ವಿದ್ಯಾರ್ಥಿಗಳ ನೆರವಿಗೆ ಸಾಲ ಸೌಲಭ್ಯ
ರಾಮನಗರ: ಬ್ಯಾಂಕುಗಳಿರುವುದು ಗ್ರಾಹಕರಿಗಾಗಿ. ಕೆಲ ನಿಯಮಗಳು ಅನುಸರಿಸಿ, ಅಗತ್ಯ ದಾಖಲಾತಿಗಳನ್ನು ಒದಗಿಸುವ ಮೂಲಕ ಬ್ಯಾಂಕುಗಳು ನೀಡುವ ಸಾಲ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ನ ಬೆಂಗಳೂರು ಭಾಗದ ಮುಖ್ಯ ಪ್ರಾದೇಶಿಕ ವ್ಯವಸ್ಥಾಪಕ ಕೆ.ಅನಿಲ್ ಕರೆ ನೀಡಿದರು.
ನಗರದ ಸರ್ಕಾರಿ ಜೂನಿಯರ್ ಕಾಲೇಜು ಆವಣರದಲ್ಲಿ ಜಿಲ್ಲಾಮಟ್ಟದ ಬ್ಯಾಂಕುಗಳ ಸಮಾಲೋಚನಾ ಸಮಿತಿ ಆಶ್ರಯದಲ್ಲಿ ನಡೆದ ಶಿಕ್ಷಣ ಸಾಲ ಮಾಹಿತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬ್ಯಾಂಕುಗಳು ಗ್ರಾಹಕರ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿವೆ ಎಂದರು.
ಗ್ರಾಮೀಣ ಪ್ರದೇಶದ ಬಡ ವಿದ್ಯಾರ್ಥಿಗಳ ಉನ್ನತ ವ್ಯಾಸಂಗದ ಕನಸನ್ನು ನನಸು ಮಾಡುವ ಉದ್ದೇಶದಿಂದ ಬ್ಯಾಂಕಿಂಗ್ ಕ್ಷೇತ್ರವು ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವ ಯೋಜನೆಗಳನ್ನು ರೂಪಿಸಲಾಗಿದೆ. ಬಡ ವಿದ್ಯಾರ್ಥಿಗಳು ಬ್ಯಾಂಕುಗಳಿಗೆ ತೆರಳಿ ಸಾಲ ಪಡೆದು, ಉನ್ನತ ಶಿಕ್ಷಣ ಪಡೆಯುವ ಮೂಲಕ ಯಶಸ್ಸು ಸಾಧಿಸಬೇಕು ಎಂದು ಸಲಹೆ ನೀಡಿದರು. ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿನ ಉನ್ನತ ಹುದ್ದೆಗಳಲ್ಲಿರುವ ಬಹುತೇಕರು ಗ್ರಾಮೀಣ ಪ್ರದೇಶದಿಂದ ಬಂದವರಾಗಿದ್ದಾರೆ. ಉನ್ನತ ವ್ಯಾಸಂಗದಿಂದ ಉನ್ನತ ಹುದ್ದೆಗಳನ್ನು ಗಳಿಸಬಹುದು. ಹೆಣ್ಣು ಮಕ್ಕಳು ಶಿಕ್ಷಿತಳಾದಲ್ಲಿ ಅವರ ಸಂಸಾರ ಸುಖಮಯವಾಗಿರುವುದು ಎಂದು ಹೇಳಿದರು.
ಅರಿವಿನ ಕೊರತೆ: ಒಬ್ಬ ವ್ಯಕ್ತಿ ಸ್ವಂತ ಪರಿಶ್ರಮದಿಂದ ಬದಲಾವಣೆ ಕ್ರಾಂತಿ ತರಬಲ್ಲ. ಪ್ರಪಂಚ, ದೇಶವನ್ನೆ ಆಳಬಲ್ಲ. ಸಮಾಜವನ್ನು ಬದಲಿಸಬಲ್ಲ. ನಮ್ಮ ಕುಟುಂಬ, ಸಮಾಜದಲ್ಲಿ ಬದಲಾವಣೆ ತರಲು ವಿದ್ಯೆಯಿಂದ ಮಾತ್ರ ಸಾಧ್ಯ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸಾಲ ಪಡೆಯಲು ಇರುವ ಅರಿವಿನ ಕೊರತೆ ನಿವಾರಿಸುವ ಉದ್ದೇಶದಿಂದಲೇ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಿಇಒ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು. ಜಿಲ್ಲೆಯಲ್ಲಿ ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿಯಲ್ಲಿ ಸುಮಾರು 15 ಸಾವಿರ, ಪಿಯುಸಿಯಲ್ಲಿ ಸುಮಾರು 12 ಸಾವಿರ ವಿದ್ಯಾರ್ಥಿಗಳು ತೇರ್ಗಡೆಯಾಗುತ್ತಿದ್ದಾರೆ. ಆದರೆ, ಇವರು ತಾಂತ್ರಿಕ ಕೋರ್ಸುಗಳನ್ನು ಆಯ್ಕೆ ಮಾಡಿಕೊಂಡಿಲ್ಲದಿರುವುದರಿಂದ ಉದ್ಯೋಗ ಗಿಟ್ಟಿಸಲು ಸಾಧ್ಯವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ವೈದ್ಯಕೀಯಕ್ಕೆ ಕೇವಲ ಐವರು ಹಾಗೂ ಎಂಜಿನಿಯರಿಂಗ್ ಕೋರ್ಸ್‌ಗೆ 50ಕ್ಕಿಂತಲೂ ಕಡಿಮೆ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಜಿಲ್ಲೆಯಲ್ಲಿ ಉನ್ನತ ಶಿಕ್ಷಣದ ಬಗ್ಗೆ ಮಾಹಿತಿ ಇಲ್ಲದಿರುವುದು ಇದಕ್ಕೆ ಪ್ರಮುಖ ಕಾರಣವಾಗಿದೆ. ಆರ್ಥಿಕ ಸಬಲತೆ ಗಳಿಸುವ ಆರೋಗ್ಯ, ಐಟಿಐ, ತಾಂತ್ರಿಕ ಶಿಕ್ಷಣದಂತಹ ಕೋರ್ಸುಗಳನ್ನು ಆಯ್ಕೆ ಮಾಡಿಕೊಂಡಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಆರ್ಥಿಕ ನೆರವನ್ನು ಬ್ಯಾಂಕುಗಳು ಒದಗಿಸಲಿವೆ ಎಂದು ಹೇಳಿದರು.
ಡಿಡಿಪಿಐ ಪ್ರಹ್ಲಾದಗೌಡ, ಲೀಡ್ ಬ್ಯಾಂಕ್ ವ್ಯವಸ್ಥಾಪಕ ನಾರಾಯಣ ಮೂರ್ತಿ ಮಾತನಾಡಿದರು. ಇಂಡಿಯನ್ ಓವರ್‌ಸೀಸ್ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಕಾರ್ಪೋರೇಷನ್ ಬ್ಯಾಂಕ್, ವಿಜಯ ಬ್ಯಾಂಕ್, ಎಸ್‌ಬಿಎಂ ಹಾಗೂ ಕಾವೇರಿ ಗ್ರಾಮೀಣ ಬ್ಯಾಂಕುಗಳು ಈ ಕಾರ್ಯಕ್ರಮವನ್ನು ಆಯೋಜಿಸಿದ್ದವು.