ಮಕ್ಕಳ ಸಾಹಿತಿ ಕೋಸು ವಿಧಿವಶ
ದೊಡ್ಡಬಳ್ಳಾಪುರ: ಇಲ್ಲಿನ ಹಿರಿಯ ಸಾಹಿತಿ ಕೋಸು ಸಂಪುಟಾಣೆ (85) ಸೋಮವಾರ ನಿಧನರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಬ್ಬರು ಪುತ್ರರು, ಪುತ್ರಿ ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ. ತಾಲೂಕಿನ ಮಧುರೆ ಹೋಬಳಿಯ ಕನ್ನಮಂಗಲ ಬಳಿ ಪುಟಾಣೆ ಬಾಗ್ನಲ್ಲಿ ವಿಠೋಬ ಮಂದಿರವನ್ನು ಕಟ್ಟಿ ಸಮೀಪದಲ್ಲೇ ವಾಸವಿದ್ದ ಅವರು ಚಲನಚಿತ್ರಸಾಹಿತಿಯಾಗಿ, ಆಕಾಶವಾಣಿ ಕಲಾವಿದರಾಗಿ, ರಂಗಭೂಮಿ ಕಲಾವಿದರಾಗಿ ಮತ್ತು ಸಾಹಿತಿಯಾಗಿ ಗುರುತಿಸಿಕೊಂಡಿದ್ದರು. ವೃತ್ತಿಪರ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಆಗಿ ನಿವೃತ್ತರಾಗಿದ್ದರು.ಕೊಳಲು, ಕವನಕಿಡಿ, ಬಂಗಾರದ ಬಾಳು, ಗೊರವಯ್ಯ(ಮಕ್ಕಳ ಗೀತೆಗಳು), ಸಹಕಾರ ದೈವಕ್ಕೆ ಶರಣೆನ್ನಿರೋ, ದೇವರು ಕಣ್ಣು ಬಿಟ್ಟಾಗ (ಸಾಮಾಜಿಕ ನಾಟಕ), ಮಹಾಮಹಿಮ ಮರುಳ ಸಿದ್ಧ(ಪದ್ಯ ಮಾಲಿಕೆ), ಹೊಸಕಿರಣ, ಟ್ಯಾಕ್ಸಿಭೂತ (ರೇಡಿಯೋ ನಾಟಕ), ನಗಾರಿ ನರಿ (ಮಕ್ಕಳ ಸಾಹಿತ್ಯ), ಸಪ್ತವರ್ಣ, ಬುಡುಬುಡಿಕೆ ಸಂತಣ್ಣ(ಮಕ್ಕಳ ಸಾಹಿತ್ಯ), ಸಾರ್ವಭೌಮ ಶಿವಾಜಿ (ನಾಟಕ), ಸಂತನಕಂತೆ (ಆಧುನಿಕ ವಚನಗಳು), ಸಂಪುಟಾಣೆ ಭಕ್ತಿ ಸಂಪುಟ ಸೇರಿದಂತೆ ಅವರ ಹತ್ತಾರು ಪುಸ್ತಕಗಳು ಪ್ರಕಟಗೊಂಡಿದ್ದವು. ಕನ್ನಡ ಚಲನಚಿತ್ರ ಕ್ಷೇತ್ರದಲ್ಲಿ ಕೂಡ ಗುರುತಿಸಿಕೊಂಡಿದ್ದ ಅವರು, ಸಹಕಾರ ದರ್ಶನ ಸಾಕ್ಷ್ಯಚಿತ್ರಕ್ಕೆ ಗೀತರಚನೆ, ನಾಡಿನಭಾಗ್ಯ ಚಲನಚಿತ್ರಕ್ಕೆ ಸಂಭಾಷಣೆ ಮತ್ತು ಗೀತೆಗಳ ರಚನೆ, ಭಾವ ಬಂಧನ ಚಿತ್ರಕ್ಕೆ ಗೀತರಚನೆ ಟಿವಿ ಧಾರಾವಾಹಿ ಪುರಂದರದಾಸಗೆ ಸಹಲೇಖನ ಬರೆದಿದ್ದರು. ಅದೇ ರೀತಿ ಆಕಾಶವಾಣಿಯಲ್ಲಿ ಕೂಡ ಅನೇಕ ರೂಪಕಗಳು, ನಾಟಕಗಳನ್ನು ನಡೆಸಿಕೊಟ್ಟಿದ್ದಾರೆ. ಸಪ್ತವರ್ಣ ಮತ್ತು ಸಹಕಾರ ಸಂಗಮ ಧ್ವನಿಸುರುಳಿಗಳು ಪ್ರಸಾರವಾಗಿವೆ.ಸಮ್ಮೇಳನಾಧ್ಯಕ್ಷ: ಸಂಪುಟಾಣೆ ಅವರು ದೊಡ್ಡಬಳ್ಳಾಪುರ ತಾಲೂಕು 2ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ವಿಠಲ ವಿಹಾರ ಚಾರಿಟಬಲ್ ಟ್ರಸ್ಟ್ ಅನ್ನು ತಮ್ಮ ಪತ್ನಿ ಪ್ರಭಾ ಸಂಪುಟಾಣೆ ಅವರ ಹೆಸರಿನಲ್ಲಿ ಸ್ಥಾಪಿಸಿ ಅನೇಕ ಸಾಮಾಜಿಕ ಕೆಲಸಗಳನ್ನು ಮಾಡುತ್ತಾ ಬಂದಿದ್ದಾರೆ. ಕನ್ನಡ ಶಾಲೆ ಆರಂಭಿಸಿದ್ದರು. ಅಲ್ಲದೆ ಆಶಾಕಿರಣ ಎಂಬ ಅನಾಥಾಶ್ರಮ, ವೃದ್ಧಾಶ್ರಮಗಳನ್ನು ನಡೆಸುತ್ತಾ ಹಲವರಿಗೆ ದಾರಿದೀಪವಾಗಿದ್ದರು. ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸನ್ಮಾನಿತರೂ ಆಗಿದ್ದ ಇವರ ಸೇವೆಯನ್ನು ಗುರುತಿಸಿ ಅನೇಕ ಸಂಘಟನೆಗಳು ಪ್ರಶಸ್ತಿ-ಸನ್ಮಾನಗಳನ್ನು ಮಾಡಿವೆ. ತಮ್ಮದೇ ಆದ ಕೈಕೋ ಪ್ರಕಾಶನ ಸಂಸ್ಥೆ ಸ್ಥಾಪಿಸಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ದತ್ತಿನಿಧಿ ಸ್ಥಾಪಿಸಿದ್ದರು.ಸಂತಾಪ: ಸಂಪುಟಾಣೆ ಅವರ ನಿಧನಕ್ಕೆ ಇಲ್ಲಿನ ಹಲವು ಸಂಘಟನೆಗಳ ಸಂತಾಪ ಸೂಚಿಸಿವೆ. ಕಸಾಪ, ಕನ್ನಡ ಜಾಗೃತ ಪರಿಷತ್ತು ಸೇರಿದಂತೆ ಅನೇಕ ಸಂಘಟನೆಗಳು ಶ್ರದ್ಧಾಂಜಲಿ ಸಲ್ಲಿಸಿವೆ.