ನಾಲ್ಕೈದು ದಿನದಲ್ಲಿ ಅಭ್ಯರ್ಥಿ ಪಟ್ಟಿ ಬಿಡುಗಡೆ: ಸಚಿವ ಡಿಕೆಶಿ
ಚನ್ನಪಟ್ಟಣ: ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಸಜ್ಜಾಗಿದ್ದು, ಇನ್ನು ನಾಲ್ಕೈದು ದಿನಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.
ಪಟ್ಟಣದ ಬೆಸ್ಕಾಂ ಕಚೇರಿ ಆವರಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಜನಪರ ಆಡಳಿತ ಮತ್ತು ಅಭಿವೃದ್ಧಿಪರ ಯೋಜನೆಗಳನ್ನು ಪರಿಗಣಿಸಿ ಜನತೆ ಮತ್ತೆ ನಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಒಂದೇ ಹಂತ ಸ್ವಾಗತಾರ್ಹ: ರಾಜ್ಯದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಸುತ್ತಿರುವುದು ಸ್ವಾಗತಾರ್ಹವಾಗಿದ್ದು, ಸಾಮೂಹಿಕ ನಾಯಕತ್ವದಡಿಯಲ್ಲಿ ಕಾಂಗ್ರೆಸ್ ಚುನಾವಣೆ ಎದುರಿಸುತ್ತಿರುವುದರಿಂದ ಹಾಗೂ ಏಕಕಾಲದಲ್ಲಿ ಚುನಾವಣೆ ನಡೆಯುವುದರಿಂದ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು.
ಘಟಾನುಘಟಿಗಳಿಗೆ ಭಯ: ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲಿದ್ದು, ಹಿಂದಿನ ಯಾವ ಸಂಸದರೂ ಮಾಡದ ಕೆಲವನ್ನು ಡಿ.ಕೆ.ಸುರೇಶ್ ಮಾಡಿದ್ದಾರೆ. ಎಂಪಿ ಎಲ್ಲಿ ಎಂದು ಹುಡುಕುತ್ತಿದ್ದ ಜನರಿಗೆ ಇಲ್ಲೇ ಇದ್ದೇನೆ ಎಂದು ತೋರಿಸಿದ್ದಾರೆ ಅವರ ಅಭಿವೃದ್ಧಿ ಕೆಲಸ ಅವರ ಗೆಲುವಿಗೆ ಶ್ರೀರಕ್ಷೆ ಎಂದರು.
ಕ್ಷೇತ್ರಕ್ಕೆ ಜೆಡಿಎಸ್ನಿಂದ ಘಟಾನುಘಟಿ ನಾಯಕರು ಕಣಕ್ಕಿಳಿಯುತ್ತಾರೆ ಎಂಬ ವದಂತಿ ಇತ್ತು. ಕೊನೆ ಕ್ಷಣದಲ್ಲಿ ಅವರಿಗೆ ಸೋಲಿನ ಭಯ ಕಾಡಿದ್ದು ನೆಪಮಾತ್ರಕ್ಕೆ ಅಭ್ಯರ್ಥಿ ಹಾಕುತ್ತಿದ್ದಾರೆ. ಜೆಡಿಎಸ್ ಅಭ್ಯರ್ಥಿ ನಾಮಕಾವಸ್ಥೆಗೆ ಮಾತ್ರ. ಬಿಜೆಪಿ ಕಳೆದ ಚುನಾವಣೆಯಲ್ಲಿ ಮಾಡಿ ಕೊಂಡಿರುವ ತಪ್ಪಿನಿಂದಾಗಿ ಕ್ಷೇತ್ರದಲ್ಲಿ ಜನತೆಯ ವಿಶ್ವಾಸ ಕಳೆದು ಕೊಂಡಿದೆ ಎಂದು ಲೇವಡಿಮಾಡಿದರು.
ಸಂಸದ ಡಿ.ಕೆ.ಸುರೇಶ್ ಮಾತನಾಡಿ ಇದುವರೆಗೆ ಈಕ್ಷೇತ್ರವನ್ನು ಪ್ರತಿನಿಧಿಸಿದ್ದವರು ಕೇವಲ ಭಾಷಣ ಮಾಡುತ್ತಾ ಬಂದಿದ್ದರು ಆದರೆ ನಾನು ಮಾತನಾಡಿಲ್ಲ ನೀವು ಹೇಳಿದ ಕೆಲಸವನ್ನು ಮಾಡಿ ತೋರಿಸಿದ್ದೇನೆ. ನನ್ನ ಕೆಲಸ ನೋಡಿ ಮುಂದಿನ ಚುನಾವಣೆಯಲ್ಲಿ ಬೆಂಬಲಿಸಿ ಎಂದರು.
ಕಾಂಗ್ರೆಸ್ ಮುಖಂಡ ರಘುನಂದನ್ ರಾಮಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಸಿ.ವೀರೇಗೌಡ, ಶಿವಮಾದು, ನಗರಸಭಾ ಸದಸ್ಯ ಮುದ್ದುಕೃಷ್ಣ, ಯುವ ಕಾಂಗ್ರೆಸ್ ಅಧ್ಯಕ್ಷ ಮಲ್ಲೇಶ್, ತಾಲೂಕು ಕಾಂಗ್ರೆಸ್ ಕಾರ್ಯದರ್ಶಿ ಪಿ.ಡಿ.ರಾಜು, ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಸಿದ್ದೇಗೌಡ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಡಿ.ಕೆ.ಕಾಂತರಾಜು, ಜಿಪಂ ಮಾಜಿ ಉಪಾಧ್ಯಕ್ಷೆ ಪದ್ಮಾಕೃಷ್ಣಯ್ಯ, ತಾಲೂಕು ಕಾಂಗ್ರೆಸ್ ಕಾರ್ಯದರ್ಶಿ ರಾಂಪುರ ಲೋಕೇಶ್ ಉಪಸ್ಥಿತರಿದ್ದರು.