ಜಾನುವಾರುಗಳಿಗೆಕಡ್ಡಾಯ ಲಸಿಕೆ ಹಾಕಿಸಿ
ರಾಮನಗರ: ರೈತರು ತಮ್ಮ ಜಾನುವಾರುಗಳಿಗೆ ಮುಂಜಾಗ್ರತಾ ಲಸಿಕೆಗಳನ್ನು ಹಾಕಿಸಬೇಕು. ಜೀವ ವಿಮೆಯನ್ನು ಮಾಡಿಸಿದಲ್ಲಿ ಆಕಸ್ಮಿಕವಾಗಿ ಜಾನುವಾರುಗಳು ಮರಣ ಹೊಂದಿದಾಗ ಆಗುವ ನಷ್ಟದಿಂದ ಪಾರಾಗಬಹುದು ಎಂದು ವಿಭೂತಿಕೆರೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಶಿವಲಿಂಗಯ್ಯ ತಿಳಿಸಿದರು. ತಾಲೂಕಿನ ವಿಭೂತಿಕೆರೆ ಗ್ರಾಮದಲ್ಲಿ ಕರ್ನಾಟಕ ಹಾಲು ಮಹಾಮಂಡಳದಿಂದ ರಾಸುಗಳಿಗೆ ಜೀವವಿಮೆ ಮಾಡಿಸುವ ಮತ್ತು ತಪಾಸಣಾ ಶಿಬಿರಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೆಎಂಎಫ್ ಮತ್ತು ರಾಜ್ಯ ಸರ್ಕಾರವು ಹೈನುಗಾರಿಕೆ ಉತ್ತೇಜಿಸುವ ಸಲುವಾಗಿ ಹಲವಾರು ಯೋಜನೆಗಳನ್ನು ತಂದಿದೆ. ಅವುಗಳನ್ನು ಸದ್ಬಳಕೆ ಮಾಡಿಕೊಂಡು ರೈತರು ಆರ್ಥಿಕವಾಗಿ ಸದೃಢರಾಗಬೇಕು ಎಂದು ತಿಳಿಸಿದರು. ಕನಿಷ್ಠ ಹಣವನ್ನು ಕಟ್ಟುವುದರಿಂದ ರಾಸುಗಳು ಆಕಸ್ಮಿಕವಾಗಿ ಮೃತಪಟ್ಟರೆ ರೈತರಿಗೆ ಯಾವುದೇ ತೊಂದರೆಯಾಗುವುದಿಲ್ಲ. ರೈತರು ಇದನ್ನು ಅರ್ಥ ಮಾಡಿಕೊಂಡು ಜೀವವಿಮೆ ಮಾಡಿಸಬೇಕು ಎಂದು ಡಾ.ಶ್ವೇತಾ ತಿಳಿಸಿದರು.