ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮಾದಕ ಮಾನವಗೆ ಮಾರಕ

Mainashree
Updated On : 26 Jun 2014, 10:56 am

ಕ.ಪ್ರ.ವಾರ್ತೆ ರಾಮನಗರ, ಜೂ.26
ಕ್ಷಣಿಕ ಸುಖವನ್ನು ನೀಡುವ ಮಾದಕ ವಸ್ತುಗಳನ್ನು ಸೇವಿಸುವುದರಿಂದ ಕ್ಯಾನ್ಸರ್‌ನಂಥ ಭಯಾನಕ ರೋಗಗಳು ಬರುತ್ತವೆ. ಸಾರ್ವಜನಿಕರು ಮಾದಕ ವಸ್ತುಗಳ ಸೇವನೆಯಿಂದ ವಿಮುಖರಾಗಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಂ.ಕೆ.ಪ್ರಹ್ಲಾದ ಕರೆ ನೀಡಿದರು.
ಜಿಲ್ಲಾ ಮಕ್ಕಳ ರಕ್ಷಣಾ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ನಗರದ ಜಿಲ್ಲಾ ಕಾರಾಗೃಹದಲ್ಲಿ ಗುರುವಾರ ಆಯೋಜಿಸಲಾಗಿದ್ದ ಅಂತಾರಾಷ್ಟ್ರೀಯ ಮಾದಕ ವಸ್ತುಗಳ ಬಳಕೆ ಮತ್ತು ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಜಾಮೀನು ಸಿಗುವುದಿಲ್ಲ: ಮಾದಕ ವಸ್ತುಗಳ ಸಾಗಾಣಿಕೆ ಮಾಡಿ ಸಿಕ್ಕಿಬಿದ್ದವರಿಗೆ ಜಾಮೀನು ಸಿಗುವುದಿಲ್ಲ. ಆರೋಪ ಸಾಬೀತಾದರೆ  ಕನಿಷ್ಟ 10 ವರ್ಷ ಜೈಲುವಾಸದ ಜತೆಗೆ ಲಕ್ಷಾಂತರ ರುಪಾಯಿ ದಂಡ ತೆರಬೇಕಾಗುತ್ತದೆ. ಆದ್ದರಿಂದ ಮಾದಕ ವಸ್ತುಗಳ ಸೇವನೆ ಹಾಗೂ ಸಾಗಾಣಿಕೆಯಿಂದ ದೂರವಿರಬೇಕು ಎಂದು ನ್ಯಾಯಾಧೀಶರು ತಿಳಿಸಿದರು.  
ಮಾದಕ ವಸ್ತುಗಳನ್ನು ಬಳಸುವುದು ಮತ್ತು ಸಾಗಾಣಿಕೆ ಮಾಡುವುದು ಮಹಾಪರಾಧ. ಮಾದಕ ವಸ್ತುಗಳಿಗೆ ದಾಸರಾಗುವುದರಿಂದ ಅನಾರೋಗ್ಯಕ್ಕೆ ತುತ್ತಾಗಿ, ಕುಟುಂಬಕ್ಕೆ ಹೊರೆಯಾಗಬೇಕಾಗುತ್ತದೆ.
ಇದರಿಂದ ವ್ಯಸನಿ ಮಾತ್ರವಲ್ಲದೆ ಆತನ ಕುಟುಂಬವೂ ತೊಂದರೆ ಅನುಭವಿಸುವಂತಾಗುತ್ತದೆ ಎಂದು ಜಿಲ್ಲಾಧಿಕಾರಿ ಎಫ್.ಆರ್.ಜಮಾದಾರ್ ಎಚ್ಚರಿಸಿದರು.
ಆಕರ್ಷಣೆ ಬೇಡ: ಯುವಕ, ಯುವತಿಯರು, ಮಹಿಳೆಯರೂ ಸೇರಿದಂತೆ ಮಕ್ಕಳೂ ಕೂಡ ಮಾದಕ ವಸ್ತುಗಳ ಕಡೆಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ. ಮಾದಕ ವಸ್ತುಗಳನ್ನು ಸೇವಿಸಿ ವಾಹನ ಚಾಲನೆ ಮಾಡುವುದರಿಂದ ಹೆಚ್ಚು ಅಪಘಾತಗಳು ಸಂಭವಿಸುತ್ತಿವೆ. ಮಾತ್ರವಲ್ಲ, ಜತೆಗೆ ಸಮಾಜದಲ್ಲಿ ಕೊಲೆ, ಅತ್ಯಾಚಾರ ಪ್ರಕರಣಗಳೂ ಹೆಚ್ಚುತ್ತಿವೆ ಎಂದು ತಿಳಿಸಿದರು.
ವಿಷಾದ: ಮನುಷ್ಯ ಜನ್ಮ ಅತ್ಯಂತ ಶ್ರೇಷ್ಠವಾದುದಾಗಿದೆ. ಮಾದಕ ವಸ್ತುಗಳ ಬಳಕೆಯಿಂದ ಅಮೂಲ್ಯ ಜೀವನವನ್ನು ಹಾಳುಮಾಡಿಕೊಳ್ಳುತ್ತಿದ್ದಾರೆ. ಸರಿ ತಪ್ಪುಗಳನ್ನು ಯೋಚಿಸುವ ಶಕ್ತಿ ಹೊಂದಿರುವ ಮನುಷ್ಯರೇ ಕ್ಷಣಿಕ ಸುಖದ ಆಸೆಗಾಗಿ ಮಾದಕ ವ್ಯಸನಿಗಳಾಗುತ್ತಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ಜಿ.ಪಂ. ಸಿಇಒ ಡಾ.ಎಂ.ವಿ.ವೆಂಕಟೇಶ್ ವಿಷಾದಿಸಿದರು.
ಮಾದಕ ವಸ್ತುಗಳ ಚಟಕ್ಕೆ ಯುವ ಜನಾಂಗವೇ ಹೆಚ್ಚಿನ ಸಂಖ್ಯೆಯಲ್ಲಿ ಬಲಿಯಾಗುತ್ತಿರುವುದು ದೇಶದ ಆರ್ಥಿಕತೆಯ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಲಿದೆ. ಮಣಿಪುರ, ನಾಗಾಲ್ಯಾಂಡ್, ಅಸ್ಸಾಂ ರಾಜ್ಯಗಳಲ್ಲಿ ಮಾದಕ ವ್ಯಸನಿಗಳು ಹೆಚ್ಚಾಗಿದ್ದು, ಕ್ಯಾನ್ಸರ್, ಏಡ್ಸ್‌ನಂತಹ ಭಯಾನಕ ರೋಗಗಳಿಗೆ ತುತ್ತಾಗಿ ಸಾವಿನ ಪ್ರಮಾಣ ಹೆಚ್ಚಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.  
 ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಕೆ.ರಾಧಾ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಅಯೂಬ್ ಷರೀಫ್, ಡಿವೈಎಸ್‌ಪಿ ಲಕ್ಷ್ಮೀಗಣೇಶ್, ಕಾರಾಗೃಹ ಅಧೀಕ್ಷಕಿ ಆರ್.ಲತಾ, ಮನೋವೈದ್ಯೆ ಡಾ.ರಜನಿ, ಸೋಮಲತಾ ಭಾಗವಹಿಸಿದ್ದರು.
ಇದೇ ವೇಳೆ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕೈದಿಗಳ ಕುಟುಂಬದ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ 5 ಮಕ್ಕಳಿಗೆ ತಲಾ ರು.1000 ಚೆಕ್  ವಿತರಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement