'ಶ್ರೇಷ್ಠ ಕೃತಿಗಳ ವಾಚನ, ವ್ಯಾಖ್ಯಾನ ಆಲಿಸುವ ಹವ್ಯಾಸ ಕುಂಠಿತ'
ರಾಮನಗರ: ಯುವಜನರು ಅಂತರ್ಜಾಲ, ಸಿನಿಮಾ, ಮೊಬೈಲ್ಗಳ ಕಡೆಗೆ ಆಕರ್ಷಿತರಾಗಿದ್ದಾರೆ. ಇದರಿಂದಾಗಿ ಕನ್ನಡದ ಶ್ರೇಷ್ಠ ಕೃತಿಗಳ ವಾಚನ, ವ್ಯಾಖ್ಯಾನವನ್ನು ಆಲಿಸುವಂತಹ ಸದಭಿರುಚಿಯ ಹವ್ಯಾಸಗಳು ಸೊರಗುತ್ತಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಪ್ರಹ್ಲಾದಗೌಡ ವಿಷಾದ ವ್ಯಕ್ತಪಡಿಸಿದರು.
ತಾಲೂಕಿನ ಅವ್ವೇರಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ತಾಲೂಕು ಗಮಕ ಕಲಾ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಶಿಕ್ಷಕರು ಪಠ್ಯಕ್ರಮದಲ್ಲಿರುವ ಹಳಗನ್ನಡದ ಷಟ್ಪದಿಗಳನ್ನು ಅರ್ಥವಾಗುವ ರೀತಿಯಲ್ಲಿ ಬೋಧಿಸುವ ಮೂಲಕ ವಿದ್ಯಾರ್ಥಿಗಳನ್ನು ದುಶ್ಚಟಗಳಿಂದ ದೂರವಾಗಿಸಬೇಕು ಎಂದು ಕರೆ ನೀಡಿದರು.
ಸಾಹಿತ್ಯ ಪ್ರಕಾರಗಳಲ್ಲಿ ಗಮಕ ಸಾಹಿತ್ಯ ಪುರಾತನ ಹಾಗೂ ವೈಶಿಷ್ಟ್ಯಪೂರ್ಣವಾದುದಾಗಿದೆ. ಇಂತಹ ಕಲೆಯ ಕಡೆಗೆ ಯುವಜನರನ್ನು ಆಕರ್ಷಿಸಬೇಕು. ಗಮಕ ಸಂಸ್ಕೃತಿಯನ್ನು ಉಳಿಸಿ, ಬೆಳೆಸಲು ಗಮಕಿಗಳು ನಿಸ್ವಾರ್ಥತೆಯಿಂದ ಕೆಲಸ ಮಾಡುತ್ತಿರುವುದು ಶ್ಲಾಘನೀಯವಾದುದಾಗಿದೆ ಎಂದು ಪ್ರಹ್ಲಾದಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.
ಸೂಕ್ತ ಪ್ರೋತ್ಸಾಹವಿಲ್ಲದೆ ಅಳಿವಿನಂಚಿಗೆ ತಲುಪಿರುವ ಕಲೆಗಳಲ್ಲಿ ಗಮಕ ಕಲೆಯೂ ಒಂದಾಗಿದೆ. ಭವಿಷ್ಯದ ಪ್ರಜೆಗಳಾದ ವಿದ್ಯಾರ್ಥಿಗಳು ಕೇವಲ ಮನರಂಜನೆಗೆ ಮಾತ್ರ ಸೀಮಿತವಾಗದೆ ಜ್ಞಾನಾಭಿವೃದ್ಧಿಯ ಕಡೆಗೂ ಗಮನ ನೀಡಬೇಕು ಎಂದು ಸಮ್ಮೇಳನದ ಅಧ್ಯಕ್ಷತೆಯನ್ನು ವಹಿಸಿದ್ದ ವಿ.ಎಸ್.ನಾರಾಯಣ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಪಂಪ, ರನ್ನ, ಷಡಕ್ಷರದೇವ, ಕುಮಾರವ್ಯಾಸ, ರಾಘವಾಂಕ, ರತ್ನಾಕರವರ್ಣಿ, ಕುಮಾರ ವಾಲ್ಮೀಕಿ ಅವರುಗಳು ರಚಿಸಿರುವ ಕಾವ್ಯ ಭಾಗಗಳನ್ನು ತೆಕ್ಕೆರೆ ಸುಬ್ರಹ್ಮಣ್ಯಭಟ್ಟ, ಜಿ.ಎಸ್.ನಾರಾಯಣ, ರೇಣುಕಾ ರಾಮರಾವ್, ರತ್ನಮೂರ್ತಿ ವ್ಯಾಖ್ಯಾಸಿದರು.
ಹುಲಿಗೆರೆ ಸೋಮನಾಥ ಕವಿಯ ಸೋಮೇಶ್ವರ ಶತಕ, ಡಿ.ವಿ.ಜಿ ಅವರ ಮಂಕುತಿಮ್ಮನ ಕಗ್ಗದ ಭಾಗಗಳನ್ನು ಗಮಕ ಕಲಾ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ ವ್ಯಾಖ್ಯಾನಿಸಿದರು.
ತಾಪಂ ಮಾಜಿ ಅಧ್ಯಕ್ಷೆ ಸುಜಾತ ಶಿವಲಿಂಗಪ್ಪ, ಸಾಹಿತಿ ಇಂದಿರಾ ಶರಣ್, ಮುಖ್ಯ ಶಿಕ್ಷಕಿ ಜಿ.ಎಸ್.ಸವಿತಾಕುಮಾರಿ, ಪ್ರೌಢಶಾಲಾ ಸಹಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಪಿ.ಮಹಾಲಿಂಗಯ್ಯ, ಉರ್ದು ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸಿದ್ದರಾಜು, ಗುತ್ತಿಗೆದಾರರಾದ ಕೆ.ತಮ್ಮಣ್ಣ, ವೇಣುಗೋಪಾಲ್, ಎಸ್ಡಿಎಂಸಿ ಅಧ್ಯಕ್ಷ ರೇಣುಕಪ್ಪ, ಗಮಕ ಕಲಾ ಪರಿಷತ್ತಿನ ಪದಾಧಿಕಾರಿಗಳಾದ ನಾಗಮಣಿ, ಕೆ.ಶಿವಹೊಂಬಯ್ಯ, ಎಚ್.ಕೆ.ಶೈಲಾ, ಮಂಜುಳಾ ಪ್ರಕಾಶ್, ಶಶಿಕುಮಾರ್ ಇತರರು ಭಾಗವಹಿಸಿದ್ದರು.