ರಾಮನಗರ, ಚನ್ನಪಟ್ಟಣದಲ್ಲಿ ಮಂಗಳಾ ಎಕ್ಸ್‌ಪ್ರೆಸ್ ನಿಲುಗಡೆ
ರಾಮನಗರ: ಯಶವಂತಪುರ-ಕಣ್ಣೂರು ನಡುವೆ ಸಂಚರಿಸುವ ಮಂಗಳಾ ಎಕ್ಸ್‌ಪ್ರೆಸ್ ರೈಲು ಗಾಡಿಯು ಮಾ.7ರಿಂದ ರಾಮನಗರ ಮತ್ತು ಚನ್ನಪಟ್ಟಣದಲ್ಲಿ ನಿಲುಗಡೆ ನೀಡಲಿದೆ. ಇದರೊಂದಿಗೆ ಈ ಭಾಗದ ಜನರ ಬಹುದಿನಗಳ ಬೇಡಿಕೆ ಈಡೇರಿದಂತಾಗಿದೆ ಎಂದು ಕಾಂಗ್ರೆಸ್ ಮುಖಂಡ ರಘುನಂದನ್ ರಾಮಣ್ಣ ತಿಳಿಸಿದರು. ರಾಮನಗರ ಮತ್ತು ಚನ್ನಪಟ್ಟಣಗಳಲ್ಲಿ ಪ್ರಯಾಣಿಕರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಪ್ರಯಾಣಿಕರ ಒತ್ತಡವನ್ನು ತಗ್ಗಿಸಲು ಉಭಯ ನಿಲ್ದಾಣಗಳಲ್ಲಿ ಹೆಚ್ಚುವರಿ ರೈಲುಗಳ ನಿಲುಗಡೆ ಅಗತ್ಯ. ಹಲವು ಹೋರಾಟಗಳು ನಡೆದಿದ್ದವು. ಸಂಸದ ಡಿ.ಕೆ. ಸುರೇಶ್ ಪ್ರಯತ್ನದ ಫಲವಾಗಿ ಮಂಗಳಾ ಎಕ್ಸ್‌ಪ್ರೆಸ್ ನಿಲುಗಡೆ ಅವಕಾಶ ದೊರೆತಿದೆ ಎಂದು ಅವರು ತಿಳಿಸಿದರು. ಚನ್ನಪಟ್ಟಣ ಪಟ್ಟಣ ವ್ಯಾಪ್ತಿಯ ಎಲೆಕೇರಿ ಬಳಿ ಮೇಲ್ಸೇತುವೆ ನಿರ್ಮಾಣಕ್ಕೆ ಕೇಂದ್ರ ರೇಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ರು.15 ಕೋಟಿ ಬಿಡುಗಡೆ ಮಾಡಿದ್ದಾರೆ. ಟಿಪ್ಪುನಗರ ವ್ಯಾಪ್ತಿಯಲ್ಲಿ ರೈಲ್ವೆ ಹಳಿಯ ಸುಮಾರು 2 ಕಿ.ಮೀ. ಉದ್ದಕ್ಕೆ ತಡೆಗೋಡೆ ನಿರ್ಮಿಸಿದ್ದರಿಂದ ಓಡಾಟಕ್ಕೆ ತೀವ್ರ ತೊಂದರೆ ಆಗಿತ್ತು.