ಕಾನೂನು ಹೆಸರಲ್ಲಿ ರೈತರಿಗೆ ಕಿರುಕುಳ ಸಲ್ಲ
ಕ.ಪ್ರ.ವಾರ್ತೆ , ರಾಮನಗರ , ಜೂ.25
ಕಾನೂನು ಇರುವುದು ಸಮಾಜದ ಅನುಕೂಲಕ್ಕೇ ಹೊರತು ಅನಾನುಕೂಲಕ್ಕಲ್ಲ. ಪ್ರತಿಯೊಂದು ವಿಷಯದಲ್ಲೂ ಕಾನೂನು ಮುಂದುಟ್ಟಿಕೊಂಡು ರೈತರು, ಸಾರ್ವಜನಿಕರಿಗೆ ತೊಂದರೆ ನೀಡುವುದು ಸಲ್ಲದು ಎಂದು ಸಂಸದ ಡಿ.ಕೆ.ಸುರೇಶ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಪೋಡಿ, ಪಹಣಿ ತಿದ್ದುಪಡಿ ಸೇರಿದಂತೆ ಭೂ ದಾಖಲೆಗಳ ವಿಷಯದಲ್ಲಿ ರೈತರಿಗೆ ಆಗುತ್ತಿರುವ ತೊಂದರೆಗಳ ಸಂಬಂಧ ಕರೆದಿದ್ದ ಕಂದಾಯ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಸಂಸದನಾಗಿ ಕ್ಷೇತ್ರದ ಹಲವೆಡೆ ಭೇಟಿ ನೀಡಿದ ತಮಗೆ ರೈತರು ಸಾಕಷ್ಟು ದೂರು ನೀಡಿದ್ದಾರೆ. ಅಧಿಕಾರಿಗಳು ಪ್ರತಿಯೊಂದಕ್ಕೂ ಕಾನೂನು ತೊಡಕನ್ನೇ ಮುಂದಿಟ್ಟುಕೊಂಡು, ಕಡತ ವಿಲೇವಾರಿ ಮಾಡದಿರುವುದು ಕಂಡು ಬಂದಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ಕೆಲ ರೈತರು ಅರ್ಜಿ ಹಿಡಿದು ವರ್ಷಾನುಗಟ್ಟಲೆಯಿಂದ ಕಚೇರಿಗೆ ಅಲೆಯುತ್ತಿದ್ದಾರೆ. ಅಧಿಕಾರಿಗಳು ರೈತರ ಸಮಸ್ಯೆಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸಬೇಕು. ರೈತರನ್ನು ಅನಗತ್ಯವಾಗಿ ಕಚೇರಿಗೆ ಅಲೆಸುವುದನ್ನು ಬಿಡಬೇಕು ಎಂದು ಅವರು ತಾಕೀತು ಮಾಡಿದರು.
10 ಸಾವಿರ ಪ್ರಕರಣ ಬಾಕಿ: ರಾಮನಗರ ಜಿಲ್ಲೆಯಲ್ಲಿ ಪೋಡಿಗೆ ಸಂಬಂಧಿಸಿದ 10 ಸಾವಿರ ಪ್ರಕರಣಗಳು ಬಾಕಿ ಇವೆ. ಇದಕ್ಕೆ ಕಂದಾಯ ಮತ್ತು ಭೂ ಮಾಪನ ಇಲಾಖೆ ಅಧಿಕಾರಿಗಳ ನಡುವಿನ ಸಾಮರಸ್ಯದ ಕೊರತೆಯೇ ಕಾರಣ ಎಂದು ಸುರೇಶ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಉಪ ವಿಭಾಗಾಧಿಕಾರಿ, ತಹಸೀಲ್ದಾರ್, ಉಪ ತಹಸೀಲ್ದಾರ್ ಮತ್ತು ಭೂ ಮಾಪನ ಇಲಾಖೆಗಳು ಕಂದಾಯ ಇಲಾಖೆ ಅಧೀನದಲ್ಲೇ ಬರುತ್ತವೆ. ಹೀಗಾಗಿ ಎಲ್ಲ ಅಧಿಕಾರಿಗಳ ನಡುವೆ ಸಾಮರಸ್ಯವಿದ್ದರೆ, ಸಮಸ್ಯೆಗಳ ತ್ವರಿತ ಪರಿಹಾರ ಸಾಧ್ಯ ಎಂದರು. ನಾನು ಸಂಸದನಾಗಿ ಎಲ್ಲೋ ಕುಳಿತು ಕೆಲಸ ಮಾಡುತ್ತಿಲ್ಲ. ಜನ ಸಾಮಾನ್ಯ ನಡುವೆ ಇದ್ದು, ಅವರ ಬವಣೆಗಳನ್ನು ಹತ್ತಿರದಿಂದ ಅರಿತಿದ್ದೇನೆ. ಅಧಿಕಾರಿಗಳ ವೈಫಲ್ಯಕ್ಕೆ ಬಾಕಿ ಇರುವ ಕಡತಗಳ ಸಂಖ್ಯೆಯೇ ಸಾಕ್ಷಿ ಎಂದು ಅವರು ಗುಡುಗಿದರು. ಆಂದೋಲನ ಮುಂದುವರೆಸಿ: ಕಚೇರಿಗಳಿಗೆ ಸಲ್ಲಿಕೆಯಾದ ಅರ್ಜಿಗಳನ್ನಷ್ಟೇ ಪರಿಗಣಿಸಬೇಡಿ. ಅದೆಷ್ಟೋ ಸಮಸ್ಯೆಗಳಿಗೆ ಸಂಬಂಧಿಸಿದಂತೆ ರೈತರು ಅರ್ಜಿ ಸಲ್ಲಿಸಿಯೇ ಇಲ್ಲ. ಹೀಗಾಗಿ ಪಹಣಿ ಮತ್ತು ಭೂ ದಾಖಲೆಗಳ ತಿದ್ದುಪಡಿ ವಿಶೇಷ ಆಂದೋಲವನ್ನು ನಿರಂತರವಾಗಿ ಮುಂದುವರಿಸಿ ಎಂದು ಸೂಚಿಸಿದರು. ಈ ವಿಷಯವಾಗಿ ಮಾತನಾಡಿದ ಉಪ ವಿಭಾಗಾಧಿಕಾರಿ ಸಿದ್ದಪ್ಪ, ಹಿಂದಿನ ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆಸಿದ ವಿಶೇಷ ಆಂದೋಲನದಡಿ 30 ಸಾವಿರ ಪಹಣಿಗಳ ತಿದ್ದುಪಡಿಗೆ ಕ್ರಮ ಕೈಗೊಳ್ಳಲಾಗಿದೆ. ಇದೇ ಮಾದರಿ ಪೋಡಿ ಪ್ರಕರಣ ಆಂದೋಲನ ನಡೆಸುವುದು ಸೂಕ್ತ ಎಂದರು.
ಜಿಲ್ಲಾಧಿಕಾರಿ ಆದೇಶ: ಕಂದಾಯ ಅಧಿಕಾರಿಗಳು ಪರಸ್ಪರರ ಮೇಲೆ ದೂಷಣೆ ಮತ್ತು ಹೊಣೆ ಹೇರಿ, ಜಾರಿಕೊಳ್ಳುವುದು ಬೇಡ. ಸಾಮರಸ್ಯದಿಂದ ಒಂದು ತಂಡವಾಗಿ ಕೆಲಸ ಮಾಡಿ ಜನಸಾಮಾನ್ಯರು ಹಾಗೂ ರೈತರ ಸಮಸ್ಯೆಗೆ ಸ್ಪಂದಿಸಿ ಎಂದು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಆದೇಶಿಸಿದರು. ಕಂದಾಯ ಇಲಾಖೆಯ ಅಧೀನ ಅಧಿಕಾರಿಗಳ ಹಂತದಲ್ಲಿ ಪಹಣಿ, ಪೋಡಿ ಮತ್ತು ಭೂ ದಾಖಲೆಗಳ ಪ್ರಕರಣಗಳಲ್ಲಿ ಆಗುವ ಅನಗತ್ಯ ತೊಂದರೆಗಳ ಬಗ್ಗೆ ಸಾರ್ವಜನಿಕರು ತಮ್ಮನ್ನು ನೇರವಾಗಿ ಸಂಪರ್ಕಿಸಿ ದೂರು ನೀಡಬಹುದು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎ.ಬಿ.ಬಸವರಾಜು, ಭೂ ಮಾಪನ ಮತ್ತು ದಾಖಲೆಗಳ ಇಲಾಖೆ ಉಪ ನಿರ್ದೇಶಕ ಜಯಪ್ರಕಾಶ್, ಉಪ ವಿಭಾಗಾಧಿಕಾರಿ ಸಿದ್ದಪ್ಪ, ನಾಲ್ಕೂ ತಾಲೂಕಿನ ತಹಸೀಲ್ದಾರ್ಗಳು ಮತ್ತು ಕಂದಾಯ ಅಧಿಕಾರಿಗಳು ಭಾಗವಹಿಸಿದ್ದರು.