ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ದೂರು-ದುಮ್ಮಾನಕ್ಕೆ ಸಹಾಯವಾಣಿ

Mainashree
Updated On : 23 Jun 2014, 11:17 am

ಕ.ಪ್ರ.ವಾರ್ತೆ ರಾಮನಗರ ಜೂ.23
ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದ ಜನರ ದೂರು, ದುಮ್ಮಾನಗಳಿಗೆ ಸ್ಪಂದಿಸುವ ಸಲುವಾಗಿ ಶೀಘ್ರವೇ ಟೋಲ್‌ಫ್ರೀ ಸಹಾಯವಾಣಿ ಆರಂಭಿಸುವುದಾಗಿ ಸಂಸದ ಡಿ.ಕೆ.ಸುರೇಶ್ ಪ್ರಕಟಿಸಿದ್ದಾರೆ.
 ನಗರ ಜಿ.ಪಂ. ಸಭಾಂಗಣದಲ್ಲಿ ಸೋಮವಾರ ಜಿಲ್ಲೆಯ ನರೇಗಾ ಕಾರ್ಯಕ್ರಮಗಳ ಅನುಷ್ಠಾನದ ಪ್ರಗತಿ ಪರಿಶೀಲನೆ ನಡೆಸಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವ ನಿಟ್ಟಿನಲ್ಲಿ ಸಹಾಯವಾಗಿ ಪ್ರಾರಂಭದ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದರು.
 ಜನರು ತಮ್ಮ ದೂರುಗಳನ್ನು ಹೇಳಿಕೊಳ್ಳಲು ಮಾಡುವ ಕರೆಗಳಿಗೆ ಅಧಿಕಾರಿಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಅದೆಷ್ಟೋ ಮಂದಿ ತಮಗೆ ಖುದ್ದು ಇಲ್ಲವೇ ಕರೆ ಮಾಡಿ ದೂರುತ್ತಿದ್ದಾರೆ. ಇದಕ್ಕೆಲ್ಲ ಅಂತ್ಯವಾಡಲು ಸಹಾಯವಾಣಿ ನೆರವಾಗಲಿದೆ ಎಂದು ಹೇಳಿದರು.
ಸ್ವೀಕೃತಿ ಮೆಸೇಜ್: ಕ್ಷೇತ್ರಾದ್ಯಂತ ಜನರ ಕಷ್ಟ, ಕಾರ್ಪಣ್ಯ, ಸಾರ್ವಜನಿಕ ಸಮಸ್ಯೆಗಳನ್ನು ಆಲಿಸಲು ಅಧಿಕಾರಿಗಳಲ್ಲಿ ಕಾಳಜಿ ಕೊರತೆ ಇದೆ. ಅದೆಷ್ಟೋ ಸಮಸ್ಯೆಗಳು ನನ್ನ ಗಮನಕ್ಕೇ ಬರುತ್ತಿಲ್ಲ. ಸಹಾಯವಾಗಿ ಪ್ರಾರಂಭದಿಂದ ಪ್ರತಿಯೊಂದು ಸಮಸ್ಯೆಗೆ ಸ್ಪಂದಿಸಲು ಅವಕಾಶ ಸಿಕ್ಕಂತಾಗುತ್ತದೆ ಎಂದು ಸುರೇಶ್ ತಿಳಿಸಿದರು.
ಸಹಾಯವಾಣಿಗೆ ಕರೆ ಮಾಡಿ ಸಮಸ್ಯೆಗಳನ್ನು ತಿಳಿಸಿದರೆ, ಅದಕ್ಕೆ ನೇಮಕವಾದ ಸಿಬ್ಬಂದಿ ನನ್ನ ಗಮನಕ್ಕೆ ತಂದು ಬಳಿಕ ಅಧಿಕಾರಿಗಳಿಗೆ ರವಾನಿಸುತ್ತಾರೆ. ಸಮಸ್ಯೆ ಆಲಿಸಿದ್ದಕ್ಕೆ ಮೆಸೇಜ್ ಮೂಲಕ ಸ್ವೀಕೃತಿ, ಅದರ ಹಂತವಾರು ವಿವರವನ್ನು ಒದಗಿಸಲಾಗುವುದು ಎಂದು ವಿವರಿಸಿದರು.
ವಿಲೀನ ಪ್ರಸ್ತಾಪವಿಲ್ಲ: ಕೃಷಿ ಜತೆಗೆ ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಯನ್ನು ವಿಲೀನಗೊಳಿಸುವ ಪ್ರಸ್ತಾಪ ಸರ್ಕಾರದ ಮುಂದಿಲ್ಲ. ಈ ವಿಷಯವಾಗಿ
ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಟ್ಟಿಗೆ ತಾವು ಚರ್ಚಿಸಿರುವುದಾಗಿ ಸುರೇಶ್ ಪ್ರತಿಕ್ರಿಯಿಸಿದರು. ಆದರೆ, ಈ ಮೊದಲು ಇದ್ದಂತೆ ಜಲಾನಯನ ಇಲಾಖೆಯನ್ನು ಕೃಷಿ ಇಲಾಖೆಯೊಂದಿಗೆ ವಿಲೀನಗೊಳಿಸಲು ಸರ್ಕಾರ ಚಿಂತಿಸಿದೆ. ಇದರಿಂದ ಜಲಾನಯನ ಅಭಿವೃದ್ಧಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಸಾಧ್ಯವಾಗುತ್ತದೆ ಎಂದರು.
ಬಿಜೆಪಿ ವಚನಭ್ರಷ್ಟತೆ: ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಷಯವನ್ನು ಮುಂದಿಟ್ಟುಕೊಂಡೇ ಕೇಂದ್ರದಲ್ಲಿ ಗದ್ದುಗೆ ಏರಿರುವ ಬಿಜೆಪಿಯು ಇದೀಗ ವಚನಭ್ರಷ್ಟವಾಗಿದೆ. ರೇಲ್ವೆ ಪ್ರಯಾಣ ದರ ಹೆಚ್ಚಳ ಸ್ಯಾಂಪಲ್ ಮಾತ್ರವೇ. ಮುಂದಿನ ದಿನಗಳಲ್ಲಿ ಅಗತ್ಯ ವಸ್ತುಗಳ ಬೆಲೆಗಗನಕ್ಕೇರಲಿದೆ ಎಂದರು.
 ತೊಂದರೆ ನೀಡದಿರಿ: ಯಶವಂತಪುರ-ಕಣ್ಣೂರು ನಡುವೆ ಸಂಚರಿಸುವ ಮಂಗಳಾ ಎಕ್ಸ್‌ಪ್ರೆಸೆ ರೈಲುಗಾಡಿಯಲ್ಲಿ ಪ್ರಯಾಣಿಸುವ ರಾಮನಗರ, ಚನ್ನಪಟ್ಟಣದ ಪ್ರಯಾಣಿಕರು ಟಿಕೆಟ್ ಕಾಯ್ದಿರಿಸಿದ ಪ್ರಯಾಣಿಕರ ಜತೆ ಅನುಚಿತವಾಗಿ ವರ್ತಿಸದಂತೆ ಸಂಸದ ಸುರೇಶ್ ಮನವಿ ಮಾಡಿದರು. ಸದರಿ ರೈಲು ಗಾಡಿಯು ರಾಮನಗರ, ಚನ್ನಪಟ್ಟಣದಲ್ಲಿ ನಿಲುಗಡೆ ನೀಡಿದಾಗಿನಿಂದ ಇವೆರಡು ನಿಲ್ದಾಣಗಳಲ್ಲಿ ಇಳಿಯುವ ಪ್ರಯಾಣಿಕರು ಮೀಸಲಿರಿಸಿದ ಸ್ಲೀಪಿಂಗ್ ಕೋಚುಗಳಿಗೆ ಹತ್ತಿ ಆ ಪ್ರಯಾಣಿಕರಿಗೆ ತೊಂದರೆ ನೀಡಿರುವ ದೂರುಗಳು ಕೇಳಿ ಬಂದಿವೆ ಎಂದರು. ಕೇಂದ್ರ ರೇಲ್ವೆ ಸಚಿವ ಡಿ.ವಿ.ಸದಾನಂದಗೌಡ ಅವರೊಂದಿಗೆ ಈಗಾಗಲೇ ಚರ್ಚಿಸಿ, ಮನವಿ ಸಲ್ಲಿಸಲಾಗಿದೆ. ಮಂಜೂರಾತಿ ನಿರೀಕ್ಷಿಸಲಾಗಿದೆ ಎಂದು ಸುರೇಶ್ ಹೇಳಿದರು.
ನರೇಗಾ ಸಾಫಲ್ಯಕ್ಕೆ ಶ್ರಮಿಸಿ
ರಾಮನಗರ: ಗ್ರಾಮೀಣ ಬಡಜನರ ಆರ್ಥಿಕಾಭಿವೃದ್ಧಿ ದೃಷ್ಟಿಯಿಂದ ಕೇಂದ್ರ ಸರ್ಕಾರವು ಮಹತ್ವಾಕಾಂಕ್ಷಿ ನರೇಗಾ ಯೋಜನೆಯನ್ನು ಜಾರಿಗೆ ತಂದಿದ್ದು, ವೈಯಕ್ತಿಕ ಫಲಾನುಭವಿಗಳಿಗೆ ಆದ್ಯತೆ ನೀಡುವ ಮೂಲಕ ಯೋಜನೆಯ ಉದ್ದೇಶದ ಸಾಫಲ್ಯಕ್ಕೆ ಅಧಿಕಾರಿಗಳು ಶ್ರಮಿಸಬೇಕು ಎಂದು ಸಂಸದ ಡಿ.ಕೆ.ಸುರೇಶ್ ಕಿವಿಮಾತು ಹೇಳಿದರು.
ನಗರದ ಜಿಲ್ಲಾ ಪಂಚಾಯತ್ ಭವನದಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ(ನರೇಗಾ) ಅನುಷ್ಠಾನಗೊಂಡಿರುವ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಪ್ರತಿ ತಾಲೂಕಿನಲ್ಲೂ ತಲಾ 20 ಕೋಟಿ ಅನುದಾನ ಬಳಸಿಕೊಳ್ಳಲು ಅವಕಾಶವಿದೆ ಎಂದರು. ನರೇಗಾ ಯೋಜನೆಯಡಿ ಕಾಮಗಾರಿಗಳು ಅನುಷ್ಠಾನಗೊಂಡಿರುವ ಬಗ್ಗೆ ಹಿರಿಯ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಬೇಕು. ಮುಂಬರುವ ಡಿಸೆಂಬರ್‌ವರೆಗೆ ವೈಯಕ್ತಿಕ ಕಾಮಗಾರಿಗಳಿಗೆ ಒತ್ತು ನೀಡಿ, ನಂತರ ಸ್ಮಶಾನ ಅಭಿವೃದ್ಧಿ, ಸರ್ವಋತು ರಸ್ತೆ ಇನ್ನಿತರೆ ಸಮುದಾಯ ಸಂಬಂಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಿ ಎಂದು ತಾಕೀತು ಮಾಡಿದರು.
ಅಂತರ್ಜಲ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಿ: ಜಿಲ್ಲೆಯಾದ್ಯಂತ ಅಂತರ್ಜಲ ಮಟ್ಟ ಕುಸಿದಿದ್ದು, ಕೃಷಿ ಚಟುವಟಿಕೆಗಳಿಗೆ ತೀವ್ರ ಹಿನ್ನಡೆಯಾಗಿದೆ. ಚೆಕ್ ಡ್ಯಾಂಗಳು, ಇಂಗುಗುಂಡಿಗಳನ್ನು ನಿರ್ಮಿಸುವ ಮೂಲಕ ಅಂತರ್ಜಲ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಬೇಕು. ಕೃಷಿ, ಜಲಾನಯನ, ರೇಷ್ಮೆ, ಅರಣ್ಯ ಇಲಾಖೆ ಅಧಿಕಾರಿಗಳು ಈ ಬಗ್ಗೆ ಹೆಚ್ಚಿನ ಒತ್ತು ನೀಡಿ ಎಂದರು.ಜಿಲ್ಲೆಯ 50 ಸರ್ಕಾರಿ ಶಾಲೆಗಳಲ್ಲಿ ಶೌಚಾಲಯಗಳೇ ಇಲ್ಲ ಎಂಬ ಮಾಹಿತಿಯನ್ನು ಜಿಪಂ ಯೋಜನಾಧಿಕಾರಿ ಸಂಸದರ ಗಮನ ಸೆಳೆದರು. ಇಂತಹ ಶಾಲೆಗಳಲ್ಲಿ ನರೇಗಾ ಯೋಜನೆಯಡಿ ಶೌಚಾಲಯಗಳನ್ನು ನಿರ್ಮಿಮಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದರು. ಸಭೆಯಲ್ಲಿ ಜಿಪಂ ಹಂಗಾಮಿ ಅಧ್ಯಕ್ಷ ಎಂ.ಕೆ.ಧನಂಜಯ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement