ಡಿಕೆಶಿ ಕಪಿಮುಷ್ಠಿಗೆ ಸಿಲುಕಿದ ಜಿಲ್ಲೆ
ರಾಮನಗರ: ಇಷ್ಟು ವರ್ಷ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಪಾಳೇಗಾರಿಕೆಯಲ್ಲಿದ್ದ ರಾಮನಗರ ಜಿಲ್ಲೆ ಈಗ ಡಿ.ಕೆ.ಶಿವಕುಮಾರ್ ಕಪಿಮುಷ್ಠಿಗೆ ಸಿಲುಕಿದೆ. ಕನಕಪುರವನ್ನು ರಿಪಬ್ಲಿಕ್ ಮಾಡಿಕೊಂಡಿರುವ ಶಿವಕುಮಾರ್ ಅವರಿಗೆ ಮತದಾರರು ಈ ಬಾರಿ ತಕ್ಕಪಾಠ ಕಲಿಸಬೇಕು ಎಂದು ಆಮ್ ಆದ್ಮಿ ಪಕ್ಷದ ವಕ್ತಾರ ರವಿಕೃಷ್ಣ ರೆಡ್ಡಿ ಮನವಿ ಮಾಡಿದ್ದಾರೆ.
ಗಣಿ ಉದ್ಯಮಿ ಜನಾರ್ದನ ರೆಡ್ಡಿ ಬಳ್ಳಾರಿಯನ್ನು ರಿಪಬ್ಲಿಕ್ ಮಾಡಿಕೊಂಡು, ಈಗ ಜೈಲು ಸೇರಿದ್ದಾರೆ. ಅವರ ಹಾದಿಯಲ್ಲೇ ಸಾಗುತ್ತಿರುವ ಭ್ರಷ್ಟಾತಿಭ್ರಷ್ಟ ಡಿ.ಕೆ.ಶಿವಕುಮಾರ್ ಅವರ ಹಗರಣಗಳನ್ನು ಎಸ್.ಆರ್.ಹಿರೇಮಠ್ ಒಂದೊಂದಾಗಿ ಬಯಲಿ ಗೆಳೆಯುತ್ತಿದ್ದಾರೆ ಎಂದು ಅವರು ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎಲ್ಲೆಡೆ ಅಭ್ಯರ್ಥಿಗಳು: ಲೋಕಸಭೆ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ ಎಲ್ಲೆಡೆ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ. ನಮ್ಮ ಬಳಿ ಗ್ರ್ಯಾನೈಟ್ ಲೂಟಿ ಹೊಡೆದ ಹಣವಿಲ್ಲ. ಕಲ್ಲು ಗಣಿಗಾರಿಕೆಯಿಂದ ಬಂದ ಕಪ್ಪು ಹಣವೂ ಇಲ್ಲ. ಹೀಗಾಗಿ ಮತದಾರರು ಸ್ವಇಚ್ಛೆಯಿಂದ ಭ್ರಷ್ಟಾಚಾರ ಮುಕ್ತ, ಪ್ರಾಮಾಣಿಕ ವ್ಯವಸ್ಥೆ ನಿರ್ಮಾಣಕ್ಕೆ ಆಮ್ ಆದ್ಮಿ ಬೆಂಬಲಿಸಬೇಕು ಎಂದು ಅವರು ಕರೆ ನೀಡಿದರು. ಇದುವರೆಗೆ ಮತದಾರರು ಅನ್ಯ ಮಾರ್ಗವಿಲ್ಲದೆ ಮೂರು ಪ್ರಮುಖ ಪಕ್ಷಗಳಿಗಷ್ಟೇ ಮನ್ನಣೆ ನೀಡುತ್ತಿದ್ದರು. ಇದೀಗ ಹೊಸ ರಾಜಕೀಯ ಕ್ರಾಂತಿಗೆ ಮುನ್ನಡಿ ಬರೆದಿರುವ ಆಮ್ ಆದ್ಮಿ ಪಕ್ಷದ ಮೇಲೆ ಭರವಸೆ ಇಡುತ್ತಿದ್ದಾರೆ. ದೆಹಲಿ ವಿಧಾನಸಭೆಯಂತೆಯೇ ಲೋಕಸಭೆಯಲ್ಲೂ ಪಕ್ಷಕ್ಕೆ ಉತ್ತಮ ಬೆಂಬಲ ವ್ಯಕ್ತವಾಗಲಿದೆ ಎಂದು ರವಿಕೃಷ್ಣ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.
ಭ್ರಷ್ಟರ ವಿರುದ್ಧ ಕಣಕ್ಕೆ: ಬಿ.ಎಸ್.ಯಡಿಯೂರಪ್ಪ, ವೀರಪ್ಪ ಮೊಯಿಲಿ, ಅನಂತಕುಮಾರ್ ಭ್ರಷ್ಟ ರಾಜಕಾರಣಿಗಳಾಗಿದ್ದಾರೆ. ಅವರ ವಿರುದ್ಧ ಆಮ್ ಆದ್ಮಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದೆ. ಅಂತೆಯೇ ಮತ್ತೊಬ್ಬ ಭ್ರಷ್ಟ ಎಚ್.ಡಿ.ಕುಮಾರಸ್ವಾಮಿ ಇಲ್ಲವೇ ಅವರ ಕುಟುಂಬ ಸದಸ್ಯರು ಯಾರೇ ಸ್ಪರ್ಧಿಸಿದರೂ ಅವರ ವಿರುದ್ಧವೂ ಅಭ್ಯರ್ಥಿ ಹಾಕುತ್ತೇವೆ ಎಂದರು. ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಅಭ್ಯರ್ಥಿಗಳು ಹಣ, ಹೆಂಡ ಹಂಚಲಿಲ್ಲ. ಭ್ರಷ್ಟಾಚಾರವನ್ನು ಗುಡಿಸಿ ಹಾಕುವ ಭರವಸೆ ಮಾತ್ರ ನೀಡಿದ್ದೆವು. ಇಲ್ಲೂ ಅದೇ ಪ್ರಯೋಗ ಮುಂದುವರೆಸಲಾಗುವುದು. ನಮ್ಮ ಪಕ್ಷದ ಪರ ಹಿರೇಮಠ್ ಕೂಡ ಪ್ರಚಾರದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ಅಂಬಾನಿಯ ಕೈಗೊಂಬೆ: ನರೇಂದ್ರ ಮೋದಿ ಅವರನ್ನು ಗುಜರಾತ್ ರಾಜ್ಯದ ಅಭಿವೃದ್ಧಿಯ ಹರಿಕಾರ ಎಂದು ಬಿಂಬಿಸಲಾಗುತ್ತಿದೆ. ಆದರೆ, ವಾಸ್ತವದಲ್ಲಿ ಗುಜರಾತ್ ಕೃಷಿ ಕ್ಷೇತ್ರದಲ್ಲಿ ಹಿನ್ನಡೆ ಕಂಡಿದೆ. ನರೇಂದ್ರ ಮೋದಿ ಉದ್ಯಮಿ ಅಂಬಾನಿಯವರ ಕೈಗೊಂಬೆಯಾಗಿದ್ದಾರೆ ಎಂದು ಟೀಕಿಸಿದರು.
16 ರಂದುಕೇಜ್ರಿ ಭಾಷಣ
ದೆಹಲಿಯ ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ 15 ರಂದು ಚಿಕ್ಕಬಳ್ಳಾಪುರದಲ್ಲಿ ಪ್ರಚಾರ ನಡೆಸುವರು. 16ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡುವರು. ಭ್ರಷ್ಟಾಚಾರ ಮುಕ್ತ ರಾಷ್ಟ್ರ ಕಟ್ಟುವ ಸಂಕಲ್ಪ ತೊಟ್ಟಿರುವ ಪ್ರತಿಯೊಬ್ಬರೂ ಆ ಸಮಾವೇಶದಲ್ಲಿ ಪಾಲ್ಗೊಂಡು, ಆಮ್ ಆದ್ಮಿಗೆ ಬೆಂಬಲ ಸೂಚಿಸಬೇಕು ಎಂದು ಮನವಿ ಮಾಡಿದರು.