ವಿಲಾಸಿ ಜೀವನಕ್ಕೆ ಕಳವು, ಕದ್ದ ಬೈಕ್‌ನಲ್ಲೇ ಸಿಕ್ಕಿಬಿದ್ದ
ಬೆಂಗಳೂರು: ಐಷಾರಾಮಿ ಜೀವನ ನಡೆಸಲು 6 ತಿಂಗಳಲ್ಲಿ 32 ಬೈಕ್ ಕದ್ದ ಆರೋಪಿ ಈಗ ಪೊಲೀಸರ ಅತಿಥಿ.
ಮಾರತ್‌ಹಳ್ಳಿ ಸಮೀಪದ ಮುನ್ನೆಕೊಳಲು ನಿವಾಸಿ ಪವನ್‌ಕುಮಾರ್ (19) ಬಂಧಿತ. 7ನೇ ತರಗತಿ ಓದಿ ಶಾಲೆ ಬಿಟ್ಟ ಈತ ವಿಲಾಸಿ ಜೀವನಕ್ಕಾಗಿ ಬೈಕ್ ಕಳವು ಮಾಡಲು ಮುಂದಾದ. 220 ಸಿಸಿಯ ಕಪ್ಪು ಬಣ್ಣದ ಪಲ್ಸರ್ ಬೈಕ್‌ಗಳನ್ನೇ ಹೆಚ್ಚಾಗಿ ಕಳವು ಮಾಡುತ್ತಿದ್ದ. ಸದ್ಯ ಈತನಿಂದ ರು. 20 ಲಕ್ಷ ಮೌಲ್ಯದ 32 ಬೈಕ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಗ್ಯಾರೇಜ್‌ನಲ್ಲಿ ಕೆಲಸ: ಆರೋಪಿಯು ಶಾಲೆ ಬಿಟ್ಟ ನಂತರ ವಾಟರ್ ಟ್ಯಾಂಕ್‌ಗಳಲ್ಲಿ ನೀರು ತುಂಬುವುದು, ಗ್ಯಾರೇಜ್‌ಗಳಲ್ಲಿ ಕೆಲಸ ಮಾಡುತ್ತಿದ್ದ. ತಂದೆ ಎಳನೀರು ವ್ಯಾಪಾರಿಯಾಗಿದ್ದರು. ಸಂಪಾದನೆ ಹೆಚ್ಚಿಲ್ಲ ಎಂಬ ಕಾರಣಕ್ಕೆ ಬೈಕ್ ಕಳವು ಮಾಡಲು ನಿರ್ಧರಿಸಿದ. ರಾತ್ರಿ ವೇಳೆ ವಿವಿಧ ಬಡಾವಣೆಗಳಲ್ಲಿ ಸಂಚರಿಸುತ್ತಿದ್ದ ಈತ ಎಲ್ಲರೂ ಮಲಗಿದ ನಂತರ ವಾಹನ ಕಳವು ಮಾಡುತ್ತಿದ್ದ. ಗ್ಯಾರೇಜ್‌ನಲ್ಲಿ ಕೆಲಸ ಮಾಡಿದ್ದ ಕಾರಣ ಬೈಕ್ ಕಳವು ಈತನಿಗೆ ಸುಲಭವಾಗುತ್ತಿತ್ತು. ಹ್ಯಾಂಡಲ್‌ಲಾಕ್ ಮುರಿದು ನಂತರ, ಎಂಜಿನ್ ಹಾಗೂ ಬ್ಯಾಟರಿಗೆ ವೈರ್ ಸಂಪರ್ಕ ಕಲ್ಪಿಸಿ ವಾಹನ ತೆಗೆದುಕೊಂಡು ಪರಾರಿಯಾಗುತ್ತಿದ್ದ.
ಮಾರತ್‌ಹಳ್ಳಿ, ಮುನ್ನೆಕೊಳಲು, ಎಚ್‌ಎಎಲ್ ಸುತ್ತುಮುತ್ತಲ ಮನೆಗಳ ಮುಂದೆ ನಿಲ್ಲಿಸಿದ್ದ ಬೈಕ್‌ಗಳನ್ನು ಹೆಚ್ಚಾಗಿ ಕಳವು ಮಾಡಿದ್ದಾನೆ. ಕಳವು ಮಾಡಿದ ಲಕ್ಷಾಂತರ ರುಪಾಯಿ ವಾಹನಗಳನ್ನು ರು. 10 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ. ದಾಖಲಾತಿ ಮತ್ತೆ ಕೊಡುವುದಾಗಿ ಹಾಗೂ ತುರ್ತು ಕೆಲಸವಿದೆ ಎಂದು ಹೇಳಿ ಪರಾರಿಯಾಗುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕದ್ದ ಬೈಕ್‌ನಲ್ಲೇ ಬಲೆಗೆ: ಕಾಡುಗೋಡಿ ಪೊಲೀಸರು ಜೂ.25ರಂದು ಎಂವಿಜೆ ಕಾಲೇಜು ಬಳಿ ನಾಕಾಬಂದಿ ಹಾಕಿ ವಾಹನ ತಪಾಸಣೆ ಮಾಡುತ್ತಿದ್ದರು. ಈ ವೇಳೆ ಕದ್ದ ಬೈಕ್‌ನಲ್ಲಿ ಬಂದ ಆರೋಪಿ ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ್ದಾರೆ. ಅನುಮಾನ ಬಂದ ಪೊಲೀಸರು ತಪಾಸಣೆ ನಡೆಸಿದಾಗ ಕಳವು ಪ್ರಕರಣಗಳು ಬೆಳಕಿಗೆ ಬಂದಿವೆ.
ಎಚ್‌ಎಎಲ್ 17, ಕಾಡುಗೋಡಿ 1, ನೆಲಮಂಗಲ 1 ಸೇರಿ 19 ಬೈಕ್‌ಗಳ ಮಾಲೀಕರು ಪತ್ತೆಯಾಗಿದ್ದಾರೆ. ಉಳಿದ ಬೈಕ್‌ಗಳ ಮಾಲೀಕರ ಪತ್ತೆಕಾರ್ಯ ಮುಂದುವರೆದಿದೆ. ವಾರಸುದಾರರಿದ್ದಲ್ಲಿ ಕಾಡುಗೋಡಿ ಠಾಣೆ ಪೊಲೀಸರನ್ನು ಸಂಪರ್ಕಿಸಬಹುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.