ಎಲ್ಲ ಕ್ಷೇತ್ರಗಳಲ್ಲೂ ಆಮ್ ಆದ್ಮಿ ಸ್ಪರ್ಧೆ
ಕನಕಪುರ: ಭ್ರಷ್ಟಾಚಾರ, ಗೂಂಡಾಗಿರಿ, ಸ್ವಜನಪಕ್ಷಪಾತ ಹಾಗೂ ದೌರ್ಜನ್ಯಗಳ ವಿರುದ್ಧ ದನಿಯಾಗಿ ನಿಲ್ಲಲು ಆಮ್ ಆದ್ಮಿ ಪಕ್ಷ ಸಂಸತ್ ಚುನಾವಣೆಗೆ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿಯೂ ಸ್ಪರ್ಧಿಸಲಿದೆ ಎಂದು ಬೆಂಗ್ರಾ ಲೋಕಸಭಾ ಕ್ಷೇತ್ರದ ಎಎಪಿ ಅಭ್ಯರ್ಥಿ ರವಿಕೃಷ್ಣಾರೆಡ್ಡಿ ಹೇಳಿದ್ದಾರೆ. ಅವರು ಕನಕಪುರದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದರು. ಎಎಪಿ ಮುಖಂಡರುಗಳಾದ ಚಂದನ್, ಸುರೇಶ್ ರಾಥೋಡ್, ಮಲ್ಲೇಗೌಡ, ಹರೀಶ್, ಶಿವರೇಣುಕ ಪಾಲ್ಗೊಂಡಿದ್ದರು. ಎಎಪಿ ಅಭ್ಯರ್ಥಿ ರವಿಕೃಷ್ಣಾರೆಡ್ಡಿ ಮಾತನಾಡಿ ಕ್ಷೇತ್ರದಲ್ಲಿ ಹದಗೆಟ್ಟಿರುವ ಕಾನೂನು ಸುವ್ಯವಸ್ಥೆಯನ್ನು ಸಮರ್ಪಕಗೊಳಿಸಲು ಜನರು ಸೂಕ್ತ ನಿರ್ಧಾರ ಕೈಗೊಳ್ಳಬೇಕು. ಸ್ವಹಿತಾಸಕ್ತಿಯ ಭ್ರಷ್ಟ ಅಧಿಕಾರಿಗಳನ್ನು ಬಯಲಿಗೆಳೆಯಬೇಕು, ಭ್ರಷ್ಟ ವ್ಯವಸ್ಥೆಯ ವಿರುದ್ಧ ಸಾರ್ವಜನಿಕ ಆಂದೋಲನ ರೂಪುಗೊಳ್ಳಬೇಕು ಎಂದು ರವಿಕೃಷ್ಣಾರೆಡ್ಡಿ ನುಡಿದರು. ಎಎಪಿ ರಾಜ್ಯ ಉಸ್ತುವಾರಿ ಮುಖಂಡ ಚಂದನ್ ಮಾತನಾಡಿ, ಕಳಂಕಿತರನ್ನು ಹೊರಗಿಡುವುದಾಗಿ ಹೇಳಿದ ಮುಖ್ಯಮಂತ್ರಿ ಸಿದ್ಧರಾಮಯ್ಯ ತಮ್ಮ ರಾಜೀಕಬೂಲಿ ಮನೋಭಾವದಿಂದ ಈಗ ಎಲ್ಲರಿಗೂ ಮಣೆ ಹಾಕುತ್ತಿದ್ದಾರೆ. ಇಂತಹವರಿಂದ ಯಾವ ಬದಲಾವಣೆ ನಿರೀಕ್ಷಿಸಲು ಸಾಧ್ಯ ಎಂದು ಟೀಕಿಸಿದರು.