ತಂದೆಯಿಂದಲೇ ಹೆಣ್ಣು ಮಕ್ಕಳ ಕೊಲೆ
ಬೆಂಗಳೂರು: ವ್ಯಕ್ತಿಯೊಬ್ಬ ತನ್ನ ಮೂವರು ಹೆಣ್ಣು ಮಕ್ಕಳನ್ನು ಕೊಲೆ ಮಾಡಿ ತಾನೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ತಾವರೆಕೆರೆಯ ತುಂಗಾನಗರದಲ್ಲಿ ಸೋಮವಾರ ರಾತ್ರಿ ನಡೆದಿದೆ. ಘಟನೆಯಲ್ಲಿ ಇಬ್ಬರು ಮಕ್ಕಳು ಮೃತಪಟ್ಟಿದ್ದಾರೆ. ಮತ್ತೊಬ್ಬ ಬಾಲಕಿ ಜೀವನ್ಮರಣದ ನಡುವೆ ಹೋರಾಟ ಮಾಡುತ್ತಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ತಲೆಗೆ ಪೆಟ್ಟು ಮಾಡಿಕೊಂಡಿರುವ ಆರೋಪಿಗೂ ಚಿಕಿತ್ಸೆ ಕೊಡಿಸಲಾಗುತ್ತಿದೆ.
ರಮೇಶ್, ತನ್ನ ಮಕ್ಕಳ ಮೇಲೆ ಹಲ್ಲೆ ಮಾಡಿ, ತಾನೂ ಹಲ್ಲೆ ಮಾಡಿಕೊಂಡ ವ್ಯಕ್ತಿ. ಮೋನಿಷಾ(10), ಮೋನಿಕಾ(12) ಮೃತಪಟ್ಟಿದ್ದು, ಧರಣಿ(14) ಸ್ಥಿತಿ ಗಂಭೀರವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಾನಸಿಕ ಅಸ್ವಸ್ಥ: ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಹಿರಿಯ ಪೊಲೀಸ್ ಅಧಿಕಾರಿಗಳು, ರಮೇಶ್ ಪತ್ನಿ ಗೌರಮ್ಮ ಮನೆಕೆಲಸ ಮಾಡುತ್ತಿದ್ದು, ಕೆಲಸಕ್ಕೆ ಹೋಗಿದ್ದಳು. ಈ ವೇಳೆ ಮನೆಯಲ್ಲಿ ಮೂವರು ಮಕ್ಕಳು ಹಾಗೂ ರಮೇಶ್ ಇದ್ದರು. ಸಂಜೆ 7 ಗಂಟೆ ವೇಳೆಗೆ ರಮೇಶ್ ಮಕ್ಕಳ ಮೇಲೆ ಮಚ್ಚಿನಿಂದ ಹಲ್ಲೆ ಮಾಡುತ್ತಿದ್ದುದನ್ನು ಕಂಡ ಮನೆ ಮಾಲೀಕರು ಅಕ್ಕಪಕ್ಕದ ಮನೆಯವರು ಹಾಗೂ ಪೊಲೀಸರಿಗೆ ಮಾಹಿತಿ ನೀಡಿ, ಆತ ಪರಾರಿಯಾಗದಂತೆ ಎಚ್ಚರವಹಿಸಿದ್ದರು. ಆ ಸಂದರ್ಭದಲ್ಲಿ ರಮೇಶ್ ಕೂಡ ಮಚ್ಚಿನಿಂದ ತಲೆಗೆ ಹಲ್ಲೆ ಮಾಡಿಕೊಂಡಿದ್ದಾನೆ.