ಅಣ್ಣೇಶ್ವರ ಗ್ರಾಪಂ ವ್ಯಾಪ್ತಿಯಲ್ಲಿ ಅನುಮತಿ ಇಲ್ಲದೆ ಕಾಮಗಾರಿ: ಸದಸ್ಯ ಆಕ್ಷೇಪ
ದೇವನಹಳ್ಳಿ: ತಾಲೂಕಿನ ಎರ್ತಿಗಾನಹಳ್ಳಿ ಮತ್ತು ಭೂವನಹಳ್ಳಿ ಗ್ರಾಮಗಳಲ್ಲಿ ಅನುಮತಿ ಇಲ್ಲದೆ ರಸ್ತೆ ಕಾಮಗಾರಿ ನಡೆಸಿರುವ ಪಂಚಾಯಿತಿ ಅಧಿಕಾರಿಗಳ ಬಗ್ಗೆ ಪಂಚಾಯಿತಿ ಸದಸ್ಯ ಮಂಜುನಾಥ್ ಆಕ್ಷೇಪ ವ್ಯಕ್ತಪಡಿಸಿ, ಚುನಾವಣಾ ನೀತಿ ಸಂಹಿತೆ ಇದ್ದರೂ ಕಾಮಗಾರಿ ನಡೆಸಿರುವುದು ಕಾನೂನಿಗೆ ವಿರೋಧವಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಅಣ್ಣೇಶ್ವರ ಗ್ರಾಮ ಪಂಚಾಯಿತಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ತೆರಿಗೆ 3.21 ಕೋಟಿ ರು. ಬಂದಿದ್ದು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಎಲ್ಲ ಹಣಕ್ಕೂ ಕ್ರಿಯಾ ಯೋಜನೆ ತಯಾರಿಸಿ ಫೆ.17 ರಂದು ಜಿಲ್ಲಾ ಪಂಚಾಯಿತಿಗೆ ಸಲ್ಲಿಸಿ ಒಂದೇ ದಿನಕ್ಕೆ ಜಿಪಂ ಅಧಿಕಾರಿಗಳಿಂದ ಅನುಮತಿ ಪಡೆದಿರುತ್ತಾರೆ.
ಆದರೆ ಅನುಮತಿ ಪಡೆಯುವ ಮುನ್ನವೇ ಜೆರಾಕ್ಸ್ ಯಂತ್ರ ಹ್ಯಾಂಡಿ ಕ್ಯಾಮರಾ, ಕುರ್ಚಿಗಳನ್ನು ಖರೀದಿ ಮಾಡಿರುವುದು ಕಾನೂನಿಗೆ ವಿರೋಧವಾಗಿದೆ ಎಂದರಲ್ಲದೆ ಚುನಾವಣೆ ನೀತಿ ಸಂಹಿತೆ ಇದ್ದರೂ ಮಾ. 15 ಮತ್ತು 16 ರಂದು ರಸ್ತೆ ಕಾಮಗಾರಿ ಕಳಪೆಯಾಗಿ ಮಾಡಿಸಿರುತ್ತಾರೆ ಎಂದು ಆರೋಪಿಸಿ ತಪ್ಪಿತಸ್ಥ ಅಧಿಕಾರಿಗಳ ಕಾನೂನು ಕ್ರಮ ಕೈಗೊಳ್ಳಬೇಕೆಂದು ಚುನಾವಣಾಧಿಕಾರಿಗಳಲ್ಲಿ ಮನವಿ ಮಾಡಿದ್ದಾರೆ.
ಜಿಪಂ ಮಾಜಿ ಅಧ್ಯಕ್ಷ ಬಿ.ಮುನೇಗೌಡ ಮಾತನಾಡಿ ಬೆಂ.ಗ್ರಾ. ಜಿಪಂ ಅಧಿಕಾರಿಗಳು ಹಣಕ್ಕೋಸ್ಕರ ಕಾನೂನು ವಿರೋಧಿ ಕೆಲಸ ಮಾಡುತ್ತಿದ್ದಾರೆ.
ಆದರೆ ಜಿಪಂ ಅಧ್ಯಕ್ಷರು ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿದರು.