ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೆಂಗಳೂರು ಗ್ರಾಮಾಂತರ

ತಿಗಳ ಸಂಘದ ಬಣಗಳ ವೈಷಮ್ಯ: 16 ರಂದು ಕರಗಮಹೋತ್ಸವ ಇಲ್ಲ

Vishwanath S
Updated On : 9 Mar 2014, 1:23 am

ದೇವನಹಳ್ಳಿ: ತಾಲೂಕಿನ ಬೂದಿಗೆರೆ ಗ್ರಾಮದಲ್ಲಿ ವಹ್ನಿಕುಲ ಕ್ಷತ್ರೀಯ ತಿಗಳ ಜನಾಂಗದ ಎರಡು ಬಣಗಳ ನಡುವಿನ ವೈಷಮ್ಯದಿಂದಾಗಿ ಮಾ.16 ರಂದು ಕರಗ ಮಹೋತ್ಸವ ನಡೆಯುತ್ತಿಲ್ಲ.
ಎರಡು ಗುಂಪುಗಳ ಪ್ರಮುಖರ ಸಭೆಯನ್ನು ತಹಸೀಲ್ದಾರ್ ಕಚೇರಿಯಲ್ಲಿ ದಂಡಾಧಿಕಾರಿ ಕೇಶವಮೂರ್ತಿ, ಸಿಪಿಐ ಮಹೇಶ್‌ಕುಮಾರ್ ನೇತೃತ್ವದಲ್ಲಿ ನಡೆಯಿತು. ಬೂದಿಗೆರೆಯ ವಹ್ನಿಕುಲ ಕ್ಷತ್ರೀಯ ತಿಗಳ ಜನಾಂಗದವರು ಕಳೆದ 50 ವರ್ಷಗಳಿಂದೀಚೆಗೆ ಶ್ರೀ ಧರ್ಮರಾಯಸ್ವಾಮಿ ಕರಗ ಮಹೋತ್ಸವವನ್ನು 2009 ರವರೆಗೂ ಶ್ರದ್ಧಾ ಭಕ್ತಿಗಳಿಂದ ತಾಲೂಕಿನ ಎಲ್ಲ ಜನಾಂಗದವರಿಗೆ ಮಾದರಿಯಾಗಿ ನಡೆಸಿಕೊಂಡು ಬರುತ್ತಿದ್ದರು.
2009 ರಲ್ಲಿ ಜನಾಂಗದ ಕೆಲವು ಪ್ರತಿಷ್ಠಿತರ ವೈಯುಕ್ತಿಕ ಕಾರಣಗಳಿಂದಾಗಿ ಎರಡು ಗುಂಪುಗಳಾಯಿತು. ಕೆಲವು ಮುಖಂಡರು ಸೇರಿ ಎರಡು ಗುಂಪಿನವರೂ ಎರಡೆರೆಡು ವರ್ಷ ಪ್ರತ್ಯೇಕವಾಗಿ ಕರಗ ಮಹೋತ್ಸವ ನಡೆಸಬೇಕೆಂದು ತೀರ್ಮಾನ ತೆಗೆದುಕೊಂಡು ಅದರಂತೆ ನಾಲ್ಕು ವರ್ಷ ಕರಗ ಮಹೋತ್ಸವ ನಡೆಸಿದರು. ಕಳೆದ ವರ್ಷ ಮತ್ತೆ ವೆಂಕಟೇಶಪ್ಪ ಮತ್ತು ಗಣೇಶಪ್ಪನವರ ಗುಂಪು ಜಗಳದಿದಾಗಿ 49ನೆ ವರ್ಷದ ಕರಗ ಮಹೋತ್ಸವ ನಡೆಯಲೇ ಇಲ್ಲ. ತಹಸೀಲ್ದಾರರು ದೇವಾಲಯಕ್ಕೆ ಬೀಗ ಜಡಿದರು. ಹೋಗಲಿ ಈ ವರ್ಷವಾದರೂ ಕರಗ ಮಹೋತ್ಸವ ನಡೆಯಲಿ ಎಂದು ಎರಡು ಗುಂಪಿನ ಮುಖಂಡರ ಸಭೆಯನ್ನು ದೇವನಹಳ್ಳಿಯ ತಿಗಳ ಜನಾಂಗದ ಅಧ್ಯಕ್ಷ ಗೋಪಾಲಕೃಷ್ಣ ಹಾಗೂ ಪುರಸಭಾ ಸದಸ್ಯ ಶಶಿಕುಮಾರ್ ಮಿನಿ ವಿಧಾನಸೌಧದಲ್ಲಿ ಪೊಲೀಸ್ ಅಧಿಕಾರಿಗಳೊಂದಿಗೆ ಆಯೋಜಿಸಿದ್ದರು.
ಎರಡು ಗುಂಪಿನ ಮುಖಂಡರೊಂದಿಗೆ ತಹಸೀಲ್ದಾರ್ ಕೇಶವಮೂರ್ತಿ ಹಾಗೂ ಸಿಪಿಐ ಮಹೇಶ್ ಕುಮಾರ್ ಮನಮೊಲಿಸಲು ಪ್ರಯತ್ನ ಪಟ್ಟು ಎರಡು ಗುಂಪಿನವರು ಒಂದೊಂದು ವರ್ಷ ಕರಗ ನಡೆಸಿ ಎಂದು ತಿಳಿಸಿದಾಗ ಗಣೇಶಪ್ಪ ಬಣದವರು ಸಾಧ್ಯವಿಲ್ಲ ಎಂದು ಹೇಳಿ ಸಭೆಯಿಂದ ಹೊರನಡೆದರು. ಪೊಲೀಸ್ ಅಧಿಕಾರಿ ಮಹೇಶ್‌ಕುಮಾರ್ ಮಾತನಾಡಿ ಪ್ರತಿ ಮನುಷ್ಯ ತಾನು ಬದುಕಿರುವುದು ಕೆಲವೇ ವರ್ಷಗಳು ಮಾತ್ರ. ಜೀವಿತದ ಅವಧಿಯಲ್ಲಿ ಪ್ರತಿಷ್ಠೆಗಾಗಿ ದೇವರನ್ನು ಬಳಸಿಕೊಳ್ಳಬೇಡಿ. ಮಾತುಕತೆ ಸಹ ಕಾನೂನಿನ ಒಂದು ಭಾಗವಾಗಿರುತ್ತದೆ. ಅಲ್ಲದೆ ಇದೂವರೆಗೂ ಯಾರಿಂದ ತಪ್ಪಾಗಿದೆ ಏನಾಗಿದೆ ಅನ್ನುವುದಕ್ಕಿಂತ ಇನ್ನುಮುಂದೆ ಒಂದೇ ಜನಾಂಗದವರಾಗಿರುವ ನೀವುಗಳು ಸಹೋದರರಂತೆ ಬಾಳಿದರೆ ಗ್ರಾಮದಲ್ಲಿ ಶಾಂತಿ ನೆಮ್ಮದಿ ದೊರೆಯುತ್ತದೆ ಎಂದು ತಿಳಿ ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement