ರಾಮನಗರದಿಂದ ನನ್ನನ್ನು ಹೊರಗಟ್ಟಲು ಯಾರಿಂದಲೂ ಸಾಧ್ಯವಿಲ್ಲ: ಎಚ್.ಡಿ. ಕುಮಾರಸ್ವಾಮಿ
ರಾಮನಗರ: ನನಗೆ ರಾಮನಗರವೇ ಕರ್ಮಭೂಮಿ. ಇಲ್ಲಿಂದ ನನ್ನನ್ನು ಯಾರಿಂದಲೂ ಹೊರಗಟ್ಟಲು ಸಾಧ್ಯವಿಲ್ಲ. ಅಂಥಹ ಭ್ರಮೆಯಲ್ಲಿದ್ದವರಿಗೆ ಮುಂದಿನ ದಿನಗಳಲ್ಲಿ ನಿರಾಸೆ ಕಾದಿದೆ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ನನ್ನ ಅಧಿಕಾರಾವಧಿಯಲ್ಲಿ ರಾಮನಗರದ ಜನತೆಗೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದೆ. ಅಧಿಕಾರಿಗಳನ್ನು ಹದ್ದುಬಸ್ತಿನಲ್ಲಿಟ್ಟಿದ್ದೆ. ಆದರೆ, ಈಗ ಪರಿಸ್ಥಿತಿ ಹೇಗಿದೆ ಎನ್ನುವುದು ಗೊತ್ತಿದೆ ಎಂದು ತಮ್ಮನ್ನು ಭೇಟಿಯಾದ ಸುದ್ದಿಗಾರರಿಗೆ ಅವರು ತಿಳಿಸಿದರು. ನಾನು ಅದೆಷ್ಟೇ ಸ್ಪಂದಿಸಿದ್ದರೂ ರಾಮನಗರದ ಜನತೆ ನನ್ನ ಕೈ ಹಿಡಿಯಲಿಲ್ಲ. ಈಗಿನ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಸದರು ರಾಮನಗರಕ್ಕೆ ಅದೇನು ಕೊಡುಗೆ ನೀಡುತ್ತಾರೆಂಬುದನ್ನು ನಾನೂ ನೋಡುತ್ತೇನೆ ಎಂದು ಅವರು ಹೇಳಿದರು.
ಮಾಧ್ಯಮದವರ ಸಾಥ್: ನನ್ನನ್ನು ರಾಮನಗರ ಕ್ಷೇತ್ರದಿಂದ ಬಿಟ್ಟೋಡಿಸಬೇಕು ಎನ್ನುವ ರಾಜಕಾರಣಿಗಳಿಗೆ ಕೆಲ ಮಾಧ್ಯಮದವರೂ ಸಾಥ್ ನೀಡಿದ್ದಾರೆ. ನಮ್ಮ ಕುಟುಂಬಕ್ಕೆ ಸೋಲು, ಗೆಲವು ಸರ್ವೇ ಸಾಮಾನ್ಯ. ಸೋತಾಗ ಅಧೀರರಾಗುವುದು, ಗೆದ್ದಾಗ ಬೀಗುವುದು ನಮ್ಮ ಜಾಯಮಾನವಲ್ಲ ಎಂದರು. ರಾಮನಗರವನ್ನು ಬಿಟ್ಟು ಹೋಗಲು ನಾನೆಂದೂ ಮನಸ್ಸು ಮಾಡಿಲ್ಲ. ಮುಂದೆಯೂ ಅಂತಹ ಮನಸ್ಸು ಮಾಡುವುದಿಲ್ಲ. ನಾನು ಅಧಿಕಾರ ದುರ್ಬಳಕೆ ಮಾಡಿಕೊಂಡು ನೈಸರ್ಗಿಕ ಸಂಪತ್ತು ಲೂಟಿ ಮಾಡಿಲ್ಲ ಎಂದು ಕುಮಾರಸ್ವಾಮಿ ತಿಳಿಸಿದರು. ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿರುವ ಸಮಸ್ಯೆಗಳ ಸಂಬಂಧ ಮುಂದಿನ ವಾರ ಅಧಿಕಾರಿಗಳ ಸಭೆ ನಡೆಸಲಾಗುವುದು. ಸಮರ್ಪಕವಾಗಿ ಕೆಲಸ ನಿರ್ವಹಿಸದಿದ್ದಲ್ಲಿ ತಕ್ಕ ಶಾಸ್ತಿಯಾಗಲಿದೆ ಎನ್ನುವ ಎಚ್ಚರಿಕೆ ಸಂದೇಶ ಅಧಿಕಾರಿಗಳಿಗೆ ರವಾನಿಸಿದರು.
ಪಟಾಕಿ ಸಿಡಿಸಿ ಸ್ವಾಗತ: ಜು.15ರಂದು ನಡೆಯುವ ನಗರ ದೇವತೆ ಶ್ರೀ ಚಾಮುಂಡೇಶ್ವರಿ ಕರಗ ಮಹೋತ್ಸವ ಆಚರಣೆ ಹಿನ್ನೆಲೆಯಲ್ಲಿ ಕರೆದಿದ್ದ ಸಭೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ ಕುಮಾರಸ್ವಾಮಿ ಅವರನ್ನು ಬೆಂಬಲಿಗರು ಮತ್ತು ಅಭಿಮಾನಿಗಳು ಪಟಾಕಿ ಸಿಡಿಸಿ, ಹಾರ ತುರಾಯಿ ಅರ್ಪಿಸಿ ಅದ್ಧೂರಿಯಾಗಿ ಸ್ವಾಗತಿಸಿದರು.