ಗಬ್ಬು ನಾರಲು ನೂಲು ಕೇಂದ್ರ ಕಾರಣ
ರಾಮನಗರ: ಜಿಲ್ಲಾ ಕೇಂದ್ರ ರಾಮನಗರವು ಗಬ್ಬು ನಾರುವಂತಾಗಿರಲು ಇಲ್ಲಿರುವ ರೇಷ್ಮೆ ನೂಲು ಬಿಚ್ಚಾಣಿಕೆ ಕೇಂದ್ರ, ಕಸಾಯಿಖಾನೆಗಳು, ಮಾಂಸದ ಅಂಗಡಿಗಳ ತ್ಯಾಜ್ಯ ಬೇಕಾಬಿಟ್ಟಿಯಾಗಿ ವಿಲೇವಾರಿ ಆಗುತ್ತಿರುವುದು ಪ್ರಮುಖ ಕಾರಣವಾಗಿದೆ.
ರಾಮನಗರ ಒಂದೇ ಕಡೆ ಸಾವಿರಕ್ಕೂ ಹೆಚ್ಚು ರೇಷ್ಮೆ ನೂಲು ಬಿಚ್ಚಾಣಿಕೆ ಕೇಂದ್ರಗಳಿವೆ. ರೇಷ್ಮೆ ಗೂಡುಗಳನ್ನು ಬಿಸಿ ನೀರು ಇಲ್ಲವೇ ಹಬೆಯಲ್ಲಿ ಬೇಯಿಸಿ ನೂಲು ತೆಗೆಯಲಾಗುತ್ತದೆ. ಇದರಿಂದ ಸಹಜವಾಗಿಯೇ ಸುತ್ತಮುತ್ತಲ ಪರಿಸರ ಗಬ್ಬೆದ್ದು ಹೋಗಿದೆ.
ತಡೆಯಲಾಗದ ದುರ್ವಾಸನೆ: ನೂಲು ಬಿಚ್ಚಾಣಿಕೆ ನಂತರ ಉಳಿಯುವ ಸತ್ತ ಹುಳುಗಳನ್ನು ಫಿಲೇಚರ್ ಹೊರಾಂಗಣದಲ್ಲಿ ಒಣಗಿಸಲಾಗುತ್ತದೆ. ಆ ದುರ್ವಾಸನೆಗೆ ಸುತ್ತಮುತ್ತಲ 3-4 ರಸ್ತೆಗಳವರೆಗೂ ಸುತ್ತಾಡದಂತಹ ಸ್ಥಿತಿ ಎದುರಾಗಿದ್ದರೂ ಕೇಳೋರಿಲ್ಲದಂತಾಗಿದೆ.
ಯಾಂತ್ರೀಕೃತ ಹೈಟೆಕ್ ನೂಲು ಬಿಚ್ಚಾಣಿಕೆ ಕೇಂದ್ರಗಳ ಸ್ಥಾಪನೆಗೆ ಸರ್ಕಾರ ಸಬ್ಸಿಡಿ ಕಲ್ಪಿಸಿದ್ದರೂ ಅಳವಡಿಸಿಕೊಂಡವರು ಒಬ್ಬಿಬ್ಬರು ಮಾತ್ರವೇ. ಬಹುಪಾಲು ಉದ್ಯಮಿಗಳು ಇನ್ನೂ ಹಳೆಯ ಕಾಲದ ಬೇಯಿಸುವ ಪದ್ದತಿಗೇ ದುಂಬಾಲು ಬಿದ್ದಿದ್ದಾರೆ. ಈ ತ್ಯಾಜ್ಯವೂ ಎಲ್ಲೆಂದರಲ್ಲಿ ವಿಲೇವಾರಿ ಆಗುತ್ತಿದೆ.
ಮಾಂಸದಂಗಡಿ ತ್ಯಾಜ್ಯ: ರಾಮನಗರದಲ್ಲಿ ಕೋಳಿ, ಕುರಿ ಮಾಂಸದಂಗಡಿಗಳಷ್ಟೇ ಸಂಖ್ಯೆಯಲ್ಲಿ ಕಸಾಯಿಖಾನೆಗಳೂ ಇವೆ. ಈ ಅಂಗಡಿಗಳ ತ್ಯಾಜ್ಯದ್ದೇ ನಗರದ ನಾಗರಿಕರ ಪಾಲಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದ್ದರೂ ಅದನ್ನು ತಡೆಯುವ ನಿಟ್ಟಿನಲ್ಲಿ ಸಂಬಂಧಿಸಿದ ಅಧಿಕಾರಿಗಳಿಂದ ಕ್ರಮವಿಲ್ಲ. ಕಸಾಯಿಖಾನೆಗಳಲ್ಲಿ ದನಗಳನ್ನು ಕಡಿದು ಮಾಂಸ ಮಾರಾಟ ಮಾಡಿ,
ಅಳಿದುಳಿದ ಮೂಳೆ ಮತ್ತಿತರೆ ತ್ಯಾಜ್ಯವನ್ನು ಚೀಲಗಳಿಗೆ ತುಂಬಿ ರಸ್ತೆ ಪಕ್ಕವೇ ಬಿಸಾಡಲಾಗುತ್ತಿದೆ. ಕೋಳಿ ಅಂಗಡಿಯಲ್ಲಿ ರೆಕ್ಕೆಪುಕ್ಕ ಸಹಿತ ತ್ಯಾಜ್ಯವನ್ನು ಹೆದ್ದಾರಿ ಮಗ್ಗುಲಲ್ಲೇ ಎಸೆಯಲಾಗುತ್ತಿದೆ.
ಆಹಾರ ಹುಡುಕುತ್ತಾ ಸಾಗುವ ನಾಯಿಗಳ ಹಿಂಡು ಕಸಾಯಿಖಾನೆ ಮತ್ತು ಮಾಂಸದ ಅಂಗಡಿಗಳ ತ್ಯಾಜ್ಯವನ್ನು ಸುತ್ತಮುತ್ತ ಹರಡಿ, ಪರಿಸರವನ್ನು ಇನ್ನಷ್ಟು ಹಾಳುಗೆಡವುತ್ತಿವೆ. ಇದೇ ನಾಯಿಗಳ ಹಿಂಡು ಕೆಲವೆಡೆ ರಾತ್ರಿ ಇರಲಿ ಹಗಲಲ್ಲೇ ಜನರು ತಿರುಗಾಡದಂತಹ ಸ್ಥಿತಿ ತಂದೊಡ್ಡಿವೆ.
ಬೆಂಗಳೂರು-ಮೈಸೂರು ಹೆದ್ದಾರಿಯ ಇಕ್ಕೆಲಗಳಲ್ಲಿ ಬಿಡದಿಯಿಂದ ಚನ್ನಪಟ್ಟಣದವರೆಗೆ ಎಲ್ಲಿ ನೋಡಿದರೂ ಕೋಳಿ ಅಂಗಡಿಯ ರೆಕ್ಕೆಪುಕ್ಕ, ತ್ಯಾಜ್ಯವೇ ಕಂಡು ಬರುತ್ತಿದೆ. ಈ ಬಗ್ಗೆ ನಗರಸಭೆ ಎಚ್ಚರಿಕೆ ನೀಡಿದ್ದರೂ ವ್ಯಾಪಾರಿಗಳು ಎಚ್ಚೆತ್ತುಕೊಂಡಿಲ್ಲ.
ಯುಜಿಡಿ ಅವ್ಯವಸ್ಥೆ: ರಾಮನಗರದಾದ್ಯಂತ ಒಳ ಚರಂಡಿ ಮತ್ತು ಚರಂಡಿ ಅವ್ಯವಸ್ಥೆಯೂ ಹೇಳ ತೀರದಾಗಿದೆ. ಅವನ್ನು ಕಲುಷಿತ ನೀರು ಸರಾಗವಾಗಿ ಹರಿದು ಹೋಗುವಂತೆ ವೈಜ್ಞಾನಿಕವಾಗಿ ನಿರ್ಮಾಣ ಮಾಡಿಲ್ಲದಿರುವುದರ ಪರಿಣಾಮ ನಾಗರಿಕರು ಪರಿತಪಿಸುವಂತಾಗಿದೆ. ಅದೆಷ್ಟೋ ಕಟ್ಟಡಗಳ ಶೌಚಾಲಯಗಳ ತ್ಯಾಜ್ಯವನ್ನು ಒಳ ಚರಂಡಿ ಬದಲು ಚರಂಡಿಗೇ ಕಲ್ಪಿಸಲಾಗಿದೆ. ಅಸಮರ್ಪಕ ಕಾಮಗಾರಿಯಿಂದಾಗಿ ದಿನಕ್ಕೆ ನಾಲ್ಕಾರು ಕಡೆಯಾದರೂ ಒಳ ಚರಂಡಿ ಕಟ್ಟಿಕೊಂಡು, ಕೊಳಚೆ ನೀರೆಲ್ಲಾ ರಸ್ತೆಗೆ ಹರಿದು ಹೋಗುತ್ತಿರುತ್ತದೆ.
ಆಗಾಗ್ಗೆ ಒಳ ಚರಂಡಿ ಕಟ್ಟಿಕೊಂಡು ರಸ್ತೆಯಲ್ಲಿ ಹರಿಯುವ ತ್ಯಾಜ್ಯದಿಂದ ಬರುತ್ತಿರುವ ದುರ್ವಾಸನೆ ಕಾರಣಕ್ಕೆ ವಾಹನ ಸವಾರರು, ಪಾದಚಾರಿಗಳು ಮೂಗು ಮುಚ್ಚಿಕೊಂಡು ಹೋಗುವ ಸ್ಥಿತಿ ಎದುರಾಗಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಕ್ರಮ ಕೈಗೊಂಡಿಲ್ಲ.
ಮತ್ತೀಕೆರೆ ಜಯರಾಮ್