ಗೀತಂ ವಿವಿಯಲ್ಲಿ ಸ್ಥಳೀಯರಿಗೆ ಆದ್ಯತೆ
ದೊಡ್ಡಬಳ್ಳಾಪುರ: ಇಲ್ಲಿನ ನಾಗದೇನಹಳ್ಳಿ ಬಳಿ ಇರುವ ಗೀತಂ ವಿಶ್ವವಿದ್ಯಾಲಯದ ತಾಂತ್ರಿಕ ವಿಭಾಗದ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ಈ ಬಾರಿ ಶೇ.25ರಷ್ಟು ದಾಖಲಾತಿಗಳನ್ನು ಸ್ಥಳೀಯ ವಿದ್ಯಾರ್ಥಿಗಳಿಗೆ ಮೀಸಲಿಡಲಾಗಿದೆ ಎಂದು ವಿವಿ ರಿಜಿಸ್ಟ್ರಾರ್ ಪ್ರೊ.ಎಂ.ಪೋತರಾಜು ಹೇಳಿದರು. ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಇಲಾಖೆ ಎ ಕೆಟಗರಿ ವಿವಿಯಾಗಿ ಗುರುತಿಸಿಕೊಂಡಿರುವ ಗೀತಂ ವಿಶ್ವವಿದ್ಯಾಲಯ, ದೇಶದ ಡೀಮ್ಡ್ ವಿವಿಗಳ ಪಟ್ಟಿಯಲ್ಲಿ 4ನೇ ಸ್ಥಾನ ಪಡೆದಿದೆ. ವಿಶ್ವವಿದ್ಯಾಲಯದ ಬೆಂಗಳೂರು ಕ್ಯಾಂಪಸ್‌ನಲ್ಲಿ ಪ್ರವೇಶಾತಿ ಆರಂಭವಾಗಿದ್ದು, ಎಂಜಿನಿಯರಿಂಗ್ ವಿಭಾಗದಲ್ಲಿ ಇಸಿಇ, ಸಿವಿಲ್, ಮೆಕ್ಯಾನಿಕಲ್, ಸಿಎಸ್‌ಇ, ಐಟಿ ಮತ್ತು ಇಇಇ ವಿಭಾಗದಲ್ಲಿ ದಾಖಲಾತಿ ನಡೆಯುತ್ತಿದೆ. ರಾಜ್ಯ ಸರ್ಕಾರದ ಸೂಚನೆ ಮೇರೆಗೆ ಪ್ರವೇಶ ದಾಖಲಾತಿಯಲ್ಲಿ ಮೀಸಲು ನಿಗದಿ ಮಾಡಲಾಗಿದೆ ಎಂದ ಅವರು, ವಿವಿ ಮುಂದಿನ ದಿನಗಳಲ್ಲಿ ಕಾಮೆಡ್-ಕೆಯಲ್ಲಿ ಗುರುತಿಸಿಕೊಳ್ಳುವ ಕುರಿತು ಚಿಂತನೆ ನಡೆದಿದೆ. ಅಲ್ಲದೆ, ಸ್ಥಳೀಯ ನಿರುದ್ಯೋಗಿ ಯುವಕ-ಯುವತಿಯರಿಗೆ ನೆರವಾಗುವಂತೆ ವಿಶೇಷ ಕೈಗಾರಿಕಾ ತರಬೇತಿಗಳನ್ನು ಹಮ್ಮಿಕೊಳ್ಳುವ ಚಿಂತನೆ ನಡೆದಿದೆ.