ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮಕ್ಕಳಿಗೆ ಶಿಕ್ಷೆ ನೀಡುವುದು ಸಲ್ಲ

Mainashree
Updated On : 23 Jun 2014, 11:18 am

ಮಾಗಡಿ: ಖಾಸಗಿ ಶಾಲೆಗಳಲ್ಲಿ ಶಿಕ್ಷಕರು ಮಕ್ಕಳಿಗೆ ಶಿಕ್ಷೆ ನೀಡುವುದನ್ನು ತಪ್ಪಿಸಲು ಅಗತ್ಯ ಕ್ರಮ ವಹಿಸುವಂತೆ ತಾಲೂಕು ಪಂಚಾಯ್ತಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಎಸ್. ಕಾಂತರಾಜು ಬಿಇಓ ಎ.ಆರ್. ರಂಗಸ್ವಾಮಿಗೆ ತಾಕೀತು ಮಾಡಿದರು.
   ಅವರು ಮಾಗಡಿ ತಾಲೂಕು ಪಂಚಾಯ್ತಿಯಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಮಾತನಾಡಿ, ಕೆಲ ಖಾಸಗಿ ಶಾಲೆಗಳಲ್ಲಿ ಶಿಕ್ಷಕರು ಸುಮ್ಮನೆ ಮಕ್ಕಳಿಗೆ ಕಿರುಕುಳ ನೀಡುತ್ತಾ ಸಲ್ಲದ ಶಿಕ್ಷೆ ನೀಡುತ್ತಿದ್ದಾರೆ ಎಂದು ಪೋಷಕರಿಂದ ದೂರುಗಳು ಬಂದಿವೆ. ಕೂಡಲೆ ಖಾಸಗಿ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲಿಸಬೇಕು. ಮಕ್ಕಳಿಗೆ ಶಿಕ್ಷೆ ನೀಡದಂತೆ ಪಾಠ ಬೋಧನೆ ಮಾಡುವಂತೆ ಆದೇಶಿಸಿದೆ. ಆದರೂ ಮಕ್ಕಳ ಮೇಲೆ ದಂಡ ಬಳಸಿ ಶಿಕ್ಷಿಸುತ್ತಿದ್ದಾರೆ ಎಂಬ ಆರೋಪವಿದ್ದು, ಶಿಕ್ಷಿಸುವವರ ವಿರುದ್ಧ ಶಿಸ್ತಿನ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಶಿಕ್ಷಕರ ಕೊರತೆ: ತಾಲೂಕಿನಲ್ಲಿ ಸುಮಾರು 1200 ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.100 ಶಿಕ್ಷಕರ ಕೊರತೆಯಿದೆ. 4 ಪ್ರಾಥಮಿಕ ಶಾಲೆಗಳ ಕಟ್ಟಡ ನಿರ್ಮಾಣ ಕಾಮಗಾರಿ ನಡೆದಿದೆ. ಕಸಬಾ ಹೋಬಳಿ ಗುಡೇಪಾಳ್ಯದಲ್ಲಿ ಮುಚ್ಚಿದ್ದ ಶಾಲೆಯನ್ನು ತೆರೆಯಲಾಗಿದೆ. ಪ್ರಸ್ತುತ ಶಾಲಿನಲ್ಲಿ ಶಾಲೆಗಳು ಆರಂಭಗೊಂಡಿದ್ದು, ಮಕ್ಕಳಿಗೆ ಅಗತ್ಯ ಪಠ್ಯಪುಸ್ತಕ, ಸಮವಸ್ತ್ರ ವಿತರಣೆ ಮಾಡಲಾಗಿದೆ. ಸೈಕಲ್‌ಗಳು ಬಂದಿಲ್ಲ, ಬಂದ ನಂತರ ವಿತರಣೆಗೆ ಅಗತ್ಯ ಕ್ರಮ ವಹಿಸುವುದಾಗಿ ಬಿಇಓ ರಂಗಸ್ವಾಮಿ ಸಭೆಯಲ್ಲಿ ವಿವರಿಸಿದರು.
ಪಶು ಪಾಲನ ಇಲಾಖೆ ವತಿಯಿಂದ ಕಾಲುಬಾಯಿ ಜ್ವರಕ್ಕೆ ಹಸು, ಎಮ್ಮೆ, ಕರುಗಳಿಗೆ ಲಸಿಕೆ ಕಾರ್ಯಕ್ರಮ ಹಾಕಿಕೊಳ್ಳಲಾಗಿದೆ. 5 ತಂಡಗಳನ್ನು ರಚಿಸಲಾಗಿದೆ. ಶೇ.100 ಗುರಿ ಸಾಧಿಸಲು ಜನಪ್ರತಿನಿಧಿಗಳು ಸಹಕಾರ ಅಗತ್ಯವಿದೆ ಎಂದರಲ್ಲದೆ 150 ಹೆಕ್ಟರ್‌ನಲ್ಲಿ ಪಶು ಮೇವು ಬೆಳಸಲು ಕಾರ್ಯಕ್ರಮ ಹಾಕಿಕೊಂಡಿದ್ದೇವೆ. ಈಗಾಗಲೇ 93.3 ಹೆಕ್ಟರ್ ಮೇವು ಬೆಳೆ ಗುರಿ ಸಾಧಿಸಿದ್ದೇವೆ ಎಂದು ಪಶುಪಾಲನ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ. ರಾಜಶೇಖರ್ ವಿವರಿಸಿದರು.
16.50 ಟನ್ ರೇಷ್ಮೆಗೂಡು ರೈತರು ಬೆಳೆದು ಮಾರುಕಟ್ಟೆ ಮಾರಾಟ ಮಾಡಿದ್ದಾರೆ. ಈ ಪೈಕಿ 14 ಟನ್ ಬಿತ್ತನೆಗೆ ಪೂರೈಕೆಯಾಗಿದ್ದು, 2 ಟನ್ ಮಾತ್ರ ರೀಲಿಂಗ್‌ಗೆ ಪೂರೈಕೆಯಾಗಿದೆ. ತಲಾ ಕೆ.ಜಿಗೆ 20 ರು. ಪ್ರೋತ್ಸಾಹ ಧನ ವಿತರಣೆಗೆ ಕ್ರಮ ವಹಿಸಲಾಗಿದೆ. ಸರ್ಕಾರದಿಂದ ಇನ್ನೂ ಬೋನಸ್ ಬಿಡುಗಡೆಯಾಗಿಲ್ಲ, ಬಿಡುಗಡೆಯಾದ ನಂತರ ರೈತರಿಗೆ ವಿತರಿಸಲಾಗುವುದು ಎಂದು ರೇಷ್ಮೆ ಇಲಾಖೆಯ ಸಹಾಯಕ ನಿರ್ದೇಶಕ ಸುಬ್ರಹ್ಮಣ್ಯ ಸಭೆಗೆ ಇಲಾಖೆ ಪ್ರಗತಿ ಕುರಿತು ವಿವರಿಸಿದರು. ಪ್ರಯತ್ನ ಮಾಡಿ: ತಾ.ಪಂ. ಅಧ್ಯಕ್ಷೆ ಅರುಂಧತಿ ಚಿಕ್ಕಣ್ಣ ಮಾತನಾಡಿ ತಾಲೂಕು ಮಟ್ಟದ ಅಧಿಕಾರಿಗಳು ರೈತರಿಗೆ ಅಗತ್ಯ ಸೌಲತ್ತುಗಳ ಮಾಹಿತಿಯನ್ನು ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು.  ಸೌಲತ್ತುಗಳು ದುರುಪಯೋಗವಾಗದಂತೆ ಅರ್ಹ ಪಲಾನುಭವಿಗಳ ವಿತರಣೆಗೆ ಅಗತ್ಯ ಕ್ರಮ ವಹಿಸಬೇಕಿದೆ ಎಂದರು. ಕಾರ್ಮಿಕ ಇಲಾಖೆ ಇನ್ಸ್‌ಪೆಕ್ಟರ್ ಸುಂದರೇಶ್ ಮಾತನಾಡಿ ತಾಲೂಕಿನಲ್ಲಿ ಸುಮಾರು 3 ಸಾವಿರ ಕಟ್ಟಡ ಕಾರ್ಮಿಕರು ಇಲಾಖೆಯಲ್ಲಿ ನೋಂದಾಯಿಸಿಕೊಂಡು ಸದಸ್ಯತ್ವ ಪಡೆದುಕೊಂಡಿದ್ದಾರೆ. ಈಗಾಗಲೇ ಸುಮಾರು 20 ಲಕ್ಷ ರು.ಗೂ ಹೆಚ್ಚು ಸಾಲ ಸೌಲಭ್ಯಗಳನ್ನು ವಿತರಿಸಲಾಗಿದೆ. ಕಟ್ಟಡ ಕಾರ್ಮಿಕರು ಆಕಸ್ಮಿಕವಾಗಿ ಅಪಘಾತಕ್ಕೆ ಒಳಗಾದರೆ ವೈದ್ಯಕೀಯ ಚಿಕಿತ್ಸೆಗೆ 2 ಲಕ್ಷ ರು. ಪರಿಹಾರ ಧನ ನೀಡಲಾಗುತ್ತಿದೆ. ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಸೌಲತ್ತುಗಳು, ವಿದ್ಯಾರ್ಥಿ ವೇತನ, ಪ್ರೋತ್ಸಾಹಧನ ಇತರೆ ಸೌಲತ್ತುಗಳನ್ನು ನೀಡಿ ಪ್ರೋತ್ಸಾಹಿಸುತ್ತಿರುವುದಾಗಿ ತಿಳಿಸಿದರು.
ಪ್ರಕರಣ ದಾಖಲು: ಗ್ರಾಹಕರಿಗೆ ಕಲಬೆರೆಕೆ ಆಹಾರ ಪೂರೈಕೆ ಮಾಡುತ್ತಿದ್ದ ಹೋಟೆಲ್‌ಗಳ ಮೇಲೆ ಈಗಾಗಲೇ 7 ಪ್ರಕರಣಗಳನ್ನು ದಾಖಲಿಸಲಾಗಿದೆ. 5 ಪ್ರಕರಣಗಳ ವಿರುದ್ಧ ಈಗಾಗಲೇ ದಂಡ ವಿಧಿಸಲಾಗಿದ್ದು, ಒಂದು ಪ್ರಕರಣ ಎಪಿಸಿ ಕೋರ್ಟ್‌ನಲ್ಲಿದ್ದರೆ, ಮತ್ತೊಂದ ಪ್ರಕರಣ ಜೆಎಂಎಫ್‌ಸಿ ಕೋರ್ಟ್‌ನಲ್ಲಿದೆ ಎಂದು ಆಹಾರ ಇಲಾಖೆಯ ಅಧಿಕಾರಿ ವಿವರಿಸಿದರು. ಕೈಗಾರಿಕೆ, ಕೃಷಿ, ತೋಟಗಾರಿಕೆ, ಅರಣ್ಯ, ಜಲಾನಯನ, ಸಮಾಜ ಕಲ್ಯಾಣ, ಶಿಶು ಅಭಿವೃದ್ಧಿ ಇಲಾಖೆ, ಆರೋಗ್ಯ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿ ಕುರಿತು ಮಾಹಿತಿ ನೀಡಿದರು. ತಾ.ಪಂ. ಉಪಾಧ್ಯಕ್ಷೆ ಭಾರತಿ ಮಹದೇವಯ್ಯ, ತಾ.ಪಂ. ಎಡಿಓ ಶಂಕರಾಚಾರಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement