ಪುರುಷರೇ ಕನಿಕರ ಬೇಡ, ಸಮಾನ ಅವಕಾಶ ಕೊಡಿ..
ದೊಡ್ಡಬಳಾಪುರ: ಮಹಿಳಾ ಹೋರಾಟಗಳು ಇಂದು ಗಣನೀಯ ಸಂಖ್ಯೆಯಲ್ಲಿ ಹೆಚ್ಚುತ್ತಿವೆಯಾದರೂ ಅವು ಸಾಮಾಜಿಕವಾಗಿ ಬೀರುತ್ತಿರುವ ಪರಿಣಾಮ ಆಶಾದಾಯಕವಾಗಿಲ್ಲ. ಸಾಮಾಜಿಕ ವಲಯದಲ್ಲಿ ಮಹಿಳೆಯರ ಮೀಸಲಾತಿ ಕೂಡ ಇಂದು ನೆಪಮಾತ್ರಕ್ಕೆ ಎನ್ನುವ ಸ್ಥಿತಿ ನಿರ್ಮಾಣವಾಗಿದ್ದು, ಪುರುಷಪ್ರಧಾನ ವ್ಯವಸ್ಥೆಯ ನೆರಳು ಬಿಡದೆ ಹಿಂಬಾಲಿಸುತ್ತಿದೆ ಎಂದು ಸಹ ಪ್ರಾಧ್ಯಾಪಕಿ ಪಿ.ಚೈತ್ರ ಹೇಳಿದರು.
ಇಲ್ಲಿನ ದೇವರಾಜ ಅರಸ್ ವ್ಯವಹಾರ ನಿರ್ವಹಣಾ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ನೇತೃತ್ವದಲ್ಲಿ ಶನಿವಾರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆಯರ ಬಗ್ಗೆ ಕನಿಕರ ಮತ್ತು ಅತೀವ ಕಾಳಜಿ ಪ್ರದರ್ಶಿಸುವ ಮೂಲಕ ಅವರನ್ನು ಅಬಲೆಯರನ್ನಾಗಿಯೇ ನೋಡುವ ಪರಿಪಾಠ ಇಂದಿಗೂ ಇದೆ. ಮಹಿಳೆಯರ ಅಭ್ಯುದಯಕ್ಕೆ ಬೇಕಿರುವುದು ಕನಿಕರ ಅಥವಾ ಕರುಣೆ ಅಲ್ಲ. ಸಮಾನ ಹಕ್ಕು ಮತ್ತು ಸಮಾನ ಅವಕಾಶಗಳನ್ನು ಒದಗಿಸಿಕೊಡುವ ದೊಡ್ಡತನ ಎಂದ ಅವರು, ಮಹಿಳೆಯರು ಕೇವಲ ಭೋಗದ ವಸ್ತು ಎಂದೇ ತಿಳಿದಿರುವ ಸಮಾಜ ಇಂದಿಗೂ ಅವರನ್ನು ನಿರಂತರವಾಗಿ ಶೋಷಿಸುತ್ತಿದೆ. ಸಂಪ್ರದಾಯ, ಸಂಸ್ಕೃತಿಯ ಹೆಸರಿನಲ್ಲಿ ದೊಡ್ಡ ವಂಚನೆ ಮಾಡಿದೆ ಎಂದರು.
ಆಂಗ್ಲಭಾಷಾ ವಿಭಾಗದ ಸಹ ಪ್ರಾಧ್ಯಾಪಕ ಕೆ.ಆರ್.ರವಿಕಿರಣ್ ಮಾತನಾಡಿ ಜರ್ಮನಿಯ ಸಮಾಜವಾದಿ ಕ್ಲಾರಾಜೆಟ್ಕಿನ್ ಮಹಿಳೆಯರಿಗಾಗಿ ಸಿಗಬೇಕಾದ ಸಮಾನ ಅವಕಾಶಗಳು ಮತ್ತು ಮತದಾನದ ಹಕ್ಕುಗಳ ಕುರಿತು ಮಾದರಿ ಚಳವಳಿ ರೂಪಿಸಿದ್ದರ ಪರಿಣಾಮ ಮಹಿಳೆಯರ ಬದುಕಿನಲ್ಲಿ ಸಾಕಷ್ಟು ಸುಧಾರಣೆಗಳಾದವು. ಹೀಗಾಗಿ ಆಕೆಯ ನೆನಪಿನಲ್ಲಿ ವಿಶ್ವ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದೆ.ನಮ್ಮಲ್ಲಿ ಹೆಣ್ಣಿನ ಚಾರಿತ್ಯ್ರಕ್ಕೆ ಹೆಚ್ಚು ಪರೀಕ್ಷೆಗಳನ್ನು ಒಡ್ಡಲಾಗಿದೆ. ಅವಕಾಶವಂಚಿತ ಸಮೂಹ ಅರಿವಿನ ಆಸ್ಪೋಟದೊಂದಿಗೆ ಸಿಡಿಯಬೇಕು. ಅನ್ಯಾಯಕ್ಕೊಳಗಾದವರು ಸಂಘಟಿತರಾಗಿ ಹೋರಾಟ ಮಾಡುವುದರ ಮೂಲಕ ತಮ್ಮ ಹಕ್ಕುಬಾದ್ಯತೆಗಳನ್ನು ಸುಧಾರಿಸಬಹುದು. ಅದಕ್ಕೆ ಮಹಿಳಾ ಸಮುದಾಯ ಸಜ್ಜುಗೊಳ್ಳಬೇಕು ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಜೆ.ವಿ.ಚಂದ್ರಶೇಖರ್ ಮಾತನಾಡಿ, ಇಂದು ಮಹಿಳೆಯರ ಹಕ್ಕುಗಳ ಕುರಿತ ಹೋರಾಟಕ್ಕೆ ಸ್ಪಷ್ಟ ನಿಲುವು ಮತ್ತು ಪ್ರಬಲ ಒತ್ತಾಸೆಯ ಕೊರತೆ ಇದೆ. ದಿನೇ ದಿನೇ ಮಹಿಳೆಯರ ಮೇಲೆ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಲೇ ಇರುವುದು ಆತಂಕದ ವಿಚಾರ ಎಂದರು. ಎನ್.ಎಸ್.ಎಸ್ ಯೋಜನಾಧಿಕಾರಿ ಎಂ.ಚಿಕ್ಕಣ್ಣ ಮಾತನಾಡಿದರು.
ಕಾಲೇಜಿನ ಗ್ರಂಥಪಾಲಕಿ ಅನಸೂಯ, ಕಚೇರಿ ಉಸ್ತುವಾರಿ ಗಾಯತ್ರಿ, ತೃತೀಯ ಬಿಕಾಂ ವಿದ್ಯಾರ್ಥಿನಿಯರಾದ ಆಶಾ, ಶ್ವೇತಾ, ದರ್ಶಿನಿ, ದ್ವಿತೀಯ ಬಿಕಾಂ ವಿದ್ಯಾರ್ಥಿನಿ ಶ್ವೇತಾ, ದ್ವಿತೀಯ ಬಿಬಿಎಂ ವಿದ್ಯಾರ್ಥಿನಿ ಜೀವಿತಾ, ಪ್ರಥಮ ಬಿಕಾಂ ವಿದ್ಯಾರ್ಥಿನಿ ಗಾಯತ್ರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಎಸ್ಡಿಯುಐಎಂನ ಗ್ರಂಥಪಾಲಕಿ ಅನಸೂಯ, ಕಾಲೇಜಿನ ಸಹ ಪ್ರಾಧ್ಯಾಪಕರು ಮತ್ತಿತರರು ಉಪಸ್ಥಿತರಿದ್ದರು.