ಸರ್ಕಾರಿ ಕಾರ್ಯಕ್ರಮವೋ... ಕಾಂಗ್ರೆಸ್ ಪ್ರಚಾರ ಸಭೆಯೋ...
ದೊಡ್ಡಬಳ್ಳಾಪುರ: ಅದು ವಸ್ತುಶಃ ಸರ್ಕಾರಿ ಕಾರ್ಯಕ್ರಮ. ದೊಡ್ಡಬಳ್ಳಾಪುರ ನಗರಸಭೆ ಮತ್ತು ತಾಲೂಕು ಆಡಳಿತದ ನೇತೃತ್ವದಲ್ಲಿ ದಲಿತ ಸಂಘಟನೆಗಳ ಸಹಯೋಗದಲ್ಲಿ ಆಯೋಜನೆಗೊಂಡಿದ್ದ ಅಪ್ಪಟ ಶಿಷ್ಟಾಚಾರದ ಕಾರ್ಯಕ್ರಮ. ಆದರೆ ಕಾರ್ಯಕ್ರಮದ ವೇದಿಕೆಯಲ್ಲಿ ಶಿಷ್ಟಾಚಾರ ಮಂಗಮಾಯವಾಗಿತ್ತು.
ಅದೊಂದು ಪಕ್ಷದ ಕಾರ್ಯಕ್ರಮ ಎಂಬಂತೆ ಬಿಂಬಿಸುವ ಅನೇಕ ಪ್ರಯತ್ನಗಳು ನಡೆದದ್ದು ಹಲವು ವರ್ಗಗಳಿಂದ ತೀವ್ರ ಟೀಕೆಗೂ ಗುರಿಯಾಯಿತು. ಆಹ್ವಾನ ಪತ್ರಿಕೆಯಲ್ಲಿ ಹೆಸರೇ ಇಲ್ಲದ ಗಣ್ಯರ ದೊಡ್ಡ ದಂಡೇ ವೇದಿಕೆಯಲ್ಲಿ ವಿರಾಜಮಾನವಾಗಿತ್ತು. ಕಾಂಗ್ರೆಸ್ ಪಕ್ಷದ ಹಲವು ಘಟಕಗಳ ಪದಾಧಿಕಾರಿಗಳೂ ವೇದಿಕೆಯಲ್ಲಿ ರಾರಾಜಿಸಿದರು. ವೇದಿಕೆಯ ತುಂಬಾ ಜನವೋ ಜನ. ವೇದಿಕೆ ಹತ್ತಲು ನಾ ಮುಂದು, ತಾ ಮುಂದು ಎಂಬಂತೆ ಮುಗಿಬಿದ್ದಿದ್ದ ಕೆಲ ಸಂಘಟನೆಗಳ ಮುಖಂಡರ ಸಾಹಸ ಹಲವರ ಕೆಂಗಣ್ಣಿಗೆ ಗುರಿಯಾಗಿತ್ತು.