ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಬಿಟ್ಟಿ ಸಿಕ್ಕ ರಾಮನಗರವೇ ಕಸದ ತೊಟ್ಟಿ!

Mainashree
Updated On : 23 Jun 2014, 11:17 am

ರಾಮನಗರ: ಕೊಳಚೆ ನೀರು ಹರಿಬಿಟ್ಟು ಪವಿತ್ರವಾದ ವೃಷಭಾವತಿ ನದಿಯನ್ನು ಅಪವಿತ್ರಗೊಳಿಸಿದ್ದಾಗಿದೆ. ಹಾರೋಹಳ್ಳಿಯಲ್ಲಿ ಕಸಾಯಿಖಾನೆ ಸ್ಥಾಪನೆ ಹುನ್ನಾರ ನಡೆದಿದೆ. ಬಿಬಿಎಂಪಿ ಕಸಕ್ಕೆ ರಾಮನಗರವನ್ನೇ ತೊಟ್ಟಿಯಾಗಿಸುವ ಷಡ್ಯಂತ್ರವೂ ಮುಂದುವರೆದಿದೆ.  ಹೀಗೆ, ಬೆಂಗಳೂರಿಗೆ ಬೇಡವಾಗಿದ್ದನ್ನೆಲ್ಲ ರಾಮನಗರಕ್ಕೆ ದೂಡಿ ಈ ನೆಲವನ್ನು ಮಲಿನಗೊಳಿಸುವ ಕೆಲಸ ನಿರಂತರವಾಗಿ ನಡೆದಿದೆ. ರಾಜಧಾನಿ ಮಗ್ಗುಲಲ್ಲಿರುವ ರಾಮನಗರದ ಪರಿಸರವನ್ನು ಸರ್ಕಾರದ ಪ್ರಾಯೋಜಿತ ವ್ಯವಸ್ಥೆಯೇ ಹಾಳುಗೆಡುತ್ತಿದೆ.
ಅದಾಗಲೇ ಹುನ್ನಾರ: ಬೆಂಗಳೂರು ಆಸುಪಾಸಿನ ವಿವಿಧೆಡೆ ಕಸ ವಿಲೇವಾರಿ ವಿರುದ್ಧ ಹೋರಾಟ ಭುಗಿಲೆದ್ದಾಗ ಸರ್ಕಾರದ ವಕ್ರದೃಷ್ಟಿ ಬಿದ್ದಿದ್ದೇ ರಾಮನಗರ ಜಿಲ್ಲೆ ಬಿಡದಿ ಬಳಿಯ ಕೊಡಿಯಾಲ-ಕರೇನಹಳ್ಳಿಯ ವಿವಿಧ ಸರ್ವೆ ನಂಬರುಗಳಿಗೆ ಸೇರಿದ ಫಲವತ್ತಾದ ಭೂಮಿ. ಬಿಬಿಎಂಪಿ ಕಸ ವಿಲೇವಾರಿ ಘಟಕ ಸ್ಥಾಪನೆ ಹುನ್ನಾರವನ್ನರಿತ ಸ್ಥಳೀಯರು ಬೀದಿಗೆ ಇಳಿದ ಹಿನ್ನೆಲೆಯಲ್ಲಿ ಕಡೆಗೆ ಸರ್ಕಾರ ಪ್ರಸ್ತಾವನೆ ಹಿಂತೆಗೆದುಕೊಂಡಿತು. ಇದೀಗ ಬಿಡದಿ ಆಸುಪಾಸಿನಲ್ಲಿ ಜಾಗದ ಹುಡುಕಾಟದ ಹುನ್ನಾರ ಮುಂದುವರೆದೇ ಇದೆ.
ಗೊರೂರಿನತ್ತ ಚಿತ್ತ: ಮಂಡೂರಿನಲ್ಲಿ ಪ್ರತಿರೋಧ ಎದುರಾಗುತ್ತಲೇ ಕಸ ವಿಲೇವಾರಿ ಘಟಕ ಸ್ಥಾಪನೆಗಾಗಿ ಸರ್ಕಾರದ ಚಿತ್ತ ಮಾಗಡಿ ತಾಲೂಕಿನ ಸೋಲೂರು ಹೋಬಳಿಯ ಕುಮುದ್ವನಿ ನದಿ ತಟದಲ್ಲಿರುವ ಗೊರೂರಿನತ್ತ ನೆಟ್ಟಿರುವುದು ದುರಂತವೇ ಸರಿ. ಗೊರೂರು ಗ್ರಾಮದ ಹಸಿರು ವಲಯಕ್ಕೆ ಸೇರಿದ ಫಲವತ್ತಾದ 45 ಎಕರೆ ಕೃಷಿ ಜಮೀನನ್ನು ಕಸ ವಿಲೇವಾರಿ ಘಟಕಕ್ಕಾಗಿ ಭೂ ಸ್ವಾಧೀನ ಅಧಿನಿಯಮ 109 ಅಡಿ ಸ್ವಾಧೀನಪಡಿಸಿಕೊಳ್ಳಲು ಸರ್ಕಾರ ಈಗಾಗಲೇ ಆದೇಶ ಹೊರಡಿಸಿರುವುದು ಆತಂಕಕಾರಿ ಸಂಗತಿಯಾಗಿದೆ.
ಹೈಟೆಕ್ ತೋರಿಕೆ: ಸರ್ಕಾರದ ಜತೆಗೆ ಕರಾರು ಮಾಡಿಕೊಂಡಿರುವ ಖಾಸಗಿ ಸಂಸ್ಥೆ ಬಿಡುಗಡೆ ಮಾಡಿರುವ ನೀಲನಕ್ಷೆ ಪ್ರಕಾರ ಉದ್ದೇಶಿತ ಕಸ ವಿಲೇವಾರಿ ಘಟಕ ಹೇಳಿಕೊಳ್ಳಲು ಹೈಟೆಕ್. ಅಲ್ಲಿ ವಿದ್ಯುತ್ ಉತ್ಪತ್ತಿ ಮಾಡಲು ಕಸವನ್ನು ಭಸ್ಮ ಮಾಡುವುದರಿಂದ ಪರಿಸರ ಮಾಲಿನ್ಯ ಆಗುವ ಸಂಭವ ಇದ್ದೇ ಇದೆ.
ಸ್ವಾಧೀನಕ್ಕೆ ಉದ್ದೇಶಿಸಿರುವ ಜಮೀನು ಯಾತ್ರಾಸ್ಥಳ ಶಿವಗಂಗೆ ರಸ್ತೆ ಮತ್ತು ಪವಿತ್ರವಾದ ಕುಮುದ್ವತಿ ನದಿ ದಡದಲ್ಲಿದೆ. ಇಂತಹ ಕಡೆ ಕಸ ವಿಲೇವಾರಿ ಘಟಕ ಸ್ಥಾಪನೆಗೊಂಡರೆ ತಿಪ್ಪಗೊಂಡನಹಳ್ಳಿ ಜಲಾಶಯವನ್ನು ಸೇರುವ ಕುಮುದ್ವತಿ ನೀರು ಕಲುಷಿತಗೊಳ್ಳುವುದರಲ್ಲಿ ಸಂದೇಹವೇ ಇಲ್ಲ.
ಇಲ್ಲೇ ಕಸಾಯಿಖಾನೆ:  ಕನಕಪುರ ತಾಲೂಕಿನ ಹಾರೋಹಳ್ಳಿಯಲ್ಲೇ ಕಸಾಯಿಖಾನೆ ಸ್ಥಾಪನೆಯ ಹುನ್ನಾರವೂ ಸರ್ಕಾರದಿಂದ ನಡೆದಿದೆ. ಈ ವಿಷಯದಲ್ಲೂ ಹೋರಾಟ ತೀವ್ರಗೊಂಡಿದ್ದರೂ ಸ್ಥಳೀಯ ಸರ್ಕಾರ, ಜನಪ್ರತಿನಿಧಿಗಳು ಸೊಪ್ಪು ಹಾಕದಿರುವುದು ಒವಿಪರ್ಯಾಸವೇ ಸರಿ. ಬೆಂಗಳೂರಿಗೆ ಪರ್ಯಾಯವಾಗಿ ರಾಮನಗರವನ್ನು ಅಭಿವೃದ್ಧಿಪಡಿಸುವ ಮಾತು ಆಳುವ ವರ್ಗದಿಂದ ಕೇಳಿ ಬರುತ್ತಲೇ ಇದೆ. ಹೀಗೆ ಕೊಳಚೆ ನೀರು, ಕಸ ವಿಲೇವಾರಿ ಘಟಕ, ಕಸಾಯಿಖಾನೆ, ಕೈಗಾರೀಕರಣದ ಹಾವಳಿಯಿಂದ ಜಿಲ್ಲೆ ಅಭಿವೃದ್ಧಿ ಹೇಗೆನ್ನುವ ಪ್ರಶ್ನೆ ಎದುರಾಗುತ್ತದೆ. ಕದ್ದುಮುಚ್ಚಿ ಕಸ: ಕೈಗಾರೀಕರಣ ಮತ್ತು ನಗರೀಕರಣಕ್ಕೆ ಮೈಯ್ಯೊಡ್ಡಿ ನಿಂತಿರುವ ರಾಮನಗರ ಜಿಲ್ಲೆಯಲ್ಲಿ ಕೃಷಿ ಕ್ಷೇತ್ರ ಬಹುತೇಕ ನಾಶವಾಗಿದೆ. ಬಿಬಿಎಂಪಿ ಕಸ ವಿಲೇವಾರಿ ಗುತ್ತಿಗೆದಾರರು ಮಾತ್ರವಲ್ಲದೆ ಕೈಗಾರಿಕೆ, ಕಲ್ಯಾಣ ಮಂಟಪದವರೂ ಸಿಕ್ಕ ಕಡೆಯಲ್ಲೆಲ್ಲಾ ತ್ಯಾಜ್ಯ ವಿಲೇವಾರಿ ಮಾಡುತ್ತಿದ್ದಾರೆ. ಬೆಂ-ಮೈ ಹೆದ್ದಾರಿ ಮಗ್ಗುಲಲ್ಲೇ ನಿತ್ಯ ಹತ್ತಾರು ಲಾರಿ ಲೋಡ್ ತ್ಯಾಜ್ಯವನ್ನು ವಿಲೇವಾರಿ ಮಾಡಿ, ಆ ರಾಶಿಗೆ ಬೆಂಕಿ ಹಚ್ಚುವ ಮೂಲಕ ಎರಡು ರೀತಿಯಲ್ಲಿ ಪರಿಸರ ಮಾಲಿನ್ಯ ಉಂಟು ಮಾಡುವ ಕೆಲಸ ಕೆಲ ವರ್ಷಗಳಿಂದ ನಿರಂತರವಾಗಿದ್ದರೂ ಅಧಿಕಾರಿಗಳು ಕುರುಡರಾಗಿದ್ದಾರೆ.

ನಿತ್ರಾಣವಾದ ನಗರಸಭೆ
ಹೆದ್ದಾರಿ, ಸಂಪರ್ಕ ರಸ್ತೆಗಳ ಬದಿಯಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಘನ ತ್ಯಾಜ್ಯ ವಿಲೇವಾರಿ ಮಾಡುವವರ ವಿರುದ್ಧ ಕಾನೂನು ರೀತ್ಯ ಕ್ರಮ ಮತ್ತು ದಂಡ ವಿಧಿಸುವ ಎಚ್ಚರಿಕೆ ನೀಡಿದ್ದ ರಾಮನಗರ ನಗರಸಭೆ ಆಡಳಿತವು ಆ ವಿಷಯದಲ್ಲಿ ಕಾಳಜಿ ತೋರಿಯೇ ಇಲ್ಲ. ಅನಧಿಕೃತ ಬಡಾವಣೆಗಳ ನಿವೇಶನಗಳಿಗೆ ಅಕ್ರಮ ಖಾತೆ, ಬ್ಲೇಡ್ ಖಾತೆಗಳ ಕೂಪವಾಗಿರುವ ನಗರಸಭೆಯು ಜನ ಹಿತ ಕಾಪಾಡುವಲ್ಲಿ ವಿಫಲವಾಗಿದೆ. ಕಡೇಪಕ್ಷ ನಗರ ನೈರ್ಮಲ್ಯ ಕಾಪಾಡುವ ಕಾಳಜಿ ವಹಿಸಬೇಕೆನ್ನುವುದು ಸಾರ್ವಜನಿಕರ ಆಗ್ರಹ. ಜಾರಿಯಾಗದ ಯೋಜನೆ: ಕಸ ಸಂಗ್ರಹ ಮತ್ತು ವಿಲೇವಾರಿ ಪ್ರಕ್ರಿಯೆಯಲ್ಲಿ ವೈಜ್ಞಾನಿಕ ವ್ಯವಸ್ಥೆ ಅಳವಡಿಕೆ ಸಂಬಂಧ ಕಳೆದೊಂದು ವರ್ಷದ ಹಿಂದೆಯೇ ರಾಮನಗರ ನಗರಸಭೆಯು ಮುಂಬಯಿ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಂಡಿತ್ತಾದರೂ ಇನ್ನೂ ಯೋಜನೆ ಚಾಲನೆಗೆ ಬಂದಿಲ್ಲ. ಕಸ ಸಂಗ್ರಹಕ್ಕಾಗಿ ಅಲ್ಲಲ್ಲಿ ಅಳವಡಿಸಲ್ಪಟ್ಟ ಕಬ್ಬಿಣದ ಡಬ್ಬಗಳು, ಮನೆ ಮನೆಗೆ ತೆರಳಿ ಗಂಟೆ ಬಾರಿಸಿ ಕಸ ಸಂಗ್ರಹಿಸಲು ಖರೀದಿಸುವುದಕ್ಕಾಗಿ ಕೊಂಡು ಬಂದ ಆಟೋಗಳು, ಅದಕ್ಕಾಗಿ ನೇಮಿಸಿದ ಸಿಬ್ಬಂದಿಯಿಂದಲೂ ಯಾವುದೇ ಪ್ರಯೋಜನ ಆಗದಿರುವುದು ನಗರ ವಾಸಿಗಳ ದೌರ್ಭಾಗ್ಯವಾಗಿದೆ.ಅವೈಜ್ಞಾನಿಕ ಕ್ರಮ: ರಾಮನಗರ ಮತ್ತು ಚನ್ನಪಟ್ಟಣ ನಗರಸಭೆಗಳ ವ್ಯಾಪ್ತಿಯ ಕಸ ವಿಲೇವಾರಿಗೆ ಕಣ್ವ ಬಳಿ 40 ಎಕರೆ ಜಾಗ ಮಂಜೂರು ಮಾಡಿದ್ದರೂ ಅಲ್ಲಿ ವೈಜ್ಞಾನಿಕ ವ್ಯವಸ್ಥೆ ಕಲ್ಪಿಸಲಾಗಿಲ್ಲ. ಅಲ್ಲೂ ಬೇಕಾಬಿಟ್ಟಿ ವಿಲೇವಾರಿ ನಡೆದಿದ್ದು, ಮುಂದೆ ಕಣ್ವ ಭರ್ತಿಯಾದರೂ ನೀರು ಕಲುಷಿತಗೊಳ್ಳುವ ಆತಂಕವಿದೆ.ರಾಮನಗರ ನಗರಸಭೆ ಕಸ ವಿಲೇವಾರಿ ಗುತ್ತಿಗೆದಾರರು ಈಗೆ ಕೆಲ ದಿನಗಳವರೆಗೂ ಸಂಗ್ರಹಿಸಿದ ಕಸವನ್ನು ನಗರದಂಚಿನ ಗುಂಡಿಗಳು, ಬೆಟ್ಟದ ತಪ್ಪಲು ಮತ್ತು ಸಾರ್ವಜನಿಕ ಸ್ಥಳಗಳಲ್ಲೇ ಸುರಿದು ಬೆಂಕಿ ಹಚ್ಚುವ ಚಾಳಿ ಮುಂದುವರೆಸಿದ್ದರು. ಈಚೆಗಷ್ಟೇ ಅದಕ್ಕೆ ಸ್ವಲ್ಪ ಮಟ್ಟಿಗೆ ಕಡಿವಾಣ ಬಿದ್ದಿದೆ.


 ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement