ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಮಹಿಳೆ ಕುರಿತು ದಂತಗೋಪುರದ ಬಣ್ಣನೆ ಬೇಕಿಲ್ಲ: ಡಾ.ಬಿ.ಟಿ.ಲಲಿತಾನಾಯಕ್

Vishwanath S
Updated On : 6 Mar 2014, 1:03 am

ದೊಡ್ಡಬಳ್ಳಾಪುರ: ದಂತಗೋಪುರದ ಕವಿಗಳು ಬಣ್ಣಿಸಿದ ಹಾಗೆ ಮಹಿಳೆಯೊಬ್ಬಳೇ ಸಂಪ್ರದಾಯದ ವಾರಸುದಾರಿಕೆ ಹೊಂದುವುದಾದರೆ ಪುರುಷ ಸಮಾಜದ ಸಾಂಪ್ರದಾಯಿಕ ನೆಲೆಗಟ್ಟು ಸಡಿಲವೇ ಎಂಬ ತಾರ್ಕಿಕ ಪ್ರಶ್ನೆ ಉದ್ಭವಿಸುತ್ತದೆ ಎಂದು ಮಾಜಿ ಸಚಿವೆ, ಹಿರಿಯ ಸಾಹಿತಿ ಡಾ.ಬಿ.ಟಿ.ಲಲಿತಾನಾಯಕ್ ಅಭಿಪ್ರಾಯಪಟ್ಟರು.
ಇಲ್ಲಿನ ದತ್ತಾತ್ರೇಯ ಕಲ್ಯಾಣ ಮಂದಿರದಲ್ಲಿ ನಡೆದ ಬೆಂ.ಗ್ರಾ.ಜಿಲ್ಲಾ 16ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅವರು ಮಹಿಳೆ ಮತ್ತು ಸಾಹಿತ್ಯ ಕುರಿತ ವಿಚಾರ ಗೋಷ್ಠಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಹಿಳೆಗೆ ಮಾತ್ರ ಶೀಲ ಜೋಪಾನ ಮಾಡಿಕೊಳ್ಳುವ ಹೊಣೆಗಾರಿಕೆ ಇದೆಯೆಂದಾದರೆ ಪುರುಷರ ಶೀಲವಂತಿಕೆಯ ಪ್ರಶ್ನೆಯೂ ಮುಖ್ಯವಾದ ವಿಚಾರವೇ ಆಗಬೇಕು. ಶತಮಾನಗಳಿಂದಲೂ ಮಹಿಳೆಯ ಕುರಿತಾದ ಮನೋಭಾವಗಳು ಬದಲಾಗಿಲ್ಲ. ಪ್ರತಿಯೊಬ್ಬರ ಮನಸ್ಸಿನಲ್ಲೇ ಸಿದ್ಧವಾಗಿರುವ ಪಟ್ಟಭದ್ರ ಸಂವಿಧಾನದ ಪೊರೆ ಕಳಚಬೇಕಾದರೆ ದೊಡ್‌ಡ ಕ್ರಾಂತಿಯೇ ಆಗಬೇಕು. ಮಹಿಳೆ ಇಂದು ಸುಶಿಕ್ಷಿತಳಾಗಿದ್ದಾಳೆ. ಬಿಳಿ ಹಾಳೆಯ ಮೇಲೆ ಕರಿಯ ಅಕ್ಷರ ಬರೆದ ಮಾತ್ರಕ್ಕೇ ನಾವು ವಿದ್ಯಾವಂತರಲ್ಲ ಎಂಬುದನ್ನು ಮರೆಯಬಾರದು. ಇದು ಮನಸ್ಸುಗಳ, ಭಾಷಣ, ಭಾವನೆಗಳು ಒತ್ತುವರಿಯಾಗುವ ಕಾಲ. ಹೀಗಿರುವಾದ ಸ್ವಯಂ ರಕ್ಷಣೆ, ಸ್ವಯಂ ಅಸ್ತಿತ್ವ ಪ್ರತಿಪಾದನೆ ಬಹುಮುಖ್ಯ ಎಂದರು.
ಕನ್ನಡದಲ್ಲಿ ಮಹಿಳಾ ಸಾಹಿತ್ಯ ವಿಚಾರದ ಕುರಿತು ಮಾತನಾಡಿದ ಜಿಲ್ಲಾ ಕಸಾಪ ಉಪಾಧ್ಯಕ್ಷೆ ಎಲ್.ಎನ್.ವಸುಂಧರಾದೇವಿ, ಕನ್ನಡದ ಸಾಹಿತ್ಯವನ್ನು ಅನನ್ಯಗೊಳಿಸುವಲ್ಲಿ ಮಹಿಳೆಯರ ಪಾತ್ರ ಹಿರಿದು. ಪುರಾಣಕಾಲದಿಂದ ಆಧುನಿಕ ಕಾಲಘಟ್ಟದವರೆಗೆ ಬರುವ ಅನೇಕ ಮಹಿಳೆಯರು ಸಾಹಿತ್ಯ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ಪ್ರತಿಪಾದಿಸಿದ್ದಾರೆ. ಕನ್ನಡದ ಸಂದರ್ಭಕ್ಕೆ ಅಕ್ಕಮಹಾದೇವಿಯ ವೈಚಾರಿಕತೆ, ಮುಕ್ತಾಯಕ್ಕ, ಸಂಚಿಹೊನ್ನಮ್ಮ ಮುಂತಾದವರ ತರ್ಕ, ಇತ್ತೀಚಿನ ಬರೆಹಗಾರ್ತಿಯರ ಸ್ವೀವಾದಿ ಆಲೋಚನೆಗಳು ಸ್ತುತ್ಯಾರ್ಹ. ವಾಸ್ತವವಾಗಿ ಮಹಿಳಾ ಸಾಹಿತ್ಯ ಎಂದು ಪ್ರತ್ಯೇಕಿಸಿ ನೋಡುವ ಅವಶ್ಯಕತೆ ಇಲ್ಲ. ಆದರೆ ಮಹಿಳೆಯರನ್ನು ಇನ್ನೂ ಮುಖ್ಯವಾಹಿನಿಯಿಂದ ಹೊರಗಿಟ್ಟಿದ್ದಾರೆ ಎಂಬುದನ್ನು ಈ ವರ್ಗೀಕರಣ ಪ್ರತಿಪಾದಿಸುತ್ತದೆ ಎಂದರು.
ಮಹಿಳೆ ಮತ್ತು ಸಾಮಾಜಿಕ ನ್ಯಾಯ ಕುರಿತು ಮಾತನಾಡಿದ ನಗರಸಭೆ ಮಾಜಿ ಸದಸ್ಯೆ ಪ್ರಮೀಳಾ ಮಹದೇವ್, ನೆಪಮಾತ್ರಕ್ಕೆ ಮಾತ್ರ ವೇದಿಕೆಗಳಲ್ಲಿ ಪ್ರತಿಪಾದಿತವಾಗುವ ಸಾಮಾಜಿಕ ನ್ಯಾಯ ಮಹಿಳೆಯರ ಪಾಲಿಗೆ ವಸ್ತುನಿಷ್‌ಠವಾಗಿ ಸಿಕ್ಕಿಲ್ಲ. ಅದು ಮೂಲಭೂತ ಹಂತದಿಂದ ಹಿಡಿದು ಉನ್ನತ ಹಂತದವರೆಗೆ ಎಲ್ಲ ಕಡೆ ನ್ಯಾಯದ ವಂಚನೆ ನಡೆಯುತ್ತಿದೆ. ರಾಜಕಾರಣ, ಕೌಟುಂಬಿಕ ವಾತಾವರಣ, ಸಾಮಾಜಿಕ ವಲಯ, ಸಾಂಸ್ಕೃತಿಕ ಮತ್ತು ಸಾಹಿತ್ಯ ಕ್ಷೇತ್ರ, ಮಾಧ್ಯಮ, ಸಿನಿಮಾ ರಂಗಗಳಲ್ಲೂ ಮಹಿಳೆಗೆ ಸಲ್ಲಬೇಕಾದ ಗೌರವ ಸಲ್ಲುತ್ತಿಲ್ಲ. ಪ್ರಚಾರದ ಸರಕಾಗಿ ಮಹಿಳೆಯನ್ನು ಬಳಕೆ ಮಾಡಿಕೊಳ್ಳುವ ಹುನ್ನಾರಗಳು ಲಾಭದಾಯಕವಾಗಿ ನಡೆಯುತ್ತಿರುವುದು ನಾಚಿಕೆಗೇಡು. ಮಾತಿನಲ್ಲಿ ಉಳಿದಿರುವ ಸಾಮಾಜಿಕ ನ್ಯಾಯ ವಾಸ್ತವದಲ್ಲೂ ಜಾರಿಗೆ ಬರಬೇಕು ಎಂದರು.
ಗ್ರಾಮೀಣ ಮಹಿಳೆಯರ ಸಬಲೀಕರಣದಲ್ಲಿ ಶಿಕ್ಷಣದ ಪಾತ್ರ ವಿಷಯದ ಬಗ್ಗೆ ಪ್ರೊ.ಕೃಷ್ಣೋಜಿರಾವ್ ಮಾತನಾಡಿದರು. ಸಮ್ಮೇಳನಾಧ್ಯಕ್ಷ ಡಾ.ಎ.ಓ.ಆವಲಮೂರ್ತಿ, ಜಿಲ್ಲಾ ಕಸಾಪ ಮಹಿಳಾ ಘಟಕದ ರಾಜಲಕ್ಷ್ಮಿ, ವತ್ಸಲಾ, ಸಂಸ್ಕೃತಿ ಟ್ರಸ್ಟ್ ಅಧ್ಯಕ್ಷ ಎಚ್.ಎಸ್.ನಾಗೇಶ್, ಪ್ರಬಂಜನ ಎಜುಕೇಶನ್ ಸಂಸ್ಥಾಪಕ ಕಾರ್ಯದರ್ಶಿ ವಿ.ಎನ್.ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement