ಪಿಎಲ್ಡಿ ಬ್ಯಾಂಕ್ ನೂತನ ಅಧ್ಯಕ್ಷರಾಗಿ ಜಿ.ಕೆ. ಶಿವರಾಮಯ್ಯ ಅವಿರೋಧ ಆಯ್ಕೆ
ರಾಮನಗರ: ಇಲ್ಲಿನ ಪ್ರಾಥಮಿಕ ಕೃಷಿ ಸಹಕಾರ ಮತ್ತು ಗ್ರಾಮೀಣ (ಪಿಎಲ್ಡಿ) ಬ್ಯಾಂಕ್ನ ನೂತನ ಅಧ್ಯಕ್ಷರಾಗಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಾದ ಜಿ.ಕೆ.ಶಿವರಾಮಯ್ಯ ಹಾಗೂ ಉಪಾಧ್ಯಕ್ಷರಾಗಿ ಸತ್ಯಮ್ಮ ಅವರು ಅವಿರೋಧ ಆಯ್ಕೆಯಾಗಿದ್ದಾರೆ.
ನಗರದ ಪಿ.ಎಲ್.ಡಿ. ಬ್ಯಾಂಕ್ನ ಕಚೇರಿಯಲ್ಲಿ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳಾಗಿ ಜಿ.ಕೆ. ಶಿವರಾಮಯ್ಯ ಮತ್ತು ಸತ್ಯಮ್ಮ ಹೊರತುಪಡಿಸಿ ಯಾರೂ ಉಮೇದುವಾರಿಕೆ ಸಲ್ಲಿಸಿರಲಿಲ್ಲ. ಹೀಗಾಗಿ ಚುನಾವಣಾಧಿಕಾರಿ ತಹಸೀಲ್ದಾರ್ ಹನುಮಂತರಾಯಪ್ಪ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಆಯ್ಕೆಯನ್ನು ಅವಿರೋಧ ಎಂದು ಘೋಷಿಸಿದರು.
ಕಳೆದ ಫೆ.16ರಂದು ನಡೆದ ಚುನಾವಣೆಯಲ್ಲಿ ಎಲ್ಲಾ ಹನ್ನೊಂದು ಕ್ಷೇತ್ರದಲ್ಲಿ ಜೆಡಿಎಸ್ ಬೆಂಬಲಿತ ನಿರ್ದೇಶಕರು ಜಯಭೇರಿ ಬಾರಿಸಿದ್ದರು. ನೂತನ ನಿರ್ದೇಶಕರಾಗಿ ಆಯ್ಕೆಯಾಗಿರುವ ಎಂ.ಆರ್. ಶಿವಕುಮಾರಸ್ವಾಮಿ, ಮರಿಸ್ವಾಮಿ, ವಿ. ಶಿವಣ್ಣ, ಯು.ನರಸಿಂಹಯ್ಯ, ಹೊನ್ನಗಿರಿಗೌಡ, ನಿಂಗಯ್ಯ, ಲಕ್ಷ್ಮಿದೇವಮ್ಮ, ಪರಮೇಶ್ ಸೇರಿದಂತೆ ಎಲ್ಲಾ ಸದಸ್ಯರು ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಬೆಂಬಲ ಸೂಚಿಸಿದರು.
ಅವಿರೋಧವಾಗಿ ಆಯ್ಕೆಯಾದ ನೂತನ ಅಧ್ಯಕ್ಷ, ಉಪಾಧ್ಯಕ್ಷರನ್ನು ಮಾಜಿ ಶಾಸಕ ಕೆ.ರಾಜು, ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಬ್ಯಾಟಪ್ಪ, ಮುಖಂಡರಾದ ಪಿ.ರಾಮಯ್ಯ, ಬಿ.ಉಮೇಶ್, ರಾಜಶೇಖರ್, ದೊರೆಸ್ವಾಮಿ, ಭದ್ರಯ್ಯ, ಹನುಮಂತೇಗೌಡ, ಶಂಭುಗೌಡ, ಮಹದೇವಯ್ಯ ಮತ್ತಿತರರು ಅಭಿನಂದಿಸಿದರು. ಕಾರ್ಯಕರ್ತರು ಸಿಹಿ ಹಂಚಿ ಸಂಭ್ರಮಿಸಿದರು.
ಅವಿರೋಧ ಆಯ್ಕೆಗೆ ಸಹಕರಿಸಿದ ನಿರ್ದೇಶಕರು, ಪಕ್ಷದ ಮುಖಂಡರಿಗೆ ತಾವು ಕೃತಜ್ಞನಾಗಿರುವುದಾಗಿ ನೂತನ ಅಧ್ಯಕ್ಷ ಜಿ.ಕೆ.ಶಿವರಾಮಯ್ಯ ಪ್ರತಿಕ್ರಿಯಿಸಿದರು. ಬ್ಯಾಂಕಿನಲ್ಲಿ ದೊರೆಯುವ ಕೃಷಿ ಸಾಲ, ಕೃಷಿ ಸಲಕರಣೆಗಳು ಮತ್ತಿತರ ಸವಲತ್ತುಗಳನ್ನು ಸದಸ್ಯರು ಸದುಪಯೋಗಪಡಿಸಿಕೊಳ್ಳಬೇಕೆಂದು ಅವರು ತಿಳಿಸಿದರು.