ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಐಐಟಿ-ಜೆಇಇ ಪರೀಕ್ಷೆಯಲ್ಲಿ ಸಾಧನೆ

Mainashree
Updated On : 24 Jun 2014, 10:43 am

ಕೆ.ಆರ್.ರವಿಕಿರಣ್
ದೊಡ್ಡಬಳ್ಳಾಪುರ: ಈ ಹುಡುಗ ಒಬ್ಬ ಸಾಮಾನ್ಯ ನೇಕಾರನ ಮಗ. ಈ ಕುಟುಂಬದ ನೇಕಾರಿಕೆ ಉದ್ಯಮ ಸಂಕಷ್ಟಗಳ ಸರಮಾಲೆಯನ್ನೇ ಎದುರಿಸಿತ್ತು.
ಬದುಕಿನ ಬಂಡಿಯನ್ನು ಕಷ್ಟಪಟ್ಟು ಎಳೆಯುತ್ತಿದ್ದ ಆ ಪೋಷಕರು ಏನಾದರೂ ಮಾಡಿ ನಮ್ಮ ಮಗನನ್ನು ವಿದ್ಯಾವಂತನನ್ನಾಗಿ ಮಾಡಬೇಕು ಎಂಬ ಹಠ ತೊಟ್ಟು ಓದಿಗೆ ಓಲೈಸಿತು.
 ಅಪ್ಪ-ಅಮ್ಮ ಇಟ್ಟ ನಂಬಿಕೆಯನ್ನು ಈ ಹುಡುಗ ಹುಸಿ ಮಾಡಲಿಲ್ಲ. ಪ್ರತಿ ಹಂತದಲ್ಲೂ ಉನ್ನತ ಸ್ಥಾನವನ್ನೇ ಪಡೆದು ಮುಂದುವರೆದು ಈಗ ರಾಷ್ಟ್ರ ಮಟ್ಟದ ಐಐಟಿ-ಜೆಇಇ ಪರೀಕ್ಷೆಯಲ್ಲೇ ದೇಶದಲ್ಲಿ 5534ನೇ ರ್ಯಾಂಕ್ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದಾನೆ.
ಹೆಸರು ಎಚ್.ಸಿ.ಪ್ರಜ್ವಲ್. ಈತ ಭವಿಷ್ಯದಲ್ಲಿ ವೈಜ್ಞಾನಿಕ ಕ್ಷೇತ್ರದಲ್ಲಿ ಮಹತ್ವದ ಸಾಧನೆ ಮಾಡುವ ವಿಶ್ವಾಸ ಹೊಂದಿದ್ದಾನೆ. ಇದಕ್ಕೆ ಈ ರ್ಯಾಂಕ್ ಪೂರಕವಾಗಿದೆ. ಪ್ರತಿಷ್ಠಿತ ಕಾಲೇಜಿನಲ್ಲೇ ಸೀಟು ಗಿಟ್ಟಿಸಲು ಇದರಿಂದ ಅನುಕೂಲವಾಗಿದೆ. ಮನೆಯ ಬಡತನ ನನ್ನ ಓದನ್ನು ಪ್ರೇರೇಪಿಸಿತು.
ಮಗ್ಗದ ದುಡಿಮೆ, ಅದರ ಸಂಕಷ್ಟ ನಿನಗೆ ಬೇಡ. ಓದಿನಲ್ಲಿ ಉತ್ತಮ ಸಾಧನೆ ಮಾಡು. ನಮ್ಮ ಕಷ್ಟ ನಮಗೇ ಸಾಕು. ನಿಮಗೆ ಬೇಡ ಎಂಬ ನನ್ನ ತಂದೆ-ತಾಯಿಯರ ಅಚಲ ನಿಲುವು, ಪ್ರೋತ್ಸಾಹದ ಮಾತುಗಳು ಮತ್ತು ಬಡತನದ ಪಾಠ ನನ್ನ ಸಾಧನೆಗೆ ಸ್ಫೂರ್ತಿ ಎನ್ನುವ ಪ್ರಜ್ವಲ್ ಉನ್ನತ ಸಾಧನೆಯ ಕನಸು ಹೊತ್ತಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ಸಾಮಾನ್ಯ ನೇಕಾರರಾಗಿರುವ ಚಂದ್ರಮೋಹನ್ ಮತ್ತು ಬಿ. ಸುಮಿತ್ರಾ ಅವರ ಮಗ ಈತ. ಇಲ್ಲಿನ ನಳಂದ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ವೇಳೆ, ರಾಷ್ಟ್ರೋತ್ಥಾನ ಪರಿಷತ್ತು ನಡೆಸುವ ಪರೀಕ್ಷೆಯಲ್ಲಿ ತಪಸ್ ಯೋಜನೆಯ ಫಲಾನುಭವಿಯಾಗಿ ಆಯ್ಕೆಯಾದ. ನಂತರ ನಿರಂತರ ಪರಿಶ್ರಮ ವಹಿಸಿ ತಪಸ್ ಯೋಜನೆಯ ಸಂಪೂರ್ಣ ಲಾಭ ಪಡೆದು ಈ ಮಹತ್ವದ ಸಾಧನೆ ಮಾಡಿದ್ದಾನೆ.

ಏನಿದು ತಪಸ್
ಆರ್ಥಿಕವಾಗಿ ಹಿಂದುಲಿದ ಕುಟುಂಬದಲ್ಲಿ ಜನಿಸಿದ ಮಕ್ಕಳ ಪ್ರತಿಭೆಗೆ ವೇದಿಕೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ರಾಷ್ಟ್ರೋತ್ಥಾನ ಪರಿಷತ್ತು ತಪಸ್ ಯೋಜನೆ ಆರಂಭಿಸಿದೆ. ಇದರಲ್ಲಿ ಐಐಟಿ ಪರೀಕ್ಷಾ ತರಬೇತಿಗೆ ಗಂಡು ಮಕ್ಕಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ರಾಜ್ಯದ ಯಾವುದೇ ಜಿಲ್ಲೆಯ ವಿದ್ಯಾರ್ಥಿಯು 9ನೇ ತರಗತಿಯಲ್ಲಿ ಶೇ.80ಕ್ಕಿಂತ ಹೆಚ್ಚು ಅಂಕ ಪಡೆದುಕೊಂಡಲ್ಲಿ ರಾಷ್ಟ್ರೋತ್ಥಾನ ಪರಿಷತ್ತು ಪ್ರತಿವರ್ಷ ಐಐಟಿ ತರಬೇತಿಗಾಗಿ ನಡೆಸುವ ಪ್ರವೇಶ ಪರೀಕ್ಷೆ ತೆಗೆದುಕೊಳ್ಳಬಹುದು.
ಉತ್ತಮ ಅಂಕ ಪಡೆದ ವಿದ್ಯಾರ್ಥಿಗಳನ್ನು ತರಬೇತಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಯ್ಕೆಯಾದ ವಿದ್ಯಾರ್ಥಿ ಎಸ್ಸೆಸ್ಸೆಲ್ಸಿ ನಂತರ ತರಬೇತಿಗೆ ಸೇರಿಕೊಳ್ಳಬೇಕು. ತರಬೇತಿ ಅವಧಿಯಲ್ಲಿ ಪಿಯುಸಿ ವಿದ್ಯಾಭ್ಯಾಸವನ್ನು ರಾಷ್ಟ್ರೋತ್ಥಾನ ಪರಿಷತ್ತೇ ನೀಡುತ್ತದೆ. ಜೊತೆಗೆ ಐಐಟಿ ತರಬೇತಿ ಕೊಡಲಾಗುತ್ತದೆ. ಶಿಕ್ಷಣ-ತರಬೇತಿ-ವಸತಿ ಸಹಿತ 2 ವರ್ಷಗಳ ಕಾಲ ಎಲ್ಲವೂ ಈ ವಿದ್ಯಾರ್ಥಿಗಳಿಗೆ ಉಚಿತವಾಗಿಯೇ ಲಭಿಸುತ್ತದೆ. ಪ್ರತಿವರ್ಷವೂ ಈ ಬಗೆಯ ತರಬೇತಿಯನ್ನು ರಾಷ್ಟ್ರೋತ್ಥಾನ ನೀಡುತ್ತಿದೆ. ಶಿಕ್ಷಣ ಮತ್ತು ಸಾಮಾಜಿಕ ಉನ್ನತಿಯಿಂದ ಬಲಿಷ್ಠ ಭಾರತದ ನಿರ್ಮಾಣ ಪರಿಕಲ್ಪನೆಯ ಯೋಜನೆ ಇದು. 2012ರಲ್ಲಿ ಒಟ್ಟು 34 ವಿದ್ಯಾರ್ಥಿಗಳನ್ನು ಆಯ್ಕೆ ಮಾಡಿ ತರಬೇತಿ ನೀಡಲಾಗಿತ್ತು. ಆ ಪೈಕಿ ಪ್ರಜ್ವಲ್ ಸೇರಿದಂತೆ ಒಟ್ಟು 7 ಮಂದಿ ಉನ್ನತ ರ್ಯಾಂಕ್ ಗಳಿಸುವ ಮೂಲಕ ಯಶಸ್ವಿಯಾಗಿದ್ದಾರೆ. ಈ ವಿದ್ಯಾರ್ಥಿಗಳು ಸಿಇಟಿಯಲ್ಲೂ ಗಣನೀಯ ಸಾಧನೆ ಮೆರೆದಿರುವುದು ವಿಶೇಷ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement