ಅಭಿವೃದ್ಧಿ ಕ್ರಿಯಾಯೋಜನೆ ರೂಪಿಸಲು ಅನುಮೋದನೆ
ಕನಕಪುರ: ಕನಕಪುರ ತಾಪಂ ಮಾಸಿಕ ಸಭೆ ನೂತನ ಅಧ್ಯಕ್ಷೆ ಸಿದ್ಧಿಕಾ ಪರ್ವೀನ್ ನೇತೃತ್ವದಲ್ಲಿ ನಡೆಯಿತು. ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಜಿ.ಜೆ.ನಾಯಕ್ ಸಭೆಯ ಕಲಾಪಗಳನ್ನು ನಿರ್ವಹಿಸಿದರು. ಉಪಾಧ್ಯಕ್ಷ ಕೂತಗಳೆ ಲೋಕೇಶ್ ಪಾಲ್ಗೊಂಡಿದ್ದರು. ಸಭೆಯಲ್ಲಿ 13ನೇ ಹಣಕಾಸು ಯೋಜನೆಯಲ್ಲಿ ಬಿಡುಗಡೆಯಾಗಿರುವ ರು.33,80,630 ಹಾಗೂ 2012-13 ನೇ ಸಾಲಿನಲ್ಲಿ ಸಂಗ್ರಹಗೊಂಡ ಮುದ್ರಾಂಕ ಶುಲ್ಕ ರು.23,15,173 ಗಳಿಗೆ ಅಭಿವೃದ್ಧಿ ಕ್ರಿಯಾಯೋಜನೆ ರೂಪಿಸಲು ಅನುಮೋದನೆ ನೀಡಲಾಯಿತು. ತಾಪಂ ಮಾಜಿ ಅಧ್ಯಕ್ಷೆ ನಾಗರತ್ನ ಮಾತನಾಡಿ, ತಾಲೂಕಿನ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಜನರಿಗೆ ವೈದ್ಯರು ಕೈಗೇ ಸಿಗುತ್ತಿಲ್ಲ, ಚಿಕಿತ್ಸೆಗಾಗಿ ಅಲೆದಾಡಬೇಕಾದ ಪರಿಸ್ಥಿತಿ ಎದುರಾಗಿದ್ದು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಕನಕಪುರ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿಜಯದೇವ್
ಕನಕಪುರ: ಕನಕಪುರ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಮುಖಂಡ ಎಂ.ಡಿ. ವಿಜಯದೇವ್ ನೇಮಕ ಗೊಂಡಿದ್ದಾರೆ. ಅವರು ಇಲ್ಲಿನ ಕೋಟೆಯಲ್ಲಿನ ಪ್ರಾಧಿಕಾರದ ಕಚೇರಿಯಲ್ಲಿ ಅಧಿಕಾರ
ಸ್ವೀಕರಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರೂ ಆದ ವಿಜಯದೇವ್ ಮಾತನಾಡಿ ತಮ್ಮ ಮೇಲೆ ವಿಶ್ವಾಸವಿರಿಸಿ ಮಹತ್ತರ ಹೊಣೆಗಾರಿಕೆ ನೀಡಿದ ಇಂಧನ ಸಚಿವ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ಅವರಿಗೆ ಅಭಿನಂದನೆಗಳನ್ನು ಸಲ್ಲಿಸಿ, ಅವರ ಆಶಯಗಳ ಈಡೇರಿಕೆಗೆ ಶ್ರಮಿಸುವುದಾಗಿ ತಿಳಿಸಿದರು. ಪ್ರಾಧಿಕಾರವನ್ನು ಜನಪರವನ್ನಾಗಿಸಿ ಸ್ನೇಹಮಯಿ ವಾತಾವರಣ ನಿರ್ಮಿಸುವ ಮೂಲಕ ಉತ್ತಮ ಸೇವೆಯನ್ನು ಸಲ್ಲಿಸುವ ಅಭಿಲಾಷೆಯನ್ನು ವ್ಯಕ್ತಪಡಿಸಿದರು.