ಪಹಣಿಗಾಗಿ ಕಾಯುವುದೇ ಕೆಲಸ
ಚನ್ನಪಟ್ಟಣ : ತಾಲೂಕು ಕಚೇರಿಯಲ್ಲಿ ಒಂದೇ ಪಹಣಿ ವಿತರಣಾ ಕೇಂದ್ರ ಇದ್ದು, ತಾಲೂಕಿನ ಎಲ್ಲಾ ಗ್ರಾಮಗಳಿಗೆ ಇಲ್ಲೇ ಪಹಣಿ ವಿತರಣೆ ಪಡೆಯುವ ಅನಿವಾರ್ಯತೆ ಎದುರಾಗಿದೆ. ಪಹಣಿಗಾಗಿ ತಾಲೂಕಿನ ರೈತರು ದಿನಪೂರಾ ಕಾಯ್ದು ನಿಲ್ಲುವಂತಾಗಿದೆ.
ಕೆಲ ರೈತರು ಪಹಣಿಗಾಗಿ ಬೆಳಿಗ್ಗೆ 5ಗಂಟೆಯಿಂದಲೇ ಸರತಿಯ ಸಾಲಿನಲ್ಲಿ ನಿಂತರೂ ಕೆಲವೊಮ್ಮೆ ಪಹಣಿ ಸಿಗದೆ ಬರಿಗೈಯಲ್ಲಿ ವಾಪಸಾಗಿರುವ ಉದಾಹರಣೆ ಸಾಕಷ್ಟಿವೆ. ಕಚೇರಿ ಮುಂಭಾಗದಲ್ಲಿ ಪಹಣಿ ಪಡೆಯಲು ರೈತರ ದೊಡ್ಡ ಸಾಲು ನಿಲ್ಲುವುದರಿಂದ ಇತರೆ ಕಚೇರಿ ಕೆಲಸಕ್ಕೆ ಬರುವ ಮಂದಿಗೆ ಅಡಚಣೆಯಾಗುತ್ತಿದೆ. ತಿದ್ದುಪಡಿ, ಬಿತ್ತನೆ ಬೀಜ, ಬ್ಯಾಂಕ್ಗಳಲ್ಲಿ ಸಾಲ ಪಡೆಯಲು, ಜಮೀನು ಮಾರಾಟ, ಖಾತೆ ಬದಲಾವಣೆ, ಒಬಿಸಿ ಪ್ರಮಾಣಪತ್ರ ಹೀಗೆ ಹತ್ತು ಹಲವು ಕಾರಣಗಳಿಗೆ ರೈತರಿಗೆ ಪಹಣಿ ಅತ್ಯಗತ್ಯವೆನಿಸಿದೆ. ಸಾವಿರಾರು ಮಂದಿಗೆ ಒಂದೇ ಕೇಂದ್ರದಿಂದ ಪಹಣಿ ವಿತರಣೆ ಮಾಡುವುದು ದುಸ್ಥರ ವೆನಸಿದ್ದು ಇದರಿಂದಾಗಿ ಸಮಸ್ಯೆ ಉಲ್ಬಣ ಗೊಂಡಿದೆ.
ಹೆಚ್ಚುವರಿ ಕೇಂದ್ರ ಸ್ಥಾಪಿಸಿ: ಪ್ರತಿನಿತ್ಯ ಪಹಣಿ ಪಡೆಯಲು ಸಾವಿರಾರು ಮಂದಿ ತಾಲೂಕು ಕಚೇರಿಗೆ ಬರುವುದರಿಂದ ಪಹಣಿ ವಿತರಣೆ ವಿಳಂಬವಾಗುತ್ತಿದೆ. ತಾಲೂಕು ಕಚೇರಿಯಲ್ಲಿ ಹೆಚ್ಚುವರಿಯಾಗಿ ಮತ್ತೊಂದು ಪಹಣಿ ವಿತರಣಾ ಕೇಂದ್ರ ಸ್ಥಾಪಿಸಬೇಕೆಂದು ಹಿಂದಿನಿಂದಲೂ ಹಲವಾರು ಸಂಘ ಸಂಸ್ಥೆಗಳು ಕಂದಾಯ ಇಲಾಖೆ ಅಧಿಕಾರಿಗಳನ್ನು ಆಗ್ರಹಿಸುತ್ತಾ ಬಂದಿದ್ದಾರಾದರೂ ಇಲಾಖೆ ಈ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ನೆಮ್ಮದಿ ಕೇಂದ್ರಗಳಲ್ಲಿ ಪಹಣಿ ವಿತರಣೆಗೆ ವ್ಯವಸ್ಥೆ ಮಾಡಲಾಗಿತ್ತಾದರೂ ಇತ್ತೀಚಿಗೆ ನೆಮ್ಮದಿ ಕೇಂದ್ರದಿಂದ ಪಹಣಿ ನೀಡದೆ ತಾಲೂಕು ಕಚೇರಿಗೆ ಹೋಗಿ ಪಹಣಿ ಪಡೆಯುವಂತೆ ತಿಳಿಸುತ್ತಿದ್ದು ಇದರಿಂದಾಗಿ ರೈತರು ಪರದಾಡುವಂತಾಗಿದೆ. ತಾಲೂಕು ಕಚೇರಿಯಲ್ಲಿ ಮತ್ತೊಂದು ಹೆಚ್ಚುವರಿ ಕೇಂದ್ರವನ್ನು ತೆರೆದು ರೈತರಿಗೆ ಪಹಣಿವಿತರಣೆ ಮಾಡಲು ಮುಂದಾದಲ್ಲಿ ರೈತರ ಪರದಾಟ ತಪ್ಪಲಿದೆ.