ನೀತಿ ಸಂಹಿತೆ ಘೋಷಣೆ: ಕಾಂಗ್ರೆಸ್ ಪ್ರಚಾರ ಸಭೆಯಾಗಿ ಮಾರ್ಪಾಡು
ಚನ್ನಪಟ್ಟಣ: ಲೋಕಸಭಾ ಚುನಾವಣೆ ನೀತಿ ಸಂಹಿತೆ ಘೋಷಣೆಯಾಗುತ್ತಿದ್ದಂತೆ ಪಟ್ಟಣದ ಬೆಸ್ಕಾಂ ಕಚೇರಿ ಆವರಣದಲ್ಲಿ ಆಯೋಜಿಸಿದ್ದ ಸರ್ಕಾರಿ ಕಾರ್ಯಕ್ರಮ, ಕಾಂಗ್ರೆಸ್ ಪಕ್ಷದ ಪ್ರಚಾರದ ಸಭೆಯಾಗಿ ಮಾರ್ಪಟ್ಟಿತು.
ಬೆಸ್ಕಾಂ ಮತ್ತು ರೈಲ್ವೆ ಇಲಾಖೆ ಸಂಯುಕ್ತಾಶ್ರಯದಲ್ಲಿ ಇಲ್ಲಿನ ಬೆಸ್ಕಾಂ ಕಚೇರಿ ಅಂಗಳದಲ್ಲಿ, ಸಂಕಲಗೆರೆ ವಿದ್ಯುತ್ ಉಪ ಕೇಂದ್ರದ ಉದ್ಘಾಟನೆ ಮತ್ತು ಎಲೇಕೇರಿ ರೈಲ್ವೆ ಕೆಳ ಸೇತುವೆ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿತ್ತು.
ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಕಾರ್ಯಕ್ರಮ ನಡೆಸಲು ಅವಕಾಶ ವಿಲ್ಲವಾದರೂ ಅಧಿಕಾರಿಗಳ ಜಾಣ ಮೌನದಿಂದಾಗಿ ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಕಾರ್ಯಕ್ರಮವನ್ನು ಪಕ್ಷದ ಪ್ರಚಾರ ವೇದಿಕೆಯಾಗಿ ಬಳಸಿ ಕೊಂಡರು.
ನೀತಿಸಂಹಿತೆ ಜಾರಿಯಾದ ಬಳಿಕ ಮೊದಲ ನೀತಿಸಂಹಿತೆ ಉಲ್ಲಂಘನೆ ಪ್ರಕರಣ ತಹಸೀಲ್ದಾರ್ ಕಚೇರಿ ಕೂಗಳತೆ ದೂರದಲ್ಲಿ ನಡೆಯಿತಾದರೂ ತಾಲೂಕು, ಜಿಲ್ಲಾಡಳಿತವಾಗಲಿ ತುಟಿಪಿಟಕ್ ಎನ್ನದಿರುವುದು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿತು.
ರಾರಾಜಿಸಿದ ಬ್ಯಾನರ್: ಚುನಾವಣಾ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಪ್ರಚಾರ ಫಲಕಗಳನ್ನು ಹಾಕಬಾರದಾದರೂ ಬೆಳಿಗ್ಗೆ ಯಿಂದಲೇ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ, ಬೆಸ್ಕಾಂ ಕಚೇರಿ ಮುಂಭಾಗದಲ್ಲಿ ಬ್ಯಾನರ್ ಹಾಕಲಾಗಿತ್ತು. ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್, ಶಾಸಕ ಸಿ.ಪಿ.ಯೋಗೇಶ್ವರ್ ಭಾವಚಿತ್ರವಿರುವ ಬ್ಯಾನರ್ಗಳು ಕಾರ್ಯಕ್ರಮದ ಅಂಗಳದಲ್ಲಿ ರಾರಾಜಿಸುತ್ತಿದ್ದರು ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳಲಿಲ್ಲ.
ಆರಂಭದಲ್ಲಿ ಕಾರ್ಯಕ್ರಮ ರದ್ದಾಗಿದೆ ನಿಮಗೆ ಧನ್ಯವಾದ ತಿಳಿಸಲು ಮಾತ್ರ ನಾವು ಇಲ್ಲಿಗೆ ಬಂದಿದ್ದೇವೆ ಎಂದು ಮಾತು ಆರಂಭಿಸಿದ ಡಿ.ಕೆ.ಶಿವಕುಮಾರ್ ಸರ್ಕಾರದ ಸಾಧನೆ ಬಿಂಬಿಸಿ ಕೊಂಡು ಪಕ್ಷದ ಪರ ಮತಯಾಚನೆ ಮಾಡಿದರು. ನಂತರ ಮಾತನಾಡಲು ಆರಂಭಿಸಿದ ಸಂಸದ ಡಿ.ಕೆ.ಸುರೇಶ್ ನೇರವಾಗಿ ತಮ್ಮ ಸಾಧನೆ ಬಗ್ಗೆ ಬಿಂಬಿಸಿ ಕೊಂಡು ಮುಂದಿನ ಚುನಾವಣೆಗೆ ಮತಯಾಚನೆ ಮಾಡಿದರು.
ತಹಸೀಲ್ದಾರ್ ಕಚೇರಿ ಸನಿಹದಲ್ಲೆ ಮಾದರಿ ನೀತಿ ಸಂಹಿತೆ ಉಲ್ಲಂಘನೆಯಾಗುತ್ತಿದ್ದರೂ ತಹಸೀಲ್ದಾರ್ ಇತ್ತ ಸುಳಿಯಲೇ ಇಲ್ಲ. ಜೆಡಿಎಸ್ ಮುಖಂಡರು ಈ ಬಗ್ಗೆ ತಹಸೀಲ್ದಾರರಿಗೆ ದೂರವಾಣಿ ಮೂಲಕ ಸುದ್ದಿ ಮುಟ್ಟಿಸಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ.
ಜೆಡಿಎಸ್ ಆಕ್ರೋಶ: ತಾಲೂಕು ಆಡಳಿತ ಕಾಂಗ್ರೆಸ್ ಪಕ್ಷದ ಏಜೆಂಟ್ ಆಗಿದ್ದು ನೀತಿ ಸಂಹಿತೆಯನ್ನು ಉಲ್ಲಂಘನೆ ಮಾಡಿದರೂ ಕ್ರಮ ಕೈಗೊಂಡಿಲ್ಲ ಎಂದು ತಾಲೂಕು ಜೆಡಿಎಸ್ ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ ಆರೋಪಿಸಿದ್ದಾರೆ. ಈ ಬಗ್ಗೆ ತಹಸೀಲ್ದಾರರಿಗೆ ದೂರು ನೀಡಿದರೆ ತಹಸೀಲ್ದಾರ್ ಡಿ.ಕೆ.ಶಿವಕುಮಾರ್ಗೆ ದೂರವಾಣಿ ಕರೆ ಮಾಡಿ ಕೊಡುವ ಮೂಲಕ ಧಮಕಿ ಹಾಕಿಸಿದ್ದಾರೆ ಎಂದು ಜೆಡಿಎಸ್ ಮುಖಂಡ ಕೂರಣಗೆರೆ ರವಿ ಆರೋಪಿಸಿದ್ದಾರೆ.