರ ಬೆಳಗ್ಗೆ 8ರಿಂದ ಸಂಜೆ 4ರವರೆಗೆ ನಡೆಯಲಿದೆ. ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತ ಗೌರವ್ಗುಪ್ತ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ತಿಳಿಸಿದರು. ನಕಲಿ ಮತದಾನವಾಗದಂತೆ ಮುನ್ನಚ್ಚರಿಕೆ ವಹಿಸಿದ್ದು, 2014ರ ಮೇ 6 ರಂದು ಪ್ರಕಟಿಸಲಾಗಿರುವ ಪರಿಷ್ಕೃತ ಮತದಾರರ ಪಟ್ಟಿಯ ಪ್ರಕಾರ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ನಕಲಿ ಮತದಾನ ಮಾಡಲು ಬಂದು ಸಿಕ್ಕಿಬಿದ್ದಲ್ಲಿ ಅಂತಹವರ ವಿರುದ್ಧ ಕ್ರಿಮಿನಲ್ ಮೊಕದಮೆ ದಾಖಲಿಸಲಾಗುವುದು ಎಂದು ಜಮಾದಾರ್ ಎಚ್ಚರಿಸಿದರು.
8 ಉಮೇದುವಾರರು: ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನವಣೆಗೆ 8 ಉಮೇದುವಾರರು ಕಣದಲ್ಲಿದ್ದು, ಮಾನ್ಯತೆ ಪಡೆದ ರಾಷ್ಟ್ರೀಯ ಹಾಗೂ ರಾಜ್ಯ ರಾಜಕೀಯ ಪಕ್ಷಗಳ 3 ಹಾಗೂ ಐವರು ಪಕ್ಷೇತರರು ಸ್ಪರ್ಧಿಸಿದ್ದಾರೆ. ಭಾರತೀಯ ಜನತಾ ಪಕ್ಷದಿಂದ ಎಂ. ನೀಲಯ್ಯ, ಜೆಡಿಎಸ್ನಿಂದ ಪುಟ್ಟಣ್ಣ, ಕಾಂಗ್ರೆಸ್ನಿಂದ ಬಿ.ಕೆ.ವೆಂಕಟೇಶ್ ಹಾಗೂ ಡಾ.ಕೋಡೂರು ವೆಂಕಟೇಶ್, ಡಾ.ಗುರುರಾಜ ಕರಜಗಿ, ಪುಟ್ಟಣ್ಣ, ಎಂ.ಎನ್.ರವಿಶಂಕರ್, ಶ್ರೀನಿವಾಸಮೂರ್ತಿ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ ಎಂದು ಜಮಾದಾರ್ ತಿಳಿಸಿದರು.
ನೀತಿ ಸಂಹಿತೆ ಜಾರಿ: ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವುದರಿಂದ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಂದ ಹಾಗೂ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ನೋಡಿಕೊಳ್ಳಲು ಆಯಾ ತಾಲೂಕು ತಹಸೀಲ್ದಾರ್ ನೇತೃತ್ವದಲ್ಲಿ ನೀತಿ ಸಂಹಿತೆ ಜಾರಿ ತಂಡಗಳನ್ನು ರಚಿಸಲಾಗಿದೆ ಎಂದು ಹೇಳಿದರು.
ಮತದಾನದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ನೋಡಿಕೊಳ್ಳಲು ಪ್ರತಿ ತಾಲೂಕು ಮತಗಟ್ಟೆಗೆ ಒಬ್ಬ ಸಬ್ ಇನ್ಸ್ಪೆಕ್ಟರ್ ನೇತೃತ್ವದಲ್ಲಿ ಮೂವರು ಪೇದೆಗಳನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. ತಹಸೀಲ್ದಾರ್ರೊಂದಿಗೆ ವೃತ್ತ ನಿರೀಕ್ಷಕರು ಮೇಲುಸ್ತುವಾರಿ ವಹಿಸುವರು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ತಿಳಿಸಿದರು. ಮತದಾನವು ಮುಕ್ತ, ನ್ಯಾಯಸಮ್ಮತ ಹಾಗೂ ಶಾಂತಿಯುತವಾಗಿ ನಡೆಯಲು ಜಿಲ್ಲಾಡಳಿತವು ಎಲ್ಲಾ ರೀತಿಯಲ್ಲಿ ಕ್ರಮ ಕೈಗೊಂಡಿದ್ದು, ಅಗತ್ಯ ಸಿಬ್ಬಂದಿ ಹಾಗೂ ರಕ್ಷಣಾ ಸಿಬ್ಬಂದಿಯನ್ನು ನಿಯೋಜಿಸಿದೆ. ಮತದಾರರು ತಮ್ಮ ಹಕ್ಕನ್ನು ನಿರ್ಭೀತಿಯಿಂದ ಚಲಾಯಿಸುವಂತೆ ಅವರು ಮನವಿ ಮಾಡಿದರು.
ಸಾಂದರ್ಭಿಕ ರಜೆ: ಜೂ.20 ರಂದು ನಡೆಯಲಿರುವ ವಿಧಾನ ಪರಿಷತ್ತಿನ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಶಿಕ್ಷಕರು ಮತದಾನ ಮಾಡಲು ಅನುಕೂಲವಾಗುವಂತೆ ಮತದಾನದ ದಿನದಂದು ವಿಶೇಷ ಸಾಂದರ್ಭಿಕ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿ ಜಮಾದಾರ್ ತಿಳಿಸಿದರು.
24 ರಂದು ಮತ ಎಣಿಕೆ: ಮತ ಎಣಿಕೆ ಕಾರ್ಯವು ಜೂ.24ರಂದು ಬೆಳಗ್ಗೆ 8ರಿಂದ ಬೆಂಗಳೂರಿನ ಮಹಾರಾಣಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಯುವುದು ಎಂದು ಅವರು ತಿಳಿಸಿದರು. ಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ವಿಶೇಷ ಭೂಸ್ವಾಧೀನಾಧಿಕಾರಿ ಪಿ.ಜಯಮಾಧವ, ಚುನಾವಣಾ ತಹಸೀಲ್ದಾರ್ ಹೊನ್ನಶ್ಯಾಮೇಗೌಡ ಹಾಜರಿದ್ದರು.
ಎಪಿಕ್ ಕಾರ್ಡ್ ಕಡ್ಡಾಯ: ಚುನಾವಣೆಯಲ್ಲಿ ಮತದಾರರು ಚುನಾವಣಾ ಗುರುತಿನ ಚೀಟಿ ಹಾಜರುಪಡಿಸುವುದು ಕಡ್ಡಾಯವಾಗಿದೆ. ಎಪಿಕ್ ಕಾರ್ಡ್ ಇಲ್ಲದಿದ್ದಲ್ಲಿ ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಕೇಂದ್ರ, ರಾಜ್ಯ, ಸರ್ಕಾರಿ ಸ್ವಾಮ್ಯದ ಸಾರ್ವಜನಿಕ ಉದ್ದಿಮೆಗಳು ನೀಡಿರುವ ಭಾವಚಿತ್ರವಿರುವ ಗುರುತಿನ ಕಾರ್ಡ್ಗಳು, ಪಾನ್ ಕಾರ್ಡ್, ಆಧಾರ್ ಕಾರ್ಡ್ ಸೇರಿದಂತೆ ಚುನಾವಣಾ ಆಯೋಗ ನಿಗದಿಪಡಿಸಿರುವ ಯಾವುದಾದರೊಂದ ದಾಖಲಾತಿಯನ್ನು ಹಾಜರುಪಡಿಸಿ ಮತ ಚಲಾಯಿಸಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.