ಚನ್ನಪಟ್ಟಣದಲ್ಲೂ ನಿಲ್ಲುತ್ತೆ ಮಂಗಳಾ ಎಕ್ಸ್ಪ್ರೆಸ್
ಚನ್ನಪಟ್ಟಣ: ಮಂಗಳಾ ಎಕ್ಸ್ಪ್ರೆಸ್ ರೈಲು ಜಿಲ್ಲೆಯ ಎರಡೂ ತಾಲೂಕು ಕೇಂದ್ರದಲ್ಲಿ ನಿಲುಗಡೆ ಆಗಬೇಕೆಂಬುದು ಜಿಲ್ಲೆಯ ಜನತೆಯ ಬಹುದಿನದ ಬೇಡಿಕೆಯಾಗಿದ್ದು, ಸಂಸದ ಡಿ.ಕೆ.ಸುರೇಶ್ ಪರಿಶ್ರಮ ಮತ್ತು ರೈಲ್ವೆ ಸಚಿವ ಮಲ್ಲಿಕಾರ್ಜುನ ಖರ್ಗೆ ಸಹಕಾರದಿಂದ ಕೊನೆಗೂ ಈಡೇರಿದೆ ಎಂದು ತಾಲೂಕು ಕಾಂಗ್ರೆಸ್ ಮುಖಂಡ ರಘುನಂದನ್ ರಾಮಣ್ಣ ಅಭಿಪ್ರಾಯಪಟ್ಟರು.
ಪಟ್ಟಣದ ರೈಲ್ವೆ ನಿಲ್ದಾಣದಲ್ಲಿ ಇದೇ ಮೊದಲಬಾರಿಗೆ ನಿಲುಗಡೆ ಮಾಡಿದ ಮಂಗಳಾ ಎಕ್ಸ್ಪ್ರೆಸ್ ರೈಲಿಗೆ ಪೂಜೆ ಸಲ್ಲಿಸುವ ಮೂಲಕ ಸಂಭ್ರಮ ವ್ಯಕ್ತಪಡಿಸಿದ ಅವರು, ಹಿಂದಿನ ಜನಪ್ರತಿನಿಧಿಗಳಿಗೆ ಹಲವಾರು ಬಾರಿ ಮನವಿ ಮಾಡಲಾಗಿತ್ತಾದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ ಡಿ.ಕೆ.ಸುರೇಶ್ ಪರಿಣಾಮಕಾರಿಯಾಗಿ ಕೆಲಸ ಮಾಡಿದ್ದಾರೆ ಎಂದರು.
ಮಂಗಳ ಎಕ್ಸ್ಪ್ರೆಸ್ ನಿಲುಗಡೆಯಿಂದಾಗಿ ಈ ಭಾಗದ ಸಾವಿರಾರು ಪ್ರಯಾಣಿಕರಿಗೆ ಅನುಕೂಲವಾಗಿದೆ. ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಾದ ಧರ್ಮಸ್ಥಳ, ಕುಕ್ಕೆಸುಬ್ರಮಣ್ಯಕ್ಕೆ ಸಂಪರ್ಕ ಕಲ್ಪಿಸುವ ಈ ರೈಲು ಹತ್ತಲು ಜನತೆ ಬೆಂಗಳೂರು ಇಲ್ಲ ಮಂಡ್ಯಕ್ಕೆ ಹೋಗ ಬೇಕಾಗಿತ್ತು. ಅದು ಇಂದಿನಿಂದ ತಪ್ಪಿ ತಾಲೂಕಿನಿಂದಲೇ ಪಯಣಿಸ ಬಹುದಾಗಿದೆ ಎಂದು ತಿಳಿಸಿದರು.
ಮಂಗಳಾ ಎಕ್ಸ್ಪ್ರೆಸ್ ಜತೆಗೆ ಆಜ್ಮೀರ್ದರ್ಗಾ ಎಕ್ಸ್ಪ್ರೆಸ್ ರೈಲು ರಾಮನಗರದಲ್ಲಿ ನಿಲುಗಡೆ ಮಾಡಲಿದ್ದು, ಆಜ್ಮೀರ್ ದರ್ಗಾಕ್ಕೆ ತೆರಳುವ ಮುಸ್ಲಿಮರಿಗೆ ಈ ರೈಲು ನಿಲುಗಡೆಯಿಂದ ಅನುಕೂಲವಾಗಿದೆ. ಬೆಳಿಗ್ಗೆ 7 ಗಂಟೆಗೆ ಬರುವ ಮಂಗಳಾ ಎಕ್ಸ್ಪ್ರೆಸ್ ರೈಲು ಬೆಂಗಳೂರಿಗೆ ಬೇಗ ತೆರಳುವ ಪ್ರಯಾಣಿಕರಿಗೆ ಸಹಕಾರಿಯಾಗಿದ್ದು, ರಾತ್ರಿ 8.45ಕ್ಕೆ ಬೆಂಗಳೂರಿನಿಂದ ಹೊರಡುವ ರೈಲು ತಡವಾಗಿ ಬರುವ ಮಂದಿಗೆ ಸಾಕಷ್ಟು ಅನುಕೂಲ ಕಾರಿಯಾಗಿದೆ ಎಂದು ನುಡಿದರು.
ನಗರಸಭಾ ಸದಸ್ಯ ಮುದ್ದುಕೃಷ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎ.ಸಿ.ವೀರೇಗೌಡ, ಪಿಎಲ್ಡಿ ಬ್ಯಾಂಕ್ ಮಾಜಿ ನಿರ್ದೇಶಕ ರಾಂಪುರ ಧರಣೀಶ್, ಯುವ ಕಾಂಗ್ರೆಸ್ ಅಧ್ಯಕ್ಷ ಮಲ್ಲೇಶ್, ತಾಲೂಕು ಕಾಂಗ್ರೆಸ್ ಕಾರ್ಯದರ್ಶಿ ಪಿ.ಡಿ.ರಾಜು, ರಾಂಪುರ ಲೋಕೇಶ್, ಶಿವಾನಂದ ಇನ್ನೂ ಮುಂತಾದವರು ಉಪಸ್ಥಿತರಿದ್ದರು.