ದೊಡ್ಡಬಳ್ಳಾಪುರದಲ್ಲಿ ಶ್ರೀಕೃಷ್ಣ ಸಂಧಾನ
ದೊಡ್ಡಬಳ್ಳಾಪುರ: ಆಸರೆ ಶಿಕ್ಷಣ ಮತ್ತು ಗ್ರಾಮೀಣಾಭಿವೃದ್ಧಿ ಟ್ರಸ್ಟ್, ಶ್ರೀಮಾರುತಿ ಕನ್ನಡ ಕ್ರೀಡಾ ಮತ್ತು ಸಾಂಸ್ಕೃತಿಕ ಹವ್ಯಾಸಿ ರಂಗಭೂಮಿ ಕಲಾವಿದರ ಸಂಘ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನೇತೃತ್ವದಲ್ಲಿ ರಾಜಘಟ್ಟದ ಶ್ರೀ ಮಾರುತಿ ಕೃಪಾ ಪೋಷಿತ ನಾಟಕ ಮಂಡಲಿಯ ಶ್ರೀಕೃಷ್ಣ ಸಂಧಾನ ಪೌರಾಣಿಕ ನಾಟಕ ಪ್ರದರ್ಶನ ಡಾ.ರಾಜ್‌ಕುಮಾರ್ ಕಲಾಭವನ(ಪುರಭವನ)ದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾರುತಿ ಕನ್ನಡ ಕ್ರೀಡಾ ಮತ್ತು ಸಾಂಸ್ಕೃತಿಕ ಹವ್ಯಾಸಿ ರಂಗಭೂಮಿ ಕಲಾವಿದರ ಸಂಘದ ಅಧ್ಯಕ್ಷ ಕೋಡಿ ನರಸಿಂಹಮೂರ್ತಿ, ದೊಡ್ಡಬಳ್ಳಾಪುರ ಪರಂಪರಾಗತವಾಗಿ ಕಲಾವಿದರ ಮತ್ತು ಕಲೆಯ ತವರಾಗಿದೆ. ಆದರೆ ಇಂದಿನ ದಿನಗಳಲ್ಲಿ ರಂಗಭೂಮಿ ಸೊರಗುತ್ತಿದೆ. ಹವ್ಯಾಸಿ ನಾಟಕ ತಂಡಗಳು ಪ್ರೋತ್ಸಾಹಕರ ಕೊರತೆಯನ್ನು ಎದುರಿಸುತ್ತಿವೆ. ಒಂದು ಸುಸಜ್ಜಿತವಾದ ರಂಗಮಂದಿರ ಇಲ್ಲದೆ ಕಲಾವಿದರು ತಮ್ಮ ಕಲಾ ಪ್ರತಿಭೆಯನ್ನು ಪರಿಪೂರ್ಣವಾಗಿ ಪ್ರದರ್ಶಿಸಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಆಡಳಿತಶಾಹಿ ಗಂಭೀರ ಪ್ರಯತ್ನ ನಡೆಸಬೇಕು. ಅನೇಕ ಮಹತ್ವದ ರಂಗ ಕಲಾವಿದರ ತವರಾದ ದೊಡ್ಡಬಳ್ಳಾಪುರದಲ್ಲಿ ಕಲಾವಂತಿಕೆಯ ಪುನಶ್ಚೇತನಕ್ಕೆ ವೇದಿಕೆ ದೊರೆಯಬೇಕು. ಈ ಬಗ್ಗೆ ಶಾಸಕರು ಸೇರಿದಂತೆ ಜನಪ್ರತಿನಿಧಿಗಳು, ಅಧಿಕಾರಿಗಳು ಗಮನಹರಿಸಬೇಕು ಎಂದರು.
ಜಿಲ್ಲಾ ಕಲಾವಿದರ ಸಂಘದ ಅಧ್ಯಕ್ಷ ರಬ್ಬನಹಳ್ಳಿ ಕೆಂಪಣ್ಣ ಮಾತನಾಡಿ, ಸಾಮಾಜಿಕ ನಾಟಕಗಳು ಇಂದು ಅತಿಹೆಚ್ಚು ಆಕರ್ಷಣೆ ಪಡೆಯುತ್ತಿದ್ದು, ಪೌರಾಣಿಕ ನಾಟಕಗಳ ಬಗ್ಗೆ ಕೂಡ ಯುವ ಮನಸ್ಸುಗಳು ಆಸಕ್ತರಾಗುತ್ತಿರುವುದು ಗಣನೀಯ ಅಂಶ. ನಾಟಕಗಳು ಸಾಮಾಜಿಕ ಪರಿಣಾಮ ಬೀರುವ ಮೂಲಕ ಇಂದಿಗೂ ತಮ್ಮ ಗಟ್ಟಿತನವನ್ನು ಉಳಿಸಿಕೊಂಡಿವೆ. ಸಂಸ್ಕಾರಯುತ ಬದುಕನ್ನು ಕಟ್ಟಿಕೊಡುವಲ್ಲಿ ಕಲೆಯ ಪಾತ್ರ ಹಿರಿದು. ಇದಕ್ಕೆ ಉತ್ತೇಜನಕಾರಿಯಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಂತಹ ಇಲಾಖೆಗಳು, ಸಂಘಟನೆಗಳು ಕಲಾವಿದರನ್ನು ಪ್ರೋತ್ಸಾಹಿಸಬೇಕು ಎಂದರು.