'ಅಹಿಂದ ಹೈಜಾಕ್ ಮಾಡಲು ಕೋಮುವಾದಿಗಳ ಹುನ್ನಾರ'
ದೊಡ್ಡಬಳ್ಳಾಪುರ: ಕೋಮುವಾದಿ ಶಕ್ತಿಗಳು ಈ ದೇಶದ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಜನರನ್ನು ಓಟ್ ಬ್ಯಾಂಕ್ ಆಗಿ ಸೃಷ್ಟಿಸಿಕೊಳ್ಳುವ ಹುನ್ನಾರ ಮಾಡುತ್ತಿವೆ. ಅಂತಹ ಶಕ್ತಿಗಳು ಬೆಳೆಯದಂತೆ ಚಿವುಟಿ ಹಾಕುವ ಕೆಲಸವನ್ನು ಅಗತ್ಯವಾಗಿ ಮಾಡಬೇಕಿದೆ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಎಂ. ವೀರಪ್ಪ ಮೊಯ್ಲಿ ಹೇಳಿದರು.
ಇಲ್ಲಿನ ನಗರಸಭೆ, ತಾಲೂಕು ಆಡಳಿತದ ನೇತೃತ್ವದಲ್ಲಿ ಭಾನುವಾರ ಸಂಜೆ ನಡೆದ ಡಾ.ಬಾಬು ಜಗಜೀವನರಾಂ ಪುತ್ಥಳಿ ಅನಾವರಣ ಮತ್ತು ಜಗಜೀವನರಾಂ ಭವನ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಇಂದು ಅಹಿಂದ ಶಕ್ತಿಯನ್ನು ಹೈಜಾಕ್ ಮಾಡಲು ಕೆಲವರು ಹವಣಿಸುತ್ತಿದ್ದಾರೆ ಎಂದು ಆರೋಪಿಸಿದ ಅವರು, ದೇಶದಲ್ಲಿ ಜನಸಂಖ್ಯೆಯ ಆಧಾರದಲ್ಲಿ ಪರಿಶಿಷ್ಟ ಜಾತಿಗೆ ಶೇ.15ರ ಬದಲಾಗಿ ಶೇ.18ರಷ್ಟು ಮೀಸಲಾತಿಯನ್ನು ಕಲ್ಪಿಸಬೇಕಿದೆ. ಜೊತೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಒಳಮೀಸಲಾತಿ ಕೂಡ ಅನಿವಾರ್ಯ. ಈ ಬಗ್ಗೆ ಹಲವು ವರ್ಷಗಳಿಂದಲೂ ಪ್ರಸ್ತಾಪವಾಗುತ್ತಲೇ ಇದೆ. ಆಂಧ್ರಪ್ರದೇಶದಲ್ಲಿ ಕೂಡ ಈ ಬಗ್ಗೆ ವಿಸ್ತೃತ ವರದಿ ಸರ್ಕಾರದ ಮುಂದಿದೆ. ಅದೇ ರೀತಿ ಕರ್ನಾಟಕದಲ್ಲಿ ಎ.ಜೆ.ಸದಾಶಿವ ಆಯೋಗದ ವರದಿ ಇದೆ. ಇದರನ್ವಯ ಸಂವಿಧಾನ ತಿದ್ದುಪಡಿಗೆ ಒತ್ತಾಯಿಸಿ ದಲಿತರಿಗೆ ನ್ಯಾಯಯುತ ಸ್ಥಾನಮಾನ ಕಲ್ಪಿಸಿಕೊಡಬೇಕಿದೆ ಎಂದರು. ಮುಖ್ಯಅತಿಥಿಯಾಗಿ ಭಾಗವಹಿಸಿದ್ದ ರಾಜ್ಯ ಸಮಾಜ ಕಲ್ಯಾಣ ಖಾತೆ ಸಚಿವ ಎಚ್.ಆಂಜನೇಯ ಮಾತನಾಡಿ, ರಾಜ್ಯ ಸರ್ಕಾರ ದಲಿತ ಮತ್ತು ಹಿಂದುಳಿದವರ ಪರ ಅನೇಕ ಯೋಜನೆಗಳನ್ನು ಜಾರಿಗೆ ತರುತ್ತಿದೆ. ಈಗಾಗಲೇ ತಾಲೂಕು ಕೇಂದ್ರಗಳಲ್ಲಿ ಅಂಬೇಡ್ಕರ್ ಭವನ ಮತ್ತು ಜಗಜೀವನರಾಂ ಭವನಗಳ ನಿರ್ಮಾಣಕ್ಕೆ ಅನುದಾನಗಳನ್ನು ಬಿಡುಗಡೆ ಮಾಡಲಾಗಿದೆ. ದೊಡ್ಡಬಳ್ಳಾಪುರದಲ್ಲಿ ಜಗಜೀವನರಾಂ ಭವನ ನಿರ್ಮಾಣಕ್ಕೆ 5 ಕೋಟಿ ಪ್ರಸ್ತಾವನೆ ಸಲ್ಲಿಕೆಯಾಗಿದ್ದು, ಈಗಾಗಲೇ 1 ಕೋಟಿ ಬಿಡುಗಡೆ ಮಾಡಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಧರ್ಮಸೇನ, ದೇವನಹಳ್ಳಿ ಶಾಸಕ ಪಿಳ್ಳಮುನಿಶಾಮಪ್ಪ, ಮಾಜಿ ಸದಸ್ಯ ಡಾ.ಎಲ್.ಹನುಮಂತಯ್ಯ, ಮಾಜಿ ಶಾಸಕ ಆರ್.ಜಿ.ವೆಂಕಟಾಚಲಯ್ಯ ಮಾತನಾಡಿದರು. ಡಾ.ಸಿದ್ಧರಾಜ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗದ ಸಂಚಾಲಕ ಪರಮೇಶ್, ತಾಲೂಕು ಪಂಚಾಯಿತಿ ಅಧ್ಯಕ್ಷೆ ನರಸಮ್ಮ, ಉಪಾಧ್ಯಕ್ಷ ಓಬದೇನಹಳ್ಳಿ ಮುನಿಯಪ್ಪ, ತಹಸೀಲ್ದಾರ್ ಕೆ.ಬಿ.ಸಿದ್ದಲಿಂಗಯ್ಯ, ಪೌರಾಯುಕ್ತ ಬಿಳಿಕೆಂಚಪ್ಪ ಸೇರಿದಂತೆ ನಗರಸಭಾ ಸದಸ್ಯರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರು, ಮಾದಾರ ಚನ್ನಯ್ಯ ಮಹಾಸಭಾ ಸೇರಿದಂತೆ ದಲಿತ ಸಂಘಟನೆಗಳ ಅನೇಕ ಮುಖಂಡರು, ಅಧಿಕಾರಿಗಳು ಪಾಲ್ಗೊಂಡಿದ್ದರು.