ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಸಹಾಯ ಸದುಪಯೋಗ ಪಡೆಯಿರಿ: ಡಾ.ವೆಂಕಟೇಶ್

Vishwanath S
Updated On : 26 Jun 2014, 12:29 pm

ರಾಮನಗರ: ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸರ್ಕಾರವು ಧನ ಸಹಾಯ ಮಾಡುತ್ತಿದೆ. ವಿದ್ಯಾರ್ಥಿಗಳು ಇದನ್ನು
ಸದುಪಯೋಗಪಡಿಸಿಕೊಂಡು ಯೋಜನೆಯ ಉದ್ದೇಶವನ್ನು ಸಾರ್ಥಕಪಡಿಸಬೇಕು ಎಂದು ಸಿಇಒ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.  ನಗರದ ಜಿಲ್ಲಾ ಪಂಚಾಯತ್ ಭವನದಲ್ಲಿರುವ ಸಿಇಒ ಕಚೇರಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಸಹಾಯಧನದ ಚೆಕ್ ವಿತರಿಸಿದ ನಂತರ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಪಡೆದು, ಉತ್ತಮ ಭವಿಷ್ಯ ರೂಪಿಸಿಕೊಳ್ಳುವುದರ ಜತೆಗೆ ಮಾನವೀಯ ಮೌಲ್ಯಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ತಮ್ಮ ಗ್ರಾಮದಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡು ಇತರರಿಗೆ ಮಾದರಿಯಾಗಬೇಕು. ಕಷ್ಟದಲ್ಲಿರುವವರಿಗೆ ನೆರವು ನೀಡಬೇಕು. ಉನ್ನತ ಹುದ್ದೆಗಳನ್ನು ಅಲಂಕರಿಸಿದಾಗ ತಮ್ಮ ಗ್ರಾಮದ ಅಭಿವೃದ್ಧಿಯ ಕಡೆಗೆ ಮನಸ್ಸು ಮಾಡಿ ಎಂದು ಸಲಹೆ ನೀಡಿದರು.   ಪಿ.ಯು.ಸಿ.ಯ ಕಲೆ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಜಿಲ್ಲೆಯ 5 ವಿದ್ಯಾರ್ಥಿಗಳಂತೆ ಒಟ್ಟು 15 ಪರಿಶಿಷ್ಟ ಹಾಗೂ 15 ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನವನ್ನು  ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಬಿ.ರಂಗೇಗೌಡ ಇದ್ದರು.
ಕಾಡಾನೆಗಳ ದಾಳಿಗೆ ಬಾಳೆ ಬೆಳೆ ನಾಶ
ಕನಕಪುರ: ಕನಕಪುರ ತಾಲೂಕು ಕಬ್ಬಾಳು ಅರಣ್ಯ ಪ್ರದೇಶದಲ್ಲಿ ಹತ್ತಕ್ಕೂ ಹೆಚ್ಚು ಸಂಖ್ಯೆಯಲ್ಲಿರುವ ಕಾಡಾನೆಗಳ ಗುಂಪು ಹಲವಾರು ಹಳ್ಳಿಗಳ ಮೇಲೆ ದಾಳಿನಡೆಸಿದ್ದು ಲಕ್ಷಾಂತರ ಬೆಲೆಯ ಫಸಲು ನಷ್ಟವಾಗಿದೆ. ಕಬ್ಬಾಳು ಸುತ್ತ-ಮುತ್ತಲಿನ ಕಾಡಂಚಿನಲ್ಲಿರುವ ಹನುಮಂತನಗರ, ಗೊಲ್ಲರದೊಡ್ಡಿ, ಕಂಚನಹಳ್ಳಿ, ಹನಿಯೂರು ಮೊದಲಾದ ಗ್ರಾಮಗಳಲ್ಲಿನ ಹೊಲಗಳು, ಬಾಳೆ-ತೋಟಗಳಿಗೆ ಆನೆಗಳ ಹಿಂಡು ದಾಳಿ ನಡೆಸಿ ಅಪಾರ ನಷ್ಟ ಉಂಟು ಮಾಡುತ್ತಿವೆ. ಕಬ್ಬಾಳು ಪ್ರದೇಶದಲ್ಲಿ ಒಟ್ಟಾರೆ 13 ಕಾಡಾನೆಗಳ ಹಿಂಡು ಬೀಡು ಬಿಟ್ಟಿರುವ ಸುದ್ದಿಯಿದ್ದು, ಅವುಗಳಲ್ಲಿ ಎರಡು ಸಲಗ, ಎರಡು ಮರಿಯಾನೆ ಹಾಗೂ ಐದು ಹೆಣ್ಣಾನೆಗಳು ಸೇರಿವೆ ಎಂದು ತಿಳಿದು ಬಂದಿದೆ.  ಆನೆಗಳ ದಾಳಿಯಿಂದ ಕಂಚನಹಳ್ಳಿ ಗ್ರಾಮದ ಚಲುವಯ್ಯ ಎಂಬುವರ ಬಾಳೆತೊಟದಲ್ಲಿ 600 ಬಾಳೆ ಗಿಡಗಳು, ಮಹದೇವಯ್ಯ ತೋಟದಲ್ಲಿ ಫಸಲಿಗೆ ಬಂದಿದ್ದ 400 ಬಾಳೆ ಗಿಡಗಳನ್ನು ಆನೆಗಳ ಹಿಂಡು ನಾಶಗೊಳಿಸಿದೆ.
ಹನುಮಂತನಗರದ ವೆಂಕಟರಾಮು ಹಾಗೂ ಶಿವಲಿಂಗಯ್ಯಗೆ ಸೇರಿದ ಜಮೀನಿನಲ್ಲಿ ಮಾವು ಹಾಗೂ ತೆಂಗಿನ ಮರಗಳು. ಹನಿಯೂರಿನಲ್ಲಿ ನಾರಾಯಣ್ ಎಂಬುವರಿಗೆ ಸೇರಿದ ತೋಟದಲ್ಲಿ 30 ತೆಂಗಿನಮರ 300 ಬಾಳೆ ಗಿಡಗಳನ್ನು ಆನೆಗಳು ನಾಶಪಡಿಸಿವೆ. ಘಟನಾ ಸ್ಥಳಕ್ಕೆ ಆಗಮಿಸಿದ ವಲಯ ಅರಣ್ಯಾಧಿಕಾರಿ ರಾಜಶೇಖರ್ ಮಾತನಾಡಿ, ಕಳೆದ ರಾತ್ರಿ ಆನೆಗಳನ್ನು ಓಡಿಸಲು ತುಪಾಕಿ ಹಾರಿಸಲಾಗಿತ್ತು. ದಾಳಿಗೆ ಬೆದರಿ ಓಡಿದ ಆನೆಗಳು ರಾತ್ರಿ ಮರಳಿ ಬಂದು ದಾಳಿ ನಡೆಸಿವೆ ಎಂದು ತಿಳಿಸಿದ್ದಾರೆ.
ರೈತರಿಗೆ ಜನಪ್ರತಿನಿಧಿಗಳ ಮಾರ್ಗದರ್ಶನ ಅಗತ್ಯ : ದ್ಯಾವಪ್ಪ
ಹೊಸಕೋಟೆ: ರೈತರಿಗೆ ಸೌಲಭ್ಯಗಳ ಬಗ್ಗೆ ತಿಳಿವಳಿಕೆ ಮೂಡಿಸುವಲ್ಲಿ ಚುನಾಯಿತ ಪ್ರತಿನಿಧಿಗಳು ಪ್ರಮುಖ ಪಾತ್ರ ಪಹಿಸಬೇಕಾದ್ದು ಅತ್ಯವಶ್ಯವಾಗಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ದ್ಯಾಮಪ್ಪ ಹೇಳಿದರು. ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಸುರಕ್ಷಿತ ಕೀಟನಾಶಕಗಳ ಬಳಕೆ ಕುರಿತ ಕಾರ್ಯಾಗಾರದಲ್ಲಿ ಪಲ್ಗೊಂಡು ಮಾತನಾಡಿದ ಅವರು, ವ್ಯಾಪಾರಿಗಳು ಉತ್ತಮ ಗುಣಮಟ್ಟದ ಕೃಷಿ ಪರಿಕರಗಳನ್ನು ಒದಗಿಸಿ ಬಳಕೆಯ ಬಗ್ಗೆ ಸೂಕ್ತ ಮಾಹಿತಿ ನೀಡಬೇಕು. ಅವುಗಳ ತಿಳಿವಳಿಕೆಯ ಕೊರತೆಯಿಂದಾಗಿ ಕಳಪೆ ಮಟ್ಟದ ಪರಿಕರಣಗಳನ್ನು ಬಳಸುವುದರಿಂದ ರೈತರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ ಎಂದರು. ಕೃಷಿ ಇಲಾಖೆ ಸಿಬ್ಬಂದಿಯೊಂದಿಗೆ ಚುನಾಯಿತ ಪ್ರತಿನಿಧಿಗಳು, ಗ್ರಾಮ ಪಂಚಾಯಿತಿ ಸಿಬ್ಬಂದಿ ಸಹಕರಿಸಬೇಕು ಎಂದು ವಿವರಿಸಿದರು.
ಸಹಾಯಕ ಕೃಷಿ ನಿರ್ದೇಶಕ ಎ.ಎಸ್. ವೆಂಕಟೇಶ್, ಮಾತನಾಡಿ, ಮಾರಾಟಗಾರರು ರೈತರು ಕೃಷಿ ಚಟುವಟಿಕೆಯಲ್ಲಿ ಬಳಸುವ ಪರಿಕರಗಳನ್ನು ನಿಗದಿಪಡಿಸಿದ ಬೆಲೆಗೆ ಮಾರಾಟ ಮಾಡುವುದರೊಂದಿಗೆ ಬಿಲ್‌ಅನ್ನು ಕಡ್ಡಾಯವಾಗಿ ನೀಡಿ ಉಪಕರಣದ ಕಾರ್ಯಾಚರಣೆ, ಖಾತರಿ ಬಗ್ಗೆ ನಿರ್ದಿಷ್ಟವಾಗಿ ಸೂಚಿಸಿ ಆಯ್ದ ಸ್ಥಳಗಳಲ್ಲಿ ತಯಾರಕರ ಸಹಯೋಗದೊಂದಿಗೆ ರೈತರಿಗೆ ಪ್ರಾತ್ಯಕ್ಷಿಕೆ ಏರ್ಪಡಿಸಬೇಕು ಎಂದು ಹೇಳಿದರು.
ಪ್ರತ್ಯೇಕ ಅಪಘಾತ: ಮೂವರ ಸಾವು
ರಾಮನಗರ: ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಬುಧವಾರ ನಡೆದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.
ನಗರದ ಹೊರವಲಯದ ಮಾದಾಪುರ ಗೇಟ್ ಬಳಿ ಕಾರು ಮತ್ತು ಲಾರಿ ನಡುವೆ ನಡೆದ ಅಪಘಾತದಲ್ಲಿ ಬೆಂಗಳೂರಿನ ಶಿವಾಜಿನಗರ ನಿವಾಸಿ ಆಶಾ (20) ಮತ್ತು ಮಲ್ಲೇಶ್ವರ ನಿವಾಸಿ ಪಲ್ಲವಿ (26) ಮೃತಪಟ್ಟಿದ್ದಾರೆ.
ಆಶಾ ಸ್ಥಳದಲ್ಲೇ ಮೃತಪಟ್ಟರೆ, ಪಲ್ಲವಿ ಜಿಲ್ಲಾಸ್ಪತ್ರೆಯಲ್ಲಿ ಕೊನೆ ಉಸಿರೆಳೆದರು. ಕಾರಿನಲ್ಲಿದ್ದ ಸುರೇಶ ಮತ್ತು ಚಾಲಕ ಮಣಿ ಎಂಬುವರಿಗೆ ಕೈ ಕಾಲು ಮುರಿದಿದೆ. ಇವರಿಗೆ ಜಿಲ್ಲಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.  
ಬೆಂಗಳೂರಿನ ವಿಲ್ಸನ್ ಗಾರ್ಡನ್‌ನಲ್ಲಿರುವ ಟ್ರಾವೆಲ್ಸ್ ಒಂದರ ಸಿಬ್ಬಂದಿಗಳಾದ ಇವರು ಬುಧವಾರ ಬೆಳಗ್ಗೆ ಮೈಸೂರು ಪ್ರವಾಸ ಮುಗಿಸಿದ ನಂತರ ಬೆಂಗಳೂರಿಗೆ ವಾಪಸಾಗುತ್ತಿದ್ದ ವೇಳೆ ಮಾದಾಪುರ ಗೇಟ್ ಬಳಿ ಟಿಪ್ಪರ್ ಲಾರಿಯೊಂದು ತಿರುವು ಪಡೆಯುತ್ತಿರುವಾಗ ವೇಗವಾಗಿ ಬಂದ ಕಾರು ನಿಯಂತ್ರಣಕ್ಕೆ ಬಾರದೆ ಲಾರಿಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಹಿಂಬದಿ ಸೀಟ್‌ನಲ್ಲಿ ಕುಳಿತಿದ್ದ ಮಹಿಳೆಯರು ಸಾವಿಗೀಡಾದರೆ, ಚಾಲಕ ಹಾಗೂ ಆತನ ಪಕ್ಕದಲ್ಲಿ ಕುಳಿತಿದ್ದ ವ್ಯಕ್ತಿಗೆ ಗಂಭೀರ ಗಾಯಗಳಾಗಿವೆ. ಈ ಸಂಬಂಧ ಸಂಚಾರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.  
ಸ್ಕೂಟರ್ ಸವಾರ ಸಾವು : ಮತ್ತೊಂದು ಅಪಘಾತದಲ್ಲಿ ತಾಲೂಕಿನ ಜಾಲಮಂಗಲ ಮೂಲದವರಾದ ಜಯರಾಮಯ್ಯ (59) ಮೃತಪಟ್ಟಿದ್ದಾರೆ. ಬೆಂಗಳೂರಿನಲ್ಲಿ ರಿಸರ್ವ್ ಪೊಲೀಸ್ ಪೇದೆಯಾಗಿದ್ದ ಇವರು ಸಂಜೆ ಬೈಕ್‌ನಲ್ಲಿ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಬಸವನಪುರದ ಗೇಟ್ ಬಳಿ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದಿದ್ದು, ಕೆಳಕ್ಕೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ತಲೆಗೆ ಪೆಟ್ಟು ಬಿದ್ದು ತೀವ್ರವಾಗಿ ಗಾಯಗೊಡಿದ್ದ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಅಪಘಾತ ಸಂಬಂಧ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಹ್ಯಾಟ್ರಿಕ್ ಸಾಧಿಸಿದ ಪುಟ್ಟಣ್ಣಗೆ ಅಭಿನಂದನೆ
ದೊಡ್ಡಬಳ್ಳಾಪುರ: ವಿಧಾನ ಪರಿಷತ್ತಿನ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಸತತ 3ನೇ ಬಾರಿಗೆ ಗೆಲವು ಸಾಧಿಸಿ ಹ್ಯಾಟ್ರಿಕ್ ಸಾಧನೆ ಮಾಡಿದ ಮೇಲ್ಮನೆ ಸದಸ್ಯ ಪುಟ್ಟಣ್ಣ ಅವರಿಗೆ ದೊಡ್ಡಬಳ್ಳಾಪುರ ತಾಲೂಕಿನ ಉಪನ್ಯಾಸಕರು ಮತ್ತು ಶಿಕ್ಷಕರು ಅಭಿನಂದಿಸಿದ್ದಾರೆ.
ಉಪನ್ಯಾಸಕರ ಪರವಾಗಿ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಪುಟ್ಟಣ್ಣ, ಸತತ 3ನೇ ಬಾರಿಗೆ ಅತಿಹೆಚ್ಚು ಮತಗಳನ್ನು ನೀಡಿ ಗೆಲ್ಲಿಸಿರುವ ಶಿಕ್ಷಕ ಬಂಧುಗಳಿಗೆ ಕೃತಜ್ಞತೆ ಸಲ್ಲಿಸಿದರು. ಶಿಕ್ಷಕರ ಮತ್ತು ಉಪನ್ಯಾಸಕರ ಅನೇಕ ಜ್ವಲಂತ ಸಮಸ್ಯೆಗಳಿಗೆ ದನಿಯಾಗುವುದು ನನ್ನ ಹೊಣೆಗಾರಿಕೆ. ಪಿಯುಸಿ ಉಪನ್ಯಾಸಕರು ಮತ್ತು ಪದವಿ ಕಾಲೇಜುಗಳ ಉಪನ್ಯಾಸಕರ ನಡುವೆ ಇರುವ ವೇತನ ತಾರತಮ್ಯ ನಿವಾರಣೆಗೆ ಆದ್ಯತೆ ನೀಡಬೇಕಿದೆ. ಖಾಸಗಿ ಶಾಲೆಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೂ ವಿಮಾ ಸೌಲಭ್ಯ ಸೇರಿದಂತೆ ಕೆಲ ಮೂಲ ಸವಲತ್ತುಗಳನ್ನು ವಿಸ್ತರಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರಬೇಕಿದೆ. ಈ ಬಗ್ಗೆ ಶಿಕ್ಷಣ ಸಚಿವರೊಂದಿಗೆ ಮಾತುಕತೆ ನಡೆಸಲಾಗುವುದು. ಶಿಕ್ಷಕರ ಬದುಕಿಗೆ ಮಾರಕವಾಗುವ ಯಾವುದೇ ಆದೇಶಗಳನ್ನು ಸರ್ಕಾರ ಕೈಗೊಳ್ಳಬಾರದು. ಮುಂಬರುವ ಶಿಕ್ಷಕರ ಹಿತಕ್ಕೆ ಧಕ್ಕೆಯಾದರೆ ರಾಜ್ಯಾದ್ಯಂತ ಹೋರಾಟಕ್ಕೂ ಸಿದ್ದ ಎಂದರು.
ಉಪನ್ಯಾಸಕ ಎಂ.ಸಿ. ಮಂಜುನಾಥ್, ಪುಟ್ಟಣ್ಣ ಅವರನ್ನು ಅಭಿನಂದಿಸಿದರು. ಎಂ.ಚನ್ನಕೃಷ್ಣ, ಪಿಳ್ಳ ಆಂಜಿನಪ್ಪ ಸೇರಿದಂತೆ ಅನೇಕರು ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement