ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ಜಿಲ್ಲಾ ಕೇಂದ್ರ ಹೋರಾಟಕ್ಕೆ ತಾತ್ಕಾಲಿಕ ಬ್ರೇಕ್

Vishwanath S
Updated On : 7 Mar 2014, 12:56 pm

ದೊಡ್ಡಬಳ್ಳಾಪುರ: ಪಟ್ಟಣವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಕೇಂದ್ರವಾಗಿ ಘೋಷಿಸಬೇಕು ಎಂದು ಆಗ್ರಹಿಸಿ ನಿರಂತರವಾಗಿ ಕಳೆದ 24 ದಿನಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ಗುರುವಾರ ತಾತ್ಕಾಲಿಕ ತಡೆ ನೀಡಲಾಗಿದೆ.  ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿರುವ ಹಿನ್ನಲೆಯಲ್ಲಿ ಹೋರಾಟದ ಒಂದು ಹಂತವನ್ನು ಕೊನೆಗೊಳಿಸಲಾಗಿದ್ದು, ಚುನಾವಣೆಯ ನಂತರ ಮತ್ತೊಂದು ಹಂತದ ಹೋರಾಟ ಮುಂದುವರೆಯಲಿದೆ ಎಂದು ಜಿಲ್ಲಾ ಕೇಂದ್ರ ಹೋರಾಟ ಸಮಿತಿ ಪ್ರಕಟಿಸಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಮಿತಿಯ ಪ್ರಧಾನ ಕಾರ್ಯದರ್ಶಿ ಎಂ.ಕೃಷ್ಣಮೂರ್ತಿ ಮತ್ತು ಕೆ.ಎಂ.ಹನುಮಂತರಾಯಪ್ಪ, ನೀತಿ ಸಂಹಿತೆ ಜಾರಿಯಲ್ಲಿರುವ ಸಂದರ್ಭದಲ್ಲಿ ಯಾವುದೇ ಹೊಸ ಯೋಜನೆಗಳನ್ನು ಸರ್ಕಾರ ಜಾರಿಗೆ ತರಲು ಅಥವಾ ಯಾವುದೇ ಹೊಸ ಘೋಷಣೆಗಳನ್ನು ಮಾಡಲು ಸಾಧ್ಯವಿಲ್ಲದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ.  ಆದರೆ ಮತ್ತೊಂದು ಸ್ವರೂಪದ ಹೋರಾಟ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಹೋರಾಟ ನಿರಂತರ. ಇದರಲ್ಲಿ ಯಾವುದೇ ರಾಜಿ ಇಲ್ಲ. ಬಹಿರಂಗ ಮತ್ತು ಸಾರ್ವಜನಿಕ ಹೋರಾಟಗಳು ಚುನಾವಣೆ ನಂತರ ಮುಂದುವರೆಯಲಿದೆ. ಕಳೆದ 24 ದಿನಗಳ ಹೋರಾಟಕ್ಕೆ ಅಭೂತಪೂರ್ವ ಬೆಂಬಲವನ್ನು ತಾಲೂಕಿನ ಹಲವು ಸಂಘಟನೆಗಳು ನೀಡಿವೆ. ಎಲ್ಲ ವರ್ಗಗಳ ಜನ ಭಾಗವಹಿಸಿ ಹೋರಾಟಕ್ಕೆ ಸಂಚಲನೆ ತಂದಿತ್ತಿದ್ದಾರೆ. ಈ ಎಲ್ಲರಿಗೂ ಸಮಿತಿ ಕೃತಜ್ಞತೆ ಸಲ್ಲಿಸುತ್ತದೆ. ಮುಂದಿನ ಹೋರಾಟಗಳಿಗೆ ಕೂಡ ಇದೇ ಬಗೆಯ ಬೆಂಬಲ ನಿರೀಕ್ಷಿಸುತ್ತೇವೆ ಎಂದು ಅವರು ತಿಳಿಸಿದ್ದಾರೆ.
ನೀತಿ ಸಂಹಿತೆ ಉಲ್ಲಂಘನೆ: ದೂರು
ಹೊಸಕೋಟೆ: ತಾಲೂಕಿನಲ್ಲಿ ಲೋಕಸಭಾ ಚುನಾವಣೆ ಘೋಷಣೆಗೊಂಡ ನಂತರ ಕೇಂದ್ರ ಸಚಿವ ಎಂ.ವೀರಪ್ಪ ಮೊಯ್ಲಿ ಕಂಬಳೀಪುರದಲ್ಲಿ ಪೆಟ್ರೋಲಿಯಂ ತಂತ್ರಜ್ಞಾನ ವಿದ್ಯಾಸಂಸ್ಥೆ, ಪಟ್ಟಣದಲ್ಲಿ ಒಳಚರಂಡಿ ಕಾಮಗಾರಿ, ತರಬಹಳ್ಳಿಯಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸುವ ಮೂಲಕ ನೀತಿಸಂಹಿತೆಯನ್ನು ಉಲ್ಲಂಘಿಸಿದ್ದಾರೆ ಎಂದು ತಾಲೂಕು ಬಿಜೆಪಿ ಅಧ್ಯಕ್ಷ ಸಿ.ಮುನಿಯಪ್ಪ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.
ಸ್ವಯಂ ಪ್ರೇರಿತ ರಕ್ತದಾನ
ಮಾಗಡಿ: ವನಿತಾ ವೃಂದ ಬೆಂಗಳೂರು ರಾಷ್ಟ್ರೋತ್ಥಾನ ರಕ್ತನಿಧಿ ಸಹಕಾರದೊಂದಿಗೆ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಮಾ. 7 ಶುಕ್ರವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಪಟ್ಟಣದ ಕನ್ನಿಕಾ ಮಹಲ್‌ನಲ್ಲಿ ಆಯೋಜಿಸರುವುದಾಗಿ ವನಿತಾ ವೃಂದದ ಅಧ್ಯಕ್ಷೆ ನಿರ್ಮಲ ವೆಂಕಟಾಚಲಪತಿ ತಿಳಿಸಿದ್ದಾರೆ. ನಾಗರಿಕರು  ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ರಕ್ತದಾನ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಮನವಿ ಮಾಡಿದ್ದಾರೆ.
ಬಯೋವುಟ್ರಿಕ್ ಯಂತ್ರಕ್ಕೆ ದರಪಟ್ಟಿ ಆಹ್ವಾನ
ರಾಮನಗರ: ಕಾನೂನು ಮಾಪನಶಾಸ್ತ್ರ ಇಲಾಖೆಯ ಸಹಾಯಕ ನಿಯಂತ್ರಕರು ರಾಮನಗರ ಕಚೇರಿಯಲ್ಲಿ ಇ-ಆಡಳಿತ ಜಾರಿಗೊಳಿಸುವ ಅಂಗವಾಗಿ ಇ-ಅಟೆಂಡೆನ್ಸ್ ವ್ಯವಸ್ಥೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ. ಇದಕ್ಕೆ ಅಗತ್ಯವಾದ ಬಯೋವುಟ್ರಿಕ್ ಬೇಸಿಕ್ ಮಾಡೆಲ್ ಯಂತ್ರದ ಸರಬರಾಜಿಗಾಗಿ ದರಪಟ್ಟಿ ಆಹ್ವಾನಿಸಲಾಗಿದೆ. ಈ ಯಂತ್ರವನ್ನು ಸರಬರಾಜು ಮಾಡಲು ಇಚ್ಚಿಸುವವರು ಮಾ.7ರ ಸಂಜೆ 4ರೊಳಗೆ ಕಾನೂನು ಮಾಪನ ಶಾಸ್ತ್ರ ಸಹಾಯಕ ನಿಯಂತ್ರಕರ ಕಚೇರಿ, ನಂ.105, ಮಿನಿ ವಿಧಾನಸೌಧ ಎದುರು, ಕುವೆಂಪುನಗರ, ಐಜೂರು, ಬಿ.ಎಂ.ರಸ್ತೆ, ರಾಮನಗರ ಈ ವಿಳಾಸಕ್ಕೆ ಮುಚ್ಚಿದ ಲಕೋಟೆಯಲ್ಲಿ ದರಪಟ್ಟಿಯನ್ನು ಸಲ್ಲಿಸಬಹುದು. ದರಪಟ್ಟಿಗಳನ್ನು ಮಾ.7ರ ಸಂಜೆ 5ಕ್ಕೆ ಹಾಜರಿದ್ದ ದರಪಟ್ಟಿ ಸಲ್ಲಿಕೆದಾರರ ಸಮಕ್ಷಮದಲ್ಲಿ ತೆರೆಯಲಾಗುವುದು. ಹೆಚ್ಚಿನ ಮಾಹಿತಿಗಾಗಿ ಜಿಲ್ಲೆಯ ಕಾನೂನು ಮಾಪನಶಾಸ್ತ್ರ ಸಹಾಯಕ ನಿಯಂತ್ರಕರನ್ನು ಸಂಪರ್ಕಿಸಬಹುದು.
ಆಯುಧ ಡೆಪಾಸಿಟ್ ಮಾಡಲು ಸೂಚನೆ
ರಾಮನಗರ: ಲೋಕಸಭಾ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ನಾಲ್ಕೂ ತಾಲೂಕುಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಜಿಲ್ಲೆಯಲ್ಲಿ ಪರವಾನಗಿ ಹೊಂದಿರುವ ಎಲ್ಲಾ ರೀತಿಯ ಆಯುಧಗಳನ್ನು ಪರವಾನಗಿದಾರರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗಳಲ್ಲಿ ಕೂಡಲೇ ಡೆಪಾಸಿಟ್ ಮಾಡಿ ಸ್ವೀಕೃತಿ ಪಡೆಯುವಂತೆ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಆದೇಶ ಹೊರಡಿಸಿದ್ದಾರೆ.  ಜಿಲ್ಲಾ ಪೊಲೀಸ್ ಅಧೀಕ್ಷಕರು ಜಿಲ್ಲಾ ವ್ಯಾಪ್ತಿಯ ಎಲ್ಲಾ ಠಾಣೆ ಅಧಿಕಾರಿಗಳಿಗೆ ಕೂಡಲೇ ತಮ್ಮ ವ್ಯಾಪ್ತಿಯಲ್ಲಿನ ಆಯುಧಗಳನ್ನು ಹೊಂದಿರುವ ಎಲ್ಲಾ ಪರವಾನಗಿದಾರರಿಂದ ಆಯುಧಗಳನ್ನು ಪಡೆದು ಡೆಪಾಸಿಟ್ ಮಾಡಿಕೊಂಡು  ಸ್ವೀಕೃತಿ ನೀಡಿ ಚುನಾವಣಾ ಪ್ರಕ್ರಿಯೆ ಮುಗಿದ ನಂತರ ವಾಪಸ್ ನೀಡಲು ಕ್ರಮ ಕೈಗೊಳ್ಳುವಂತೆ ಅವರು ಸೂಚಿಸಿದ್ದಾರೆ.
ಬಿಕಾಂ ವಿಭಾಗದಲ್ಲಿ ಗಣನೀಯ ಸಾಧನೆ ಮೆರೆದ ಸುನೀಲ್, ಸ್ವಾತಿ
ದೊಡ್ಡಬಳ್ಳಾಪುರ: ಬೆಂಗಳೂರು ವಿಶ್ವವಿದ್ಯಾಲಯದ ಬಿಕಾಂ ಪದವಿ ಪರೀಕ್ಷೆಗಳ ರ್ಯಾಂಕ್ ಪಟ್ಟಿ ಪ್ರಕಟಗೊಂಡಿದ್ದು ದೊಡ್ಡಬಳ್ಳಾಪುರದ ಇಬ್ಬರು ವಿದ್ಯಾರ್ಥಿಗಳು ಉನ್ನತ ಸಾಧನೆ ಮೆರೆದಿದ್ದಾರೆ.
ಇಲ್ಲಿನ ಕೊಂಗಾಡಿಯಪ್ಪ ಪದವಿ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡಿದ ಟಿ.ಪಿ.ಸುನೀಲ್ 6 ಸೆಮಿಸ್ಟರ್‌ಗಳಿಂದ ಒಟ್ಟಾರೆ ಶೇ.92.57 ಅಂಕಗಳನ್ನು ಗಳಿಸಿ 2ನೇ ರ್ಯಾಂಕ್ ಪಡೆದಿದ್ದಾನೆ. ಈತ ಒಟ್ಟು 2800 ಅಂಕಗಳಿಗೆ 2592 ಅಂಕಗಳನ್ನು ಪಡೆದು ಈ ಸಾಧನೆ ಮಾಡಿದ್ದಾನೆ. ಅದೇ ರೀತಿ ಬೆಂಗಳೂರಿನ ಎಂಇಎಸ್ ಕಾಲೇಜಿನಲ್ಲಿ ಬಿಕಾಂ ವ್ಯಾಸಂಗ ಮಾಡಿದ ವಿದ್ಯಾರ್ಥಿನಿ ವಿ.ಸ್ವಾತಿ ಶೇ.90.68 ಅಂಕಗಳನ್ನು ಗಳಿಸುವ ಮೂಲಕ ರ್ಯಾಂಕ್ ಪಟ್ಟಿಯಲ್ಲಿ 6ನೇ ಸ್ಥಾನ ಪಡೆದಿದ್ದಾಳೆ. ಈಕೆ ಒಟ್ಟು 2800 ಅಂಕಗಳಿಗೆ 2539 ಅಂಕಗಳನ್ನು ಪಡೆದಿದ್ದಾಳೆ.
ಬೆಂಗಳೂರು ವಿಶ್ವವಿದ್ಯಾಲಯ ಮೌಲ್ಯಮಾಪನ ರಿಜಿಸ್ಟ್ರಾರ್ ರ್ಯಾಂಕ್ ಪಟ್ಟಿಯನ್ನು ಪ್ರಕಟಿಸಿದ್ದಾರೆ. ಈ ಇಬ್ಬರೂ ವಿದ್ಯಾರ್ಥಿಗಳ ಉನ್ನತ ಸಾಧನೆಗೆ ಕಾಲೇಜುಗಳ ಆಡಳಿತ ಮಂಡಲಿ, ಬೋಧಕ ವರ್ಗ ಮತ್ತು ವಿವಿಧ ಸಂಘಟನೆಗಳು ಅಭಿನಂದಿಸಿವೆ.
ಸರ್ಕಾರಿ ಬಾಲಕಿಯರ ಮಾಧ್ಯಮಿಕ ಶಾಲೆ ಶತಮಾನೋತ್ಸವ
ಕನಕಪುರ: ಕನಕಪುರದ ಚನ್ನಬಸಪ್ಪ ವೃತ್ತದಲ್ಲಿರುವ ಸರ್ಕಾರಿ ಬಾಲಕಿಯರ ಮಾಧ್ಯಮಿಕಶಾಲೆ (ಜಿಕೆಬಿಎಂಎಸ್) ಶತಮಾನೋತ್ಸವ ಸಮಾರಂಭ ನಡೆಯಿತು. ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ವಿಪ ಮಾಜಿ  ಸದಸ್ಯ ಎಸ್.ರವಿ ಉದ್ಘಾಟನೆಯನ್ನು ನೆರವೇರಿಸಿದರು.  ಸಚಿವ ಶಿವಕುಮಾರ್ ಮಾತನಾಡಿ, ಶಾಲೆಯು 1913ರಲ್ಲಿ ಪ್ರಾರಂಭಗೊಂಡು ನೂರು ವರ್ಷಗಳನ್ನು ಪೂರೈಸಿದೆ. ಗ್ರಾಮೀಣ ಪ್ರದೇಶದ ಮಕ್ಕಳಿಗೆ ವಿದ್ಯೆಯನ್ನು ನೀಡಿ ಸಾವಿರಾರು ಜನರು ಜೀವನದಲ್ಲಿ ಸಫಲತೆ ಕಾಣಲು ಶಾಲೆ ಕಾರಣವಾಗಿದೆ ಎಂದು ಹೇಳಿದರು.  ಶತಮಾನೋತ್ಸವದ ನೆನಪಿಗಾಗಿ ನೂತನ ಕಟ್ಟಡವನ್ನು ನಿರ್ಮಿಸಲಾಗುವುದು ಹಾಗೂ ಶಾಲೆಯಲ್ಲಿ ಆಟದ ಮೈದಾನ ಮತ್ತು ಉದ್ಯಾನ ನಿರ್ಮಿಸಲು ಶಾಸಕರ ನಿಧಿಯಿಂದ 2 ಲಕ್ಷ ನೆರವು ಒದಗಿಸಲಾಗುವುದು,ಎಂದು ಸಚಿವ ಶಿವಕುಮಾರ್ ನುಡಿದರು.
ನೂತನ ಬಿಡಿಸಿಸಿ ಬ್ಯಾಂಕ್ ಕಟ್ಟಡ ಉದ್ಘಾಟನೆ
ಕನಕಪುರ: ಇಲ್ಲಿನ ಎಂಎಚ್‌ಎಸ್ ರಸ್ತೆಯಲ್ಲಿ ನೂತನವಾಗಿ ನಿರ್ಮಿಸಿರುವ ಬಿಡಿಸಿಸಿ ಬ್ಯಾಂಕ್ ಕಟ್ಟಡವನ್ನು ಇಂಧನ ಸಚಿವ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು. ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಮಕೃಷ್ಣ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಶಂಕುಸ್ಥಾಪನೆಯಾದ ಮೂರೇ ತಿಂಗಳಲ್ಲಿ ಸುಸಜ್ಜಿತ ಕಟ್ಟಣ ನಿರ್ಮಾಣಗೊಂಡು ಕಾರ್ಯಾರಂಭ ಮಾಡಿರುವುದು ಸಂತಸದ ಸಂಗತಿ. ತಾಲೂಕಿನ ಸಹಕಾರ ಸಂಘಗಳಿಗೆ, ಸದಸ್ಯರಿಗೆ ಹಾಗೂ ಸಾರ್ವಜನಿಕರಿಗೆ ವ್ಯವಹರಿಸಲು ಅನುಕೂಲವಾಗಿದೆ ಎಂದು ಡಿಕೆಶಿ ಹೇಳಿದರು. ನಿರ್ದೇಶಕ ಹನುಮಂತಯ್ಯ, ಗೋಪಾಲಕೃಷ್ಣ, ಸುರೇಶ್, ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ನಾರಾಯಣಗೌಡ ಪಾಲ್ಗೊಂಡಿದ್ದರು.
ಅತಿರೇಕದ ಬದಲಾವಣೆ ಶಾಸ್ತ್ರೀಯ ಲಕ್ಷಣಗಳಿಗೆ ಕೊಡಲಿ ಪೆಟ್ಟು
ಚನ್ನಪಟ್ಟಣ: ಇಂದಿನ ಹಲವು ಯುವ ಮನಸ್ಸುಗಳು, ಆಧುನಿಕ ಪ್ರೇರೇಪಿತ ನಿಲವುಗಳು ಶಾಸ್ತ್ರೀಯ ನೃತ್ಯವನ್ನು ಅಸಡ್ಡೆಯಿಂದ ಕಾಣುವುದು, ಅದರಲ್ಲಿ ನವೀನವೆನಿಸುವ ನೆಪದಲ್ಲಿ ಅತಿರೇಕದ ಬದಲಾವಣೆಗಳನ್ನು, ಪ್ರಯೋಗಗಳನ್ನು ಸೇರಿಸುವುದು ಶಾಸ್ತ್ರೀಯ ಲಕ್ಷಣಗಳಿಗೆ ಕೊಡಲಿ ಪೆಟ್ಟು ಕೊಡುತ್ತಿದೆ ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಮಧುಸೂದನಾಚಾರ್ಯ ಜೋಷಿ ವಿಷಾದಿಸಿದರು.
ಇಲ್ಲಿ ನಡೆದ ಕಲ್ಪಶ್ರೀ ಪರ್‌ಫಾರ್ಮಿಂಗ್ ಆರ್ಟ್ಸ್‌ನ 24ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ಮಾತನಾಡಿ,  ನಾಲ್ಕು ವೇದಗಳ ಸಾರವನ್ನು ತೆಗೆದ ಐದನೇ ವೇದ ಭರತನಾಟ್ಯ ಎಂಬ ಮಾತಿದ್ದು ದೈವಿಕ ಸ್ಪರ್ಶವಿರುವ ಈ ಕಲೆಯನ್ನು ಆಧುನೀಕತೆಯ ಹೆಸರಿನಲ್ಲಿ ವಿಕಾರ ಗೊಳಿಸುವ ಪ್ರಯತ್ನಗಳ ವಿರುದ್ಧ ನಾವು ಜಾಗೃತರಾಗ ಬೇಕಿದೆ ಎಂದು ಎಚ್ಚರಿಸಿದರು.
ಟ್ರಸ್ಟ್ ಉದಯೋನ್ಮುಖ ನಾಟ್ಯಪಟುಗಳಿಗೆ  ವೇದಿಕೆಯಾಗಿದೆ  ಮುಂದಿನ ದಿನಗಳಲ್ಲಿ ಮತ್ತಷ್ಟು ಒಳ್ಳೆಯ ಕಾರ್ಯಗಳನ್ನು ನಡೆಸಲಿ ಎಂದು ಶುಭ ಕೋರಿದರು. ಸಂಸ್ಕೃತಿ ಇಲಾಖೆ ಕೆಲ ಬೇನಾಮಿ ಟ್ರಸ್ಟ್‌ಗಳಿಗೆ ಲಕ್ಷಾಂತರ ರು. ಅನುದಾನ ನೀಡುತ್ತಿದೆ, ಕೆಲ ಟ್ರಸ್ಟ್‌ಗಳು ಸಣ್ಣ ಪ್ರಮಾಣದ ಕಾರ್ಯಕ್ರಮ ನಡೆಸಿ  ಹತ್ತಾರು ಲಕ್ಷ ರು. ಹಣ ದೋಚುತ್ತಿವೆ ಎಂದು ಕಸಾಪ ಜಿಲ್ಲಾಧ್ಯಕ್ಷ ಬಿ.ಟಿ.ನಾಗೇಶ್ ವಿಷಾದಿಸಿದರು.
 ನೃತ್ಯಗುರು ಸುಜೇಂದ್ರಬಾಬು,  ಮಲುವೇಗೌಡ, ಪ್ರಮೋದ್, ಶಿಕ್ಷಕ ಗಂಗಾಧರ ಮೂರ್ತಿ, ನಗರಸಭಾ ಸದಸ್ಯ ಮಧು ಮುಂತಾದವರಿದ್ದರು.
ಪ್ರಿಯಕರನ ಜತೆ ಸೇರಿ ಪತಿ ಬರ್ಬರ ಹತ್ಯೆ
ಕನಕಪುರ: ಅಕ್ರಮ ಸಂಬಂಧ ಹೊಂದಿದ್ದ ಮಹಿಳೆ  ಪ್ರಿಯಕರನೊಂದಿಗೆ ಸೇರಿ ಹತ್ತಾರುವರ್ಷ ಸಂಸಾರ ನಡೆಸಿದ ಗಂಡನನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಕನಕಪುರ ತಾಲೂಕು ಸಿಡಿದೇವರಹಳ್ಳಿ ಗ್ರಾಮದಲ್ಲಿ ನಡೆದಿದೆ. ಇಲ್ಲಿನ ಕಾಲೋನಿ ನಿವಾಸಿ ಮಂಟೇಲಿಂಗಯ್ಯ ಉ.ಚಿಕ್ಕೋನು (36)ಕೊಲೆಯಾದ ದುರ್ದೈವಿ.
ಕೊಲೆಯಾದ ಚಿಕ್ಕೋನು ಪತ್ನಿ ಲಕ್ಷ್ಮಿ ತನ್ನ ಪ್ರಿಯಕರ ಚಂದ್ರು ಜೊತೆಗೂಡಿ ಬುಧವಾರ ಮಧ್ಯರಾತ್ರಿ ಮಲಗಿದ್ದಾಗ ಕಬ್ಬಿಣದ ರಾಡ್‌ನಿಂದ ಹೊಡೆದು, ವೃಷಣಗಳನ್ನು ಹಿಸುಕಿ, ಕುತ್ತಿಗೆಯನ್ನು ಬಟ್ಟೆಯಿಂದ ಸುತ್ತಿ ಕ್ರೂರವಾಗಿ ಹತ್ಯೆಮಾಡಿದ್ದಾರೆ.
ವಿವಾಹಿತನಾಗಿದ್ದ ಆರೋಪಿ ಚಂದ್ರು ಬೆಂಗಳೂರಿನಲ್ಲಿ ತನ್ನ ಹೆಂಡತಿ ಮಕ್ಕಳನ್ನು ಅತಂತ್ರ ಸ್ಥಿತಿಯಲ್ಲಿ ದೂಡಿ ಸಿಡಿದೇವರ ಹಳ್ಳಿ ಗ್ರಾಮದಲ್ಲಿ ನಾಲ್ಕಾರು ವರ್ಷಗಳಿಂದ ನೆಲೆಸಿ ಲಕ್ಷ್ಮಿಯೊಂದಿಗೆ ಅಕ್ರಮ ಸಂಬಂಧವಿರಿಸಿಕೊಂಡಿದ್ದ. ಇವರ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಚಿಕ್ಕೋನುವನ್ನು ಹತ್ಯೆ ಮಾಡಿದ ನಂತರ ಇಬ್ಬರೂ ಸೇರಿ ಗ್ರಾಮದಲ್ಲಿ ಮಾತ್ರೆ ಸೇವನೆಯಿಂದ ಸಾವು ಸಂಭವಿಸಿದೆ ಎಂದು ಸುದ್ಧಿ ಹರಡಲು ಯತ್ನಿಸಿದ್ದಾರೆ.
ಘಟನೆಯ ಬಗ್ಗೆ ಪೊಲೀಸರು ಲಕ್ಷ್ಮಿಯನ್ನು ವಿಚಾರಿಸಿದಾಗ ನಿಜಸಂಗತಿ ಬಯಲಿಗೆ ಬಂದಿದೆ. ಘಟನಾಸ್ಥಳಕ್ಕೆ ಹಾರೋಹಳ್ಳಿ ವೃತ್ತನಿರೀಕ್ಷಕ ಸಂಪತ್‌ಕುಮಾರ್, ಉಪನಿರೀಕ್ಷಕ ಮಾರುತಿ ಪರಿಶೀಲನೆ ನಡೆಸಿದರು. ಹಾರೋಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಬೆಂಕಿ ತಗುಲಿ ರಾಗಿ ಬಣವೆ ಸಂಪೂರ್ಣ ಭಸ್ಮ
ದೊಡ್ಡಬಳ್ಳಾಪುರ: ರಾಗಿ ಬಣವೆಗಳಿಗೆ ಆಕಸ್ಮಿಕ ಬೆಂಕಿ ತಗುಲಿದ ಪರಿಣಾಮ ಬಣವೆಗಳು ಸುಟ್ಟು ಭಸ್ಮವಾಗಿರುವ ಘಟನೆ ತಾಲೂಕಿನ ಅಂತರಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ರಾಜಣ್ಣ ಎಂಬ ರೈತನಿಗೆ ಸೇರಿದ ಬಣವೆಗಳು ಬೆಂಕಿಗಾಹುತಿಯಾಗಿದ್ದು, ಸುಮಾರು 50 ಸಾವಿರಕ್ಕೂ ಹೆಚ್ಚು ನಷ್ಟ ಸಂಭವಿಸಿದೆ ಎನ್ನಲಾಗಿದೆ. 2 ಬಣವೆಗಳು ಸಂಪೂರ್ಣ ಹಾನಿಗೊಳಗಾಗಿವೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದ್ದಾರೆ. ಕೈಗೆ ಬಂದ ಬೆಳೆ ಆದಾಯ ತರುವ ಮುನ್ನವೇ ಆಕಸ್ಮಿಕವಾಗಿ ನಾಶವಾಗಿರುವುದು ರೈತನಿಗೆ ಆಘಾತ ಉಂಟು ಮಾಡಿದೆ.
ಏಕ ದಿನ ಕ್ರಿಕೆಟ್ ಪಂದ್ಯ: ವಿಜೇತರಿಗೆ ಬಹುಮಾನ
ನೆಲಮಂಗಲ: ಗ್ರಾಮೀಣ ಭಾಗದ ಯುವಕರು ಕ್ರೀಡೆಗಳಲ್ಲಿ ಅತ್ಯುತ್ತಮ ಸಾಧಕರಾಗಬೇಕು ಎಂದು ನಿವೃತ್ತ ಪೊಲೀಸ್ ಮಹಾನಿರ್ದೇಶಕ ಜ್ಯೋತಿ ಪ್ರಕಾಶ್ ಮಿರ್ಜಿ ತಿಳಿಸಿದರು.
ಅವರು ಬುಧವಾರ ತಾಲೂಕಿನ ಹಂಚೀಪುರ ಗ್ರಾಮದಲ್ಲಿ ಚಾಮುಂಡೇಶ್ವರಿ ಸ್ಪೋಟ್ಸ್ ಕ್ಲಬ್ ವತಿಯಿಂದ  ಆಯೋಜಿಸಿದ್ದ ಏಕ ದಿನ ಕ್ರಿಕೆಟ್ ಪಂದ್ಯದಲ್ಲಿ ವಿಜೇತರಿಗೆ ಬಹುಮಾನ ವಿತರಿಸಿ ಮಾತನಾಡಿ, ಯುವಕರು ಜೀವನದ ಉತ್ತಮ ಧ್ಯೇಯೋದ್ದೇಶಗಳನ್ನು ಹೊಂದಿ ಉತ್ತಮ ಸಮಾಜ ನಿರ್ಮಾಣ ಮಾಡುವ ಗುರಿ ಹೊಂದಬೇಕು ಎಂದರು. ಈ ಸಂದರ್ಭದಲ್ಲಿ  ಹಿರಿಯ ಚಿತ್ರನಟಿ ಲೀಲಾವತಿ, ನಟ ವಿನೋದ್‌ರಾಜ್, ಮುಖಂಡ ಸಚ್ಚಿದಾನಂದಮೂರ್ತಿ, ಬೈರೇಗೌಡ, ಎಸ್‌ಐ ನವೀನಕುಮಾರ್, ಕ್ರೀಡಾಪಟುಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement