ವಸತಿ ಶಾಲೆ ವಾಚ್ಮನ್ ವಿರುದ್ಧ ದೂರು: ಬಂಧನ
ಆನೇಕಲ್ಲು: ಇಲ್ಲಿನ ವಸತಿ ಶಾಲೆಯಲ್ಲಿ ವಾಚಮನ್ ಆಗಿರುವ ಕಾರ್ತೀಕ್ ತನ್ನ ಇತರ ಗೆಳೆಯರೊಡನೆ ಸೇರಿ ರಾತ್ರಿ ಹೊತ್ತಿನಲ್ಲಿ ಶಾಲೆಯ ಅವರಣದಲ್ಲಿ ಕುಡಿತ, ನೃತ್ಯ, ಅಶ್ಲೀಲ ಮಾತುಗಳ ಪ್ರಯೋಗ, ಟಿವಿ ವೀಕ್ಷಣೆ ಮಾಡುವ ಮೂಲಕ ವಿದ್ಯಾರ್ಥಿನಿಯರ ಓದಿನ ಏಕಾಗ್ರತೆಗೆ ಧಕ್ಕೆ ತಂದಿದ್ದಾನೆಂದು ವಸತಿ ಶಾಲೆಯ ಮಕ್ಕಳ ಹಾಗೂ ಪೋಷಕರ ಹಿತರಕ್ಷಣಾ ಸಮಿತಿಯ ಅಧ್ಯಕ್ಷ ಡಿ. ಮುನಿಯಲ್ಲಪ್ಪ ಆನೇಕಲ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ. ಈಗ ದೂರಿನ ಮೇರೆಗೆ ವಾಚ್ಮನ್ ಬಂಧಿಸಲಾಗಿದೆ. ವಾಚ್ಮನ್ ಆದ ಕಾರ್ತೀಕ್ ಪ್ರಾಂಶುಪಾಲರ ಕುರ್ಚಿಯಲ್ಲಿ ತಾನೇ ಕುಳಿತು ಆಡಳಿತ ನಡೆಸುವುದು, ಹುಡುಗಿಯರ ಚಿತ್ರವನ್ನು ತನ್ನ ಮೊಬೈಲ್ನಲ್ಲಿ ಸೆರೆ ಹಿಡಿಯುವುದು ಅನುಚಿತವಾಗಿ ವರ್ತಿಸುವುದು ಈತನ ಹವ್ಯಾಸವಾಗಿದೆ. ಈತನ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ಆಗ್ರಹಿಸಿದ್ದಾರೆ. ಎಲ್ಲ ವಿಷಯಗಳನ್ನು ಅರಿತು ಜವಾಬ್ದಾರಿ ಸ್ಥಾನದಲ್ಲಿರುವ ಪ್ರಾಂಶುಪಾಲ ಮಲ್ಲಿಕಾರ್ಜುನಸ್ವಾಮಿಯವರ ಮೇಲೂ ಕಾನೂನು ಕ್ರಮ ಜರುಗಿಸಬೇಕೆಂದು ಕೋರಿದ್ದಾರೆ.ಕಾರ್ತೀಕ್ನನ್ನು ಬಂಧಿಸಿರುವ ಆನೇಕಲ್ ಪೊಲೀಸರು ಆತನ ಹೇಳಿಕೆ ಪಡೆದಿದ್ದಾರೆ.ಈ ನಡುವೆ ಪ್ರಾಂಶುಪಾಲ ಮಲ್ಲಿಕಾರ್ಜುನಸ್ವಾಮಿ ಠಾಣೆಗೆ ಹಾಜರಾಗಿ ತನ್ನದೇನು ತಪ್ಪಿಲ್ಲವೆಂದೂ ಇದರಲ್ಲಿ ಏನೋ ಕುತಂತ್ರ ಅಡಗಿದೆ. ನಾನೊಬ್ಬ ನಿವೃತ್ತ ಸೈನ್ಯಾಧಿಕಾರಿ. ಇಂತಹ ಘಟನೆ ವಸತಿ ಶಾಲೆ ಆವರಣದಲ್ಲಿ ನಡೆದಿಲ್ಲ ಎಂದು ಹೇಳಿದ್ದಾರೆ.