ಶೋಷಿತರ ಅಸ್ತಿತ್ವಕ್ಕೆ ಹೋರಾಟ ಅನಿವಾರ್ಯ
ದೊಡ್ಡಬಳ್ಳಾಪುರ: ಶೋಷಿತ ಸಮುದಾಯಗಳು ತಮ್ಮ ಹಕ್ಕು ಮತ್ತು ಅಸ್ತಿತ್ವದ ಪ್ರತಿಪಾದನೆಗಾಗಿ ಇಂದಿಗೂ ಹೋರಾಟ ಮಾಡಬೇಕಾಗಿರುವುದು ದುರಂತ ಎಂದು ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕಾರಹಳ್ಳಿ ಶ್ರೀನಿವಾಸ್ ಅಭಿಪ್ರಾಯಪಟ್ಟರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ಭಗವಾನ್ ಬುದ್ಧ ಸಮುದಾಯ ಅಭಿವೃದ್ಧಿ ಸಂಸ್ಥೆ ನೇತೃತ್ವದಲ್ಲಿ ಇಲ್ಲಿನ ವಿವಿಧ ಬಡಾವಣೆಗಳಲ್ಲಿ ನಡೆದ ಬೀದಿ ನಾಟಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.
ಸಾಂಸ್ಕೃತಿಕ ವಿಸ್ಮೃತಿ ಇಂದು ಜನರನ್ನು ಆವರಿಸಿದೆ. ಸಂಸ್ಕೃತಿಯ ಮಡಿವಂತಿಕೆ ಬಿಟ್ಟು ಹೊರಬರಲು ಯಾರೂ ಸಿದ್ಧರಿಲ್ಲ. ಹೀಗಾಗಿ ಸಮುದಾಯದ ಬೆಳವಣಿಗೆಗೆ ಬೇಕಾದ ಐತಿಹಾಸಿಕ ಸತ್ಯಗಳು ಮರೆಯಾಗುತ್ತಿವೆ. ಬದುಕು ಕಟ್ಟಿಕೊಳ್ಳುವ ಚಿಂತನೆಗಳು ಬೆಳೆಯುತ್ತಿಲ್ಲ.
ಸೋಗಲಾಡಿತನದ ಪರಮಾವಧಿ ಬುದ್ಧಿಜೀವಿ ವಲ ಯವನ್ನು ಆಕ್ರಮಿಸಿದೆ. ದಿನೇದಿನೇ ದಲಿತರ ಮೇಲೆ ದೌರ್ಜನ್ಯ, ದಬ್ಬಾಳಿಕೆ ಹೆಚ್ಚುತ್ತಿದೆ.
ರಾಜಕಾರಣ ಜನರ ಭಾವನೆಗಳನ್ನು ಹೈಜಾಕ್ ಮಾಡುವ ಅಸ್ತ್ರವಾಗಿದೆ. ಹಲವು ಗ್ರಾಮಗಳಲ್ಲಿ ದಲಿತರಿಗೆ ಇಂದಿಗೂ ದೇವಾಲಯ ಪ್ರವೇಶ ನಿಷಿದ್ಧವಿದೆ.
ಇದು ಪ್ರಜಾಪ್ರಭುತ್ವದ ತಳಹದಿಯನ್ನೇ ಪ್ರಶ್ನಿಸುವಂತಿದೆ. ಸಾಮಾಜಿಕ ಹಕ್ಕುಗಳ ಬಗ್ಗೆ ಮಾತನಾಡುವ ಜನ ಈ ಬಗೆಯ ಮುಖವಾಡದೊಳಗಿನ ಶಕ್ತಿಗಳ ಕುರಿತು ಎಚ್ಚರದಿಂದ ಇರಬೇಕು ಎಂದರು.
ಬೆಂಗಳೂರಿನ ಸಂಸ ಥಿಯೇಟರ್ ತಂಡ ಇಲ್ಲಿನ ವೀರಭದ್ರನಪಾಳ್ಯ, ಕಚೇರಿಪಾಳ್ಯ ಸೇರಿದಂತೆ ವಿವಿಧ ಬಡಾವಣೆಗಳಲ್ಲಿ ಬೆಲ್ಚಿ(80ರ ದಶಕದಲ್ಲಿ ಬಿಹಾರದ ಬೆಲ್ಚಿ ಗ್ರಾಮದಲ್ಲಿ ನಡೆದ ದಲಿತರ ಸಾಮೂಹಿಕ ಹತ್ಯಾಕಾಂಡ ಆಧಾರಿತ ಸಿ.ಜಿ. ಕೃಷ್ಣಸ್ವಾಮಿ ಅವರ ರಂಗ ಪ್ರಯೋಗ) ನಾಟಕ ಪ್ರದರ್ಶನ ನೀಡಿದರು.
ಕಾರ್ಯಕ್ರಮದಲ್ಲಿ ಸಂಸ ಥಿಯೇಟರ್ ತಂಡದ ಕೆ.ವಿ. ನಾಯಕ್, ಭಗವಾನ್ ಬುದ್ಧ ಸಮುದಾಯ ಅಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ರಾಜು ಸಣ್ಣಕ್ಕಿ, ರಮೇಶ್ ಸಂಕ್ರಾಂತಿ, ಶಿವಕುಮಾರ್ ಮತ್ತಿತರರು ನಾಟಕದಲ್ಲಿ ಭಾಗವಹಿಸಿದ್ದರು.