ನೀತಿಸಂಹಿತೆ ಭಯ: ರಾಜಕಾರಣಿಗಳ ಕಟೌಟ್, ಫ್ಲೆಕ್ಸ್ ಮಾಯ!
ಮಾಗಡಿ: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿಗಳು ಹಾಗೂ ರಾಜಕಾರಣಿಗಳಿಗೆ ನೀತಿಸಂಹಿತೆ ಭಯ ಬಂದಿದೆ. ಪರಿಣಾಮ, ಪಟ್ಟಣದಲ್ಲಿ ರಾರಾಜಿಸುತ್ತಿದ್ದ ರಾಜಕಾರಣಿಗಳ ಕಟೌಟ್ಗಳನ್ನು ಪುರಸಭೆ ಸಿಬ್ಬಂದಿ ಕಿತ್ತೆಸೆಯುತ್ತಿದ್ದಾರೆ. ರಸ್ತೆ, ಗೋಡೆ ಇತರೆಡೆ ಅಂಟಿಸಿದ್ದ ಪೋಸ್ಟರ್ಗಳನ್ನು ತೆಗೆಯಲಾಗುತ್ತಿದೆ. ಗೋಡೆಯ ಮೇಲೆ ಕೈ ಬರಹಗಳಿಗೆ ಮಸಿ ಬಳಿಯಲಾಗುತ್ತಿದೆ. ಅಲ್ಲಲ್ಲಿ ಇದ್ದ ಪೋಸ್ಟರ್ಗಳನ್ನು ತೆಗೆಯಲು ಮೂರು ಪಾಳಿಯಲ್ಲಿ ಸಿಬ್ಬಂದಿ ನೇಮಿಸಲಾಗಿದೆ.
ನೀತಿ ಸಂಹಿತೆ ಜಾರಿಗೊಂಡ ಪರಿಣಾಮ ಗುರುವಾರ ಚಾಲನೆಯಾಗಬೇಕಿದ್ದ ಶ್ರೀರಂಗ ನೀರಾವರಿ ಯೋಜನೆಯ ಶಂಕುಸ್ಥಾಪನೆಗೆ ಬ್ರೇಕ್ ಬಿತ್ತು. ಕೆಲವು ಸರ್ಕಾರಿ ಕಾರ್ಯಕ್ರಮಗಳು ಮೊಟಕುಗೊಂಡವು, ಮತ್ತಷ್ಟು ಕಾರ್ಯಕ್ರಮ ನಡೆಯಲೇ ಇಲ್ಲ. ಮೊಟಕುಗೊಂಡ ಕಾರ್ಯಕ್ರಮಗಳತ್ತ ಅಧಿಕಾರಿಗಳು ಸುಳಿಯಲಿಲ್ಲ. ಪಡಿತರ ಚೀಟಿ ವಿತರಣೆ,ಸರ್ಕಾರಿ ಸೌಲತ್ತುಗಳ ವಿತರಣೆಗೂ ಬ್ರೇಕ್ ಬಿದ್ದಿದೆ. ಚುನಾವಣೆ ಎಂದರೆ ಕೇಳಬೇಕೇ ಯಾವುದೇ ಸರ್ಕಾರಿ ಇಲಾಖೆಗೆ ಹೋದರೂ ಯಾವೊಂದು ಸಾರ್ವಜನಿಕ ಕೆಲಸ ಕಾರ್ಯವೂ ಅಷ್ಟಾಗಿ ನಡೆಯದು. ಕೇಳಿದರೆ, ಅಧಿಕಾರಿಗಳು ಚುನಾವಣೆ ತುರ್ತು ಮೀಟಿಂಗ್ ಎಂದು ಸಬೂಬು ಹೇಳಿ ಜಾರಿಕೊಳ್ಳುವುದು ಸರ್ವೆ ಸಾಮಾನ್ಯವಾಗಿದೆ.