ಒಳ ಚರಂಡಿ ಅವ್ಯವಸ್ಥೆ: ಗಬ್ಬೆದ್ದು ನಾರುತ್ತಿದೆ ಮಾಗಡಿ
ಮಾಗಡಿ: ವರ್ಷಗಳಿಂದಲೂ ಪಟ್ಟಣದಲ್ಲಿ ನಡೆಯುತ್ತಿರುವ ಒಳಚರಂಡಿ ಕಾಮಗಾರಿ ಮತ್ತು ಶೌಚಾಲಯದ ಅವ್ಯವಸ್ಥೆಯಿಂದಾಗಿ ಮಾಗಡಿ ಗಬ್ಬೆದ್ದು ನಾರುತ್ತಿದೆ ಎಂದು ಪುರಸಭಾ ಸದಸ್ಯರು ಸಭೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
ಪಟ್ಟಣದ ಪುರಸಭಾಧ್ಯಕ್ಷೆ ಫಹೀಮ್ ಉನ್ನಿಸಾ ಅವರ ಅಧ್ಯಕ್ಷತೆಯಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಮಾತನಾಡಿ ಒಳಚರಂಡಿಗೆ ಮನೆಗಳ ಶೌಚಾಲಯದ ಲಿಂಕ್ ಸಂಪರ್ಕ ನೀಡಲು 4 ಸಾವಿರದಿಂದ ಐದಾರು ಸಾವಿರ ರು.ಗಳಷ್ಟು ಬೇಕಾಬಿಟ್ಟಿ ಹಣ ವಸೂಲಿ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಅಷ್ಟೊಂದು ಹಣ ಕಡುಬಡವರು ಕಟ್ಟಲು ಸಾಧ್ಯವೇ ಎಂದು ಪ್ರಶ್ನಿಸಿದರು.ಬಹುತೇಕ ಕಡೆ ಕಾಂಕ್ರಿಟ್ ರಸ್ತೆಗಳು ಅಭಿವೃದ್ಧಿಯಾಗಿದೆ.
ಅಭಿವೃದ್ಧಿಯಾಗಿರುವ ಕಡೆ ಒಳಚರಂಡಿ ಕಾಮಗಾರಿ ಆರಂಭಿಸಲಾಗುತ್ತಿದೆ. ಈ ರೀತಿ ಕಾಮಗಾರಿ ಆರಂಭಿಸಿದರೆ ಕಾಂಕ್ರಿಟ್ ರಸ್ತೆ ಹಾಳಾಗಿ ಪುರಸಭೆಯ ಹಣ ನಷ್ಟವಾಗುವುದಿಲ್ಲವೇ ಎಂದು ಸದಸ್ಯರಾದ ಎಂ.ಎನ್.ಮಂಜುನಾಥ್, ಕೆ.ವಿ. ಬಾಲು ಅಧಿಕಾರಿಗಳನ್ನು ಪ್ರಶ್ನಿಸಿದರು.
ನೀರಿಲ್ಲದ ಕೊಳವೆ ಬಾವಿಗಳನ್ನು ಮುಚ್ಚುವಂತೆ ಕಳೆದ ಆರು ತಿಂಗಳಿನಿಂದಲೂ ಹೇಳುತ್ತಾ ಬಂದರೂ ಇಲ್ಲಿಯವರೆಗೂ ಕೊಳವೆ ಬಾವಿಗಳ ಬಾಯಿಗೆ ಮುಚ್ಚಲ ಅಳವಡಿಸಿಲ್ಲ, ಮುಂಜಾಗೃತೆಯಿಂದ ನೀರಿಲ್ಲದ ಕೊಳವೆ ಬಾವಿಗಳಿಗೆ ಮುಚ್ಚಲ ಹಾಕಿ, ಸಂಭವಿಸುವ ಅನಾಹುತ ತಪ್ಪಿಸುವಂತೆ ಸದಸ್ಯ ನಾಗೇಂದ್ರ ಸಭೆಯಲ್ಲಿ ಅಧಿಕಾರಿಗಳಿಗೆ ತಾಕೀತು ಮಾಡಿದರು. ಕಲ್ಯಗೇಟ್ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್ ಅಳವಡಿಸಿಲ್ಲ, ಪಟ್ಟಣದಲ್ಲಿ ಪಾರ್ಕಿಂಗ್ ವ್ಯವಸ್ಥೆಯಿಲ್ಲ, ನೀರು ಪೋಲಾಗುತ್ತಿದ್ದರೂ ಓವರ್ ಹೆಡ್ ಟ್ಯಾಂಕ್ಗಳ ಲಿಕೇಜ್ ಸರಿಪಡಿಸಿಲ್ಲ, ಬೀಡಾಡಿ ದನಗಳನ್ನು ಹಿಡಿದು ಮಾಲೀಕರಿಗೆ ದಂಡವಿಧಿಸುತ್ತಿಲ್ಲ. ಸರಿಯಾಗಿ ತೆರಿಗೆ ವಸೂಲಾತಿಯಿಲ್ಲ. ಬೀದಿನಾಯಿಗಳ ಹಾವಳಿ ತಪ್ಪಿಲ್ಲ, ಹೀಗಾದರೆ ಜನ ನೆಮ್ಮದಿಯಿಂದ ಜೀವಿಸಲು ಸಾಧ್ಯವೆ, ಕೂಡಲೆ ಈ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಂತೆ ಅಧಿಕಾರಿಗಳಿಗೆ ಸದಸ್ಯ ನಾಗೇಂದ್ರ ಸೂಚಿಸಿದರು.
ರಿಪೇರಿ ಮಾಡಿಸಿಲ್ಲ: ಕಳೆದ ಆರು ತಿಂಗಳಿಂದ ಪುರಸಭೆಯ ಜೆಸಿಬಿ ರಿಪೇರಿ ಮಾಡಿಸಿಲ್ಲ. ಕೂಡಲೆ ರಿಪೇರಿ ಮಾಡಿಸುವಂತೆ ಸದಸ್ಯ ರಘು ಸಭೆ ಗಮನಕ್ಕೆ ತಂದರು.
ಕವಿಂಪುಂಗರ ಹೆಸರು ನಾಮಕರಣ: ಪಟ್ಟಣದ ಬಡಾವಣೆಗಳಿಗೆ ಕವಿ, ಸಾಹಿತಿಗಳ, ಸ್ವಾತಂತ್ರ್ಯ ಹೋರಾಟಗಾರರ ನಾಮಕರಣ ಮಾಡಲು ಸಭೆ ತೀರ್ಮಾನಿಸಿತು.
ತೆರಿಗೆ ಹೆಚ್ಚಳ: ಪುರಸಭಾ ವ್ಯಾಪ್ತಿಯಲ್ಲಿರುವ ಮನೆ ಮತ್ತು ಅಂಗಡಿ ಮಳಿಗೆಗಳಿಗೆ ಶೇ.30 ರಷ್ಟು ತೆರಿಗೆ ಹೆಚ್ಚಳ ಮಾಡುವಂತೆ ಈಗಾಗಲೇ ಸರ್ಕಾರದಿಂದ ಆದೇಶ ಬಂದಿದೆ. ಈ ಬಗ್ಗೆ ಚರ್ಚಿಸಿದ ಸದಸ್ಯರು ಶೇ.20 ರಷ್ಟು ಮನೆಗಳ ತೆರಿಗೆ ಸಂಗ್ರಹಿಸಿ, ವಾಣಿಜ್ಯ ಬಳಕೆಯ ಅಂಗಡಿ ಮಳಿಗೆಗಳಿಗೆ ಶೇ.30 ತೆರಿಗೆ ಸಂಗ್ರಹಿಸಲು ಒಕ್ಕರಲಿನ ತೀರ್ಮಾನ ಕೈಗೊಳ್ಳಲಾಯಿತು. ಅಧಿಕಾರಿಗಳು ಸದಸ್ಯರೊಂದಿಗೆ ಸ್ಪಂದಿಸುವ ಮೂಲಕ ಉತ್ತಮ ರೀತಿಯಲ್ಲಿ ಕೆಲಸ ಮಾಡುವಂತೆ ಸಭೆಯಲ್ಲಿ ಸದಸ್ಯರು ತಾಕೀತು ಮಾಡಿದರು.