ಕುಟುಂಬಕ್ಕೊಂದು ಹಸು ಇದ್ದರೆ ಗ್ರಾಮೀಣ ಬದುಕು ಬಂಗಾರ: ಎಚ್.ಸಿ. ಬಾಲಕೃಷ್ಣ
ಮಾಗಡಿ: ಗ್ರಾಮೀಣ ಕುಟುಂಬಕ್ಕೊಂದು ಹಸು ಇದ್ದರೆ ಅವರ ಬದುಕು ಬಂಗಾರವಾಗುತ್ತದೆ ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ನುಡಿದರು.
ಅವರು ತಾಲೂಕಿನ ಕುಗ್ರಾಮ ಭಂಟರಕುಪ್ಪೆಯಲ್ಲಿ ನೂತನ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಹಾಲು ಅಳತೆ ಮಾಡುವ ಮೂಲಕ ಉದ್ಘಾಟಿಸಿ ಮಾತನಾಡಿದರು. ತಾಲೂಕಿನ ಜನ ಜಾನುವಾರುಗಳನ್ನು ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸಹಕಾರ ಸಂಘದ ಕಾರ್ಯದರ್ಶಿ ರೈತರಿಗೆ ಹೆಚ್ಚೆಚ್ಚು ಹಾಲು ಉತ್ಪಾದನೆ ಮಾಡಲು ಅಗತ್ಯ ಮಾಹಿತಿ ನೀಡಬೇಕು. ಸರ್ಕಾರ ವಿವಿಧ ಜನಪರ ಯೋಜನೆಗಳನ್ನು ಸಮರ್ಪಕವಾಗಿ ರೈತರಿಗೆ ತಲುಪಿಸಬೇಕು. ಹಾಲು ಪೂರೈಕೆ ಮಾಡಿದ ರೈತರಿಗೆ ಸಕಾಲಕ್ಕೆ ಹಾಲಿನ ಹಣವನ್ನು ನೀಡಬೇಕು. ಯೋಜನೆ ಕುರಿತು ಕರಪತ್ರ ಮುದ್ರಿಸಿ ರೈತರ ಮನೆ ಮನೆಗಳಿಗೆ ತೆರಳಿ ಹಂಚಬೇಕು. ಈ ನಿಟ್ಟಿನಲ್ಲಿ ಜನಜಾಗೃತಿಗೊಳಿಸಿ, ರೈತರ ಆರ್ಥಿಕ ಸ್ವಾವಲಂಬನೆಗೆ ಸಹಕಾರಿಯಾಗಬೇಕು. ಹಾಲು ಉತ್ಪಾದಕರ ಸಹಕಾರ ಸಂಘವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಕಾರ್ಯದರ್ಶಿ ಪಾತ್ರ ಬಹಳ ಮುಖ್ಯವಾದುದು. ಸಹಕಾರಿ ಕ್ಷೇತ್ರದಿಂದ ಮಾತ್ರ ಗ್ರಾಮಗಳ ಉದ್ಧಾರ ಎಂದರು.
ಪ್ರಥಮ ಸ್ಥಾನ: ಸೋಲೂರು ಹಾಲು ಶಿಥಲೀಕೇಂದ್ರದ ಉಪ ವ್ಯವಸ್ಥಾಪಕ ಜವರಯ್ಯ ಮಾತನಾಡಿ ಈಗ ಸುಮಾರು 1.50 ಲಕ್ಷ ಲೀಟರ್ ಹಾಲು ಪೂರೈಕೆಯಾಗುತ್ತಿರುವುದರಿಂದ 7 ಕೋಟಿ ರು. ವೆಚ್ಚದಲ್ಲಿ ಸೋಲೂರು ಹಾಲು ಶಿಥಲೀಕೇಂದ್ರವನ್ನು ವಿಸ್ತರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಗುಣಮಟ್ಟದ ಹಾಲು ಪೂರೈಕೆಯಲ್ಲಿ ಮಾಗಡಿ ತಾಲೂಕು ಪ್ರಥಮ ಸ್ಥಾನದಲ್ಲಿದೆ. ಬೆಂಗಳೂರು ಸಹಕಾರಿ ಹಾಲು ಒಕ್ಕೂಟ ಕಲ್ಯಾಣ ಟ್ರಸ್ಟ್ ಅಡಿಯಲ್ಲಿ ರೈತರಿಗೆ, ರೈತರ ಮಕ್ಕಳಿಗೆ ಹಾಗೂ ರಾಸುಗಳಿಗೂ ವಿವಿಧ ಸೌಲತ್ತುಗಳನ್ನು ನೀಡುತ್ತಿದೆ. ರೋಗ ಬಂದರೆ ರೈತರು ರಾಸುಗಳನ್ನು ಮಾರಿಕೊಳ್ಳುವುದು ಬೇಡ, ಒಕ್ಕೂಟ ನೀಡುವ ವಿಮೆ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಳುವಂತೆ ರೈತರಿಗೆ ಕರೆ ನೀಡಿದರು.
ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಎಂ.ಕೆ. ಧನಂಜಯ, ಸದಸ್ಯ ವಿಜಯಕುಮಾರ್, ತಾ.ಪಂ. ಸದಸ್ಯ ಹೆಬ್ಬಾಳಪಾಳ್ಯದ ನಾಗರಾಜು, ಲಕ್ಕೇನಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಎನ್.ಗಂಗರಾಜು, ವಿಸ್ತರಣಾಧಿಕಾರಿ ಬಿ.ಎನ್.ಚಂದ್ರಶೇಖರಯ್ಯ, ಹಕ್ಕಿನಾಳು ಚಂದ್ರಣ್ಣ, ಪ್ರೇಮಕುಮಾರ್, ಬಾಳೇಗೌಡ, ನಾರಾಯಣಪ್ಪ, ಭಂಟರಕುಪ್ಪೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ನರಸಿಂಹಮೂರ್ತಿ, ಉಪಾಧ್ಯಕ್ಷ ಬಿ.ಎಂ. ರಂಗಯ್ಯ, ಕಾರ್ಯದರ್ಶಿ ಲಕ್ಷ್ಮೀನಾರಾಯಣ, ಪರಿವೀಕ್ಷಕ ನಂಜುಂಡಯ್ಯ ಸೇರಿದಂತೆ ಸುತ್ತಮುತ್ತಲ ಗ್ರಾಮದ ರೈತರು ಭಾಗವಹಿಸಿದ್ದರು.