ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಶಿಕ್ಷಕರ ಕ್ಷೇತ್ರ; ಶೇ.73.40 ಮತದಾನ

Vishwanath S
Updated On : 21 Jun 2014, 12:12 pm

ರಾಮನಗರ: ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದ ವಿಧಾನಪರಿಷತ್ತಿನ ಸ್ಥಾನಕ್ಕೆ ಗುರುವಾರ ನಡೆದ ಚುನಾವಣೆ ಜಿಲ್ಲೆಯ 4 ಮತಗಟ್ಟೆಗಳಲ್ಲಿ ಬಿರುಸಿನಿಂದ ನಡೆದಿದ್ದು, ಶೇ. 73.40ರಷ್ಟು ಮತ ಚಲಾವಣೆಯಾಗಿದೆ.
ಜಿಲ್ಲೆಯ 4 ತಾಲೂಕು ಕೇಂದ್ರಗಳ ತಹಸೀಲ್ದಾರ್ ಕಚೇರಿಗಳಲ್ಲಿ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಶಿಕ್ಷಕ ಮತದಾರರು ಅತ್ಯುತ್ಸಾಹದಿಂದಲೇ ಮತ ಚಲಾಯಿಸಿದರು. ರಾಮನಗರದಲ್ಲಿ ಶೇ.72, ಚನ್ನಪಟ್ಟಣದಲ್ಲಿ ಶೇ.70, ಕನಕಪುರದಲ್ಲಿ ಶೇ.80 ಹಾಗೂ ಮಾಗಡಿಯಲ್ಲಿ ಶೇ.71ರಷ್ಟು ಮತ ಚಲಾವಣೆಯಾಗಿವೆ.
ಜಿಲ್ಲೆಯ ಒಟ್ಟು 2751 ಮತದಾರರಲ್ಲಿ 2014 ಮಂದಿ ಮತ ಚಲಾಯಿಸಿದ್ದಾರೆ. ರಾಮನಗರದಲ್ಲಿನ 669 ಮತದಾರರ ಪೈಕಿ 483, ಚನ್ನಪಟ್ಟಣದಲ್ಲಿ 897 ಮತದಾರರ ಪೈಕಿ 626, ಕನಕಪುರದಲ್ಲಿನ 663 ಮತದಾರರಲ್ಲಿ 532 ಹಾಗೂ ಮಾಗಡಿಯ 522 ಮತದಾರರ ಪೈಕಿ 373 ಮಂದಿ ಮತದಾನ ಮಾಡಿದ್ದಾರೆ.
ಮಾಗಡಿ:ಶೇ.72 ರಷ್ಟು ಮತದಾನ ನಡೆದಿದೆ ಎಂದು ಚುನಾವಣಾ ಉಸ್ತವಾರಿಯಾಗಿರುವ ತಹಸೀಲ್ದಾರ್ ಶಿವಕುಮಾರ್ ತಿಳಿಸಿದರು.
ತಾಲೂಕು ಕಚೇರಿ ಸಭಾಂಗಣದಲ್ಲಿ ಬೆಳಿಗ್ಗೆ 8 ಗಂಟೆಗೆ ಆರಂಭಗೊಂಡ ಮತದಾನದಲ್ಲಿ ಒಟ್ಟು ಶೇ.72 ರಷ್ಟು ಮತದಾನ ನಡೆದಿದೆ. ಬೆಳಿಗ್ಗೆ ಪಕ್ಷೇತರ ಅಭ್ಯರ್ಥಿಯೊಬ್ಬರು ರಾಜಕೀಯ ಪಕ್ಷಗಳ ಮುಖಂಡರು ನೀತಿ ಸಂಹಿತೆ ಉಲ್ಲಂಘನೆ ಮಾಡುತ್ತಿದ್ದಾರೆ ಎಂದು ಉಭಯ ಪಕ್ಷಗಳ ಮುಖಂಡರ ನಡುವೆ ಮಾತಿಗಿಳಿದು ಮಾತಿನ ಚಕಮುಕಿ ನಡೆದ ಘಟನೆ ನಡೆದಿದೆ.
ದೊಡ್ಡಬಳ್ಳಾಪುರ: ಶಾಂತಿಯುತವಾಗಿ ಮತದಾನವಾಗಿದೆ. ಬೆಳಗ್ಗೆ ನೀರಸವಾಗಿ ಆರಂಭವಾದ ಮತದಾನ 11 ಗಂಟೆಯ ನಂತರ ಬಿರುಸುಗೊಂಡಿತು. ತಾಲೂಕಿನ ನಾನಾ ಶಾಲಾ ಕಾಲೇಜುಗಳ ಅಧ್ಯಾಪಕರು, ಉಪನ್ಯಾಸಕರು ಮತದಾನ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.
ಇಲ್ಲಿನ ತಾಲೂಕು ಕಚೇರಿಯ ಸಭಾಂಗಣದಲ್ಲಿ ಮತಗಟ್ಟೆ ಸ್ಥಾಪಿಸಲಾಗಿತ್ತು. ತಾಲೂಕಿನಾದ್ಯಂತ ಒಟ್ಟು  803 ಅರ್ಹ ಶಿಕ್ಷಕ-ಉಪನ್ಯಾಸಕರು ಮತದಾನದ ಹಕ್ಕು ಪಡೆದಿದ್ದರು. ಆ ಪೈಕಿ ಶೇ.90ಕ್ಕೂ ಹೆಚ್ಚು ಶಿಕ್ಷಕರು ಮತದಾನ ಮಾಡಿದ್ದಾರೆ.
ಆನೇಕಲ್ಲು: ರಾಜ್ಯ ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಆನೇಕಲ್ ತಾಲೂಕಿನಲ್ಲಿ 2 ಮತಗಟ್ಟೆಗಳನ್ನು ಏರ್ಪಡಿಸಿದ್ದು ಶೇ.59 ಮತದಾನ ನಡೆದಿದೆ ಎಂದು ತಹಸೀಲ್ದಾರ್ ಅನಿಲ್ ಕುಮಾರ್ ತಿಳಿಸಿದ್ದಾರೆ. ಶುಕ್ರವಾರ ಬೆಳಗ್ಗೆ 8 ಗಂಟೆಯಿಂದ 4 ಗಂಟೆವರೆಗೆ ಶಾಂತಿಯುತ ಮತದಾನ ನಡೆಯಿತು. ಆನೇಕಲ್ ಟೌನ್, ಕಸಬ ಹಾಗೂ ಜಿಗಣಿ ಹೋಬಳಿಗೆ ಸೇರಿದಂತೆ ಆನೇಕಲ್ ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಮತಗಟ್ಟೆ ಇತ್ತು. ಒಟ್ಟು 328 ಮತಗಳ ಪೈಕಿ 208 ಮತಗಳು ಚಲಾವಣೆಯಾಗಿ 125 ಶಿಕ್ಷಕರು ಹಾಗೂ 83 ಶಿಕ್ಷಕಿಯರು ಪಾಲ್ಗೊಂಡು ಶೇ.63 ಮತದಾನ ನಡೆಯಿತು. ಶಿರಸ್ತೇದಾರ್ ಬಸವರಾಜಯ್ಯ ಚುನಾವಣಾಧಿಕಾರಿಙಯಾಗಿ ಕರ್ತವ್ಯ ನಿರ್ವಹಿಸಿದರು.
ಅತ್ತಿಬೆಲೆ ಹಾಗೂ ಸರ್ಜಾಪುರ ಹೋಬಳಿಗೆ ಸಂಬಂಧಿಸಿದಂತೆ ಅತ್ತಿಬೆಲೆ ನಾಡ ಕಚೇರಿಯಲ್ಲಿ ಮತಗಟ್ಟೆಯಿದ್ದು ಒಟ್ಟು 771 ಮತಗಳಿದ್ದವು. 253 ಶಿಕ್ಷಕಿಯರು ಹಾಗೂ 185 ಶಿಕ್ಷಕರು ಸೇರಿದಂತೆ 438 ಮತಗಳು ಚಲಾವಣೆಯಾದವು. ಶೇ.56 ಮತದಾನ ನಡೆಯಿತು ಎಂದು ಚುನಾವಣಾಧಿಕಾರಿ ಕೃಷ್ಣಯ್ಯ ತಿಳಿಸಿದರು.
ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳ ಮುಖಂಡರು ಶಿಕ್ಷಕರಲ್ಲಿ ಮತಯಾಚಿಸುತ್ತಿದ್ದುದು ಸಾಮಾನ್ಯವಾಗಿತ್ತು.
ಕನಕಪುರ: ಮತದಾನ ಬಿರುಸಿನಿಂದ ನಡೆಯಿತು. ಚುನಾವಣಾಧಿಕಾರಿಗಳಾಗಿ ತಹಸೀಲ್ದಾರ್ ಶಿವರುದ್ರಪ್ಪ ಕಾರ್ಯನಿರ್ವಹಿಸಿದರು. ತಾಲೂಕು ಕಚೇರಿ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಕನಕಪುರ ತಾಲೂಕಿನಲ್ಲಿ ಒಟ್ಟಾರೆ 663 ಮತದಾರರಲ್ಲಿ 532 ಮಂದಿ ಮತ ಚಲಾಯಿಸಿದರು. ಒಟ್ಟಾರೆ ಶೇ.80 ರಷ್ಟು ಮತದಾನ ನಡೆಯಿತು. ಬೆಳಗಿನಿಂದಲೇ ಶಿಕ್ಷಕರು ತಾಲೂಕು ಕಚೇರಿಗೆ ಆಗಮಿಸಿ ಮತ ಚಲಾಯಿಸಿದರು.
ನೋಂದಾಯಿತ ಶಿಕ್ಷಕರ ಮತದಾರರ ಪಟ್ಟಿಯಲ್ಲಿ ಕೆಲವು ಹಿತಾಸಕ್ತಿಗಳ ಷಡ್ಯಂತ್ರದಿಂದ ಅರ್ಹ ಮತದಾರ ಶಿಕ್ಷಕರುಗಳ ಹೆಸರುಗಳನ್ನು ರದ್ದುಗೊಳಿಸಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು. ಕಿಡಿಗೇಡಿಗಳ ಕಿತಾಪತಿಗೆ ಅರ್ಹ ಮತದಾರರು ಮತಚಲಾಯಿಸಲಾಗದೆ ಕೈಕೈ ಹಿಸುಕಿ ಕೊಳ್ಳುವಂತಾಗಿದ್ದು ವಿಪರ್ಯಾಸವಾಗಿತ್ತು.
ದೇವನಹಳ್ಳಿ: ದೇವನಹಳ್ಳಿಯ ನಡೆದ  ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ  383 ಮಂದಿ ಮತದಾರರಿದ್ದು ಅವರಲ್ಲಿ 200 ಮಂದಿ ಪುರುಷರು ಹಾಗೂ 90 ಮಂದಿ ಮಹಿಳೆಯರು ತಮ್ಮ ಮತ ಚಲಾಯಿಸಿದ್ದು ಶೇ.75.72 ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಎಂಟು ಮಂದಿ ಸ್ಪರ್ಧಿಸಿದ್ದರೂ ಅವರಲ್ಲಿ ಬಿಜೆಪಿ ಪಕ್ಷದ ಎಂ. ನೀಲಯ್ಯ ಹಾಗೂ ಜೆಡಿಎಸ್ ಪುಟ್ಟಣ್ಣ  ನಡುವೆ ನೇರ ಸ್ಪರ್ಧೆ ಕಂಡು ಬಂತು.
 ಮತದಾರರ ಪಟ್ಟಿಯಲ್ಲಿ 473 ಮಂದಿ ಮತದಾರರ ಹೆಸರಿದ್ದು ಅವರಲ್ಲಿ 90 ಮಂದಿಯ ಹೆಸರನ್ನು ಕಾರಣವಿಲ್ಲದೆ  ಹೊಡೆದು ಹಾಕಿರುವುದು ಸರಿಯಲ್ಲ ಎಂದು ವಿಜಯಪುರ ಪ್ರಗತಿ ಮಹಿಳಾ ಕಾಲೇಜಿನ ಪ್ರಾಂಶುಪಾಲ ರಮೇಶ್ ಪತ್ರಕರ್ತರಿಗೆ ತಿಳಿಸಿದರು.  ನಮ್ಮ ಕಾಲೇಜಿನಲ್ಲಿ ಕಾರ್ಯ ನಿರ್ವಹಿಸುತ್ತಿರುವ 51 ಮಂದಿ ಶಿಕ್ಷಕರಲ್ಲಿ 10 ಮಂದಿಯ ಹೆಸರು ಹೊಡೆದು ಹಾಕಲಾಗಿದ್ದು, ಅಧಿಕಾರಿಗಳಲ್ಲಿ ವಿಚಾರಿಸಿದರೆ ಹಾರಿಕೆ ಉತ್ತರ ಕೊಡುತ್ತಾರೆ ಎಂದು ಆರೋಪಿಸಿದರು.
ನೆಲಮಂಗಲ: ಬೆಂಗಳೂರು  ಶಿಕ್ಷಕರ  ಕ್ಷೇತ್ರದ  ಚುನಾವಣೆಯ  ಮತದಾನ ತಾಲೂಕು  ಕಚೇರಿಯಲ್ಲಿ ಶುಕ್ರವಾರ ಬಹುತೇಕ ಶಾಂತಿಯುತವಾಗಿ ನಡೆಯಿತು.ತಾಲೂಕಿನಲ್ಲಿ ಶೇಕಡ 62.48 ಮತದಾನ ನಡೆದಿದೆ. ಶಿಕ್ಷಕ, ಶಿಕ್ಷಕಿಯರು ಬಹಳ ಉತ್ಸುಕತೆಯಿಂದ ಬೆಳಗ್ಗೆ 8 ರಿಂದ ಸಂಜೆ 4 ರವರೆಗೂ ಮತದಾನ ಕೇಂದ್ರಕ್ಕೆ ತೆರಳಿ ತಮ್ಮ ತಮ್ಮ ನಾಯಕನ ಆಯ್ಕೆಗೆ ಚಾಲನೆ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement